ಅತಿಯಾದ ಮಾನವನ ಚಟುವಟಿಕೆ ಹಾಗೂ ಸುಸ್ಥಿರವಲ್ಲದ ಅಸಮತೋಲಿತ ಅಭಿವೃದ್ಧಿಯ ಪರಿಣಾಮ ನೈಸರ್ಗಿಕ ಸಂಪನ್ಮೂಲಗಳಿಗೆ ನಿರಂತರವಾಗಿ ಹಾನಿಯಾಗುತ್ತಿದೆ. ಗಾಳಿಯ ಗುಣಮಟ್ಟ ಕುಸಿದಿದೆ, ಹಲವೆಡೆ ನೀರಿಗೆ ಬರ ಎದುರಾಗಿದೆ. ಮಣ್ಣು ಲವತ್ತತೆ ಕಳೆದುಕೊಳ್ಳುತ್ತಿದೆ. ಈಗ ವಿಶ್ವದಾದ್ಯಂತ ಮರಳಿನ ಅಭಾವ ಆತಂಕಕ್ಕೆ ಕಾರಣವಾಗಿದೆ.
ಜಾಗತಿಕವಾಗಿ ಅತಿ ಹೆಚ್ಚು ಗಣಿಗಾರಿಕೆ ಆಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮರಳು ಪ್ರಮುಖವಾದದ್ದು. ಅನಿಯಂತ್ರಿತ ಮರಳು ಎತ್ತುವಳಿ ಮತ್ತು ಅದರಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ) ಕಳವಳ ವ್ಯಕ್ತಪಡಿಸಿದೆ.
ಅನಿಯಂತ್ರಿತ ಮರಳು ಎತ್ತುವಳಿಯಿಂದ ನದಿಗಳು ಬತ್ತುತ್ತವೆ, ನದಿಯ ಮುಖಜ ಭೂಮಿಯ ಲವತ್ತತೆ ನಶಿಸುತ್ತದೆ ಮತ್ತು ಕರಾವಳಿ ಸೀಮೆಗೆ ಹಾನಿ ಕಟ್ಟಿಟ್ಟ ಬುತ್ತಿ ಎಂದು ಯುನ್ಇಪಿ ಎಚ್ಚರಿಕೆ ನೀಡಿದೆ. ಮರಳು ಬಿಕ್ಕಟ್ಟು ದೂರಮಾಡಲು ತುರ್ತು ಕ್ರಿಯಾಯೋಜನೆ ಅವಶ್ಯಕ ಎಂದೂ ಅದು ಪ್ರತಿಪಾದಿಸಿದೆ. ಮರಳು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ನಿಟ್ಟಿನಲ್ಲಿ ಸಾಮೂಹಿಕ ಬದ್ಧತೆ ತೋರಬೇಕಾದ ಅಗತ್ಯವಿದೆ. ಈ ಬಗ್ಗೆ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳು ಇನ್ನೂ ಜಾಣಕುರುಡು ಪ್ರದರ್ಶಿಸಿದರೆ ನಾವೇ ಆಪತ್ತನ್ನು ಆಹ್ವಾನಿಸಿಕೊಂಡಂತೆ.
ಲಕ್ಷಾಂತರ ವರ್ಷಗಳ ಭೌಗೋಳಿಕ ಪ್ರಕ್ರಿಯೆಯಿಂದ ಮರಳು ರೂಪುಗೊಳ್ಳುತ್ತದೆ. ಆದರೆ, ಇದನ್ನು ಬೇಜವಾಬ್ದಾರಿಯಿಂದ ಬರಿದು ಮಾಡುತ್ತಿರುವುದರಿಂದ ಜೀವಸಂಕುಲಕ್ಕೆ ಅಪಾಯ ಎಂಬುದನ್ನು ಮರೆಯುವಂತಿಲ್ಲ. ಮರಳು ಗಣಿಗಾರಿಕೆಯ ದುಷ್ಪರಿಣಾಮಗಳು ಸ್ಪಷ್ಟವಾಗಿ ಗೋಚರವಾಗುತ್ತಿದ್ದರೂ, ಇದನ್ನು ನಿಯಂತ್ರಿಸಲು, ಪರ್ಯಾಯ ಮೂಲಗಳನ್ನು ಕಂಡುಕೊಳ್ಳಲು ಪರಿಣಾಮಕಾರಿ ಹೆಜ್ಜೆ ಇರಿಸಲಾಗಿಲ್ಲ. ನೈಸರ್ಗಿಕ ಸಂಪನ್ಮೂಲಗಳನ್ನು ಪೂರ್ತಿಯಾಗಿ ಖಾಲಿ ಮಾಡದೆ ಅವನ್ನು ಮುಂದಿನ ತಲೆಮಾರುಗಳಿಗೆ ರಸಬೇಕಾದ ಹೊಣೆಗಾರಿಕೆಯೂ ನಮ್ಮ ಮೇಲಿದೆ.
ನದಿ ಮತ್ತು ಕಡಲ ತೀರದಲ್ಲಿ ಉಸುಕು ಎತ್ತುವುದನ್ನು ನಿಷೇಧಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಯುನ್ಇಪಿ ಶಿಾರಸು ಮಾಡಿದೆ. ಕಠಿಣ ಕ್ರಮಗಳತ್ತ ಹೊರಳುವುದು ಅನಿವಾರ್ಯವೂ ಆಗಿದೆ. ಇಲ್ಲದಿದ್ದಲ್ಲಿ, ಪ್ರಾಕೃತಿಕ ವಿಕೋಪಗಳನ್ನು ತಡೆಯುವ ನೈಸರ್ಗಿಕ ರಕ್ಷಣಾ ವಿಧಾನಗಳನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲೂ ಕಳೆದ ಕೆಲ ವರ್ಷಗಳಿಂದ ಮರಳಿನ ಸಮಸ್ಯೆ ಮೀತಿ ಮೀರಿ, ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವುದು ಮತ್ತು ಹಲವು ಕ್ಷೇತ್ರಗಳು ತೊಂದರೆ ಅನುಭವಿಸುತ್ತಿರುವುದು ಗೊತ್ತಿರುವಂಥದ್ದೇ.