ತುಮಕೂರು: ಶಿವಕುಮಾರ ಸ್ವಾಮೀಜಿಗಳ ಜಯಂತಿಯನ್ನು ದಾಸೋಹ ದಿನ ಎಂದು ಈಗಾಗಲೇ ಸರ್ಕಾರ ಆಚರಿಸುತ್ತಿದೆ. ಮಧ್ಯಾಹ್ನದ ಬಿಸಿ ಊಟದ ಯೋಜನೆಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರನ್ನಿಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳ 115ನೇ ಜಯಂತ್ಯುತ್ಸವ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು. ಆಡಳಿತಗಾರರು ಶ್ರೀ ಮಠವನ್ನು ಶ್ರದ್ಧಾ ಭಕ್ತಿಯಿಂದ ಕಂಡಿದ್ದಾರೆ. ನಮ್ಮ ಸರ್ಕಾರವೂ ಅತ್ಯಂತ ಶ್ರದ್ಧೆಯಿಂದ ಕಾಣುತ್ತಿದೆ. ಭಕ್ತಿಯಿಂದ ಬಸವಣ್ಣನವರ ದಾಸೋಹ, ಶಿಕ್ಷಣ, ಆರೋಗ್ಯ ತತ್ತ್ವಗಳಿಗೆ ನಮ್ಮ ಸರ್ಕಾರ ಮಹತ್ವ ನೀಡಿದೆ ಎಂದು ಹೇಳಿದರು.
ಸರ್ವೋದಯ ಕಾರ್ಯಕ್ರಮಕ್ಕೆ 60 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನವನ್ನು ಈ ವರ್ಷದ ಬಜೆಟ್ ನಲ್ಲಿ ಮೀಸಲಿರಿಸಿದೆ. ಜನಕಲ್ಯಾಣಕ್ಕಾಗಿ ಹಾಗೂ ಜನರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ನಿಮ್ಮ ವಿಶ್ವಾಸಗಳಿಸುವ ರೀತಿಯಲ್ಲಿ ಕೆಲಸ ಮಾಡುತ್ತದೆ. ಬಡವರು ದೀನದಲಿತರು, ಹೆಣ್ಣು ಮಕ್ಕಳಿಗೆ ಕಾರ್ಯಕ್ರಮಗಳ ಅನುಷ್ಠಾನ ಮಾಡಿ ನಿಮ್ಮ ಪ್ರೀತಿ ವಿಶ್ವಾಸವನ್ನುಗಳಿಸಿ ನಿಮ್ಮ ಮುಂದೆ ಬರುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸಚಿವರ ಆಗಮನ ನಮ್ಮಲ್ಲಿ ಸಂಚಲನ ಮೂಡಿಸಿದೆ. ಜನರು ಅವರ ಮೇಲೆ ಪ್ರೀತಿ ಇರಿಸಿದ್ದಾರೆ. ಇಲ್ಲಿಗೆ ಬಂದರೆ ಮನಸ್ಸಿಗೆ ಶಾಂತಿ, ಬದುಕಿಗೆ ದಾರಿ ಸಿಗುವ ಶಕ್ತಿ ಇದೆ. ಅದೇ ದಾರಿಯಲ್ಲಿ ಸಿದ್ದಲಿಂಗಸ್ವಾಮಿಗಳು ಶಿವಕುಮಾರ ಸ್ವಾಮಿಗಳ ಪರಂಪರೆಯನ್ನು ಅತ್ಯಂತ ಪ್ರಾಮಾಣಿಕವಾಗಿ ದಕ್ಷತೆಯಿಂದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಯೋಗ್ಯವಾಗಿ ಮುನ್ನಡೆಸುತ್ತಿದ್ದಾರೆ ಎಂದು ಕೊಂಡಾಡಿದರು.
Laxmi News 24×7