ಹುಬ್ಬಳ್ಳಿ: ಬಡ್ಡಿಗೆ ಪಡೆದ ಹಣ ಮರಳಿ ನೀಡದ, ಕೌಟುಂಬಿಕ ಕಲಹ, ಪ್ರೀತಿ ನಿರಾಕರಣೆ, ಮದ್ಯದ ನಶೆ, ಅನೈತಿಕ ಸಂಬಂಧ…
ಹೀಗೆ ಹುಬ್ಬಳ್ಳಿ ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಬರೋಬ್ಬರಿ 188 ಮಂದಿ ಹತ್ಯೆಯಾಗಿದ್ದಾರೆ.
ಹು-ಧಾ ಪೊಲೀಸ್ ಕಮಿಷನರೇಟ್‌ನಲ್ಲಿ 88 ಮಂದಿ, ಧಾರವಾಡ ಜಿಲ್ಲೆಯ ವಿವಿಧೆಡೆ 100 ಮಂದಿ ಹತರಾಗಿದ್ದಾರೆ.
ಬಹುತೇಕ ಕೊಲೆಗಳಿಗೆ ದ್ವೇಷ ಹಾಗೂ ಹಣಕಾಸಿನ ವ್ಯವಹಾರ ಕಾರಣವಾಗಿದ್ದರೆ, ಕೆಲವು ಕೊಲೆಗಳು ವರದಕ್ಷಿಣೆ, ಕೌಟುಂಬಿಕ ಕಲಹ, ಪ್ರೀತಿ-ಪ್ರೇಮ, ಮದ್ಯದ ನಶೆಯಿಂದಲೂ ನಡೆದಿವೆ. ದ್ವೇಷ, ಪ್ರತಿಷ್ಠೆಗೂ ಕೆಲವು ರೌಡಿಗಳು ಬಲಿಯಾಗಿದ್ದಾರೆ. ಅತ್ಯಾಚಾರ ಮಾಡಿ, ಕೆಲವು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ.
‘ಐದಾರು ವರ್ಷಗಳ ಹಿಂದೆ ದಾಖಲಾದ ಬಹುತೇಕ ಕೊಲೆ ಪ್ರಕರಣಗಳ ವಿಚಾರಣೆ ಮುಗಿದು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇತ್ತೀಚೆಗಿನ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಸಾಕ್ಷಿಗಳನ್ನು ಸಂಗ್ರಹಿ ಕೋರ್ಟ್‌ಗೆ ದೋಷರೋಪ ಪಟ್ಟಿ ಸಲ್ಲಿಸುತ್ತಿದ್ದಾರೆ. ರಾಜಕೀಯ ಹಿನ್ನೆಲೆಯಲ್ಲಿಯೂ ಹತ್ಯೆ ನಡೆಯುತ್ತವೆ. ಸಾರ್ವಜನಿಕರ ಹಾಗೂ ಕುಟುಂಬದವರ ಒತ್ತಾಯದ ಮೇರೆಗೆ ಕೆಲವು ಪ್ರಕರಣಗಳನ್ನು ಮೇಲ್ಮಟ್ಟದ ತನಿಖಾ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ಹೇಳುತ್ತಾರೆ.
‘ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಹುತೇಕ ಎಲ್ಲ ಪ್ರಕರಣಗಳನ್ನು ತನಿಖಾಧಿಕಾರಿ ಭೇದಿಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಆದರೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿ ಅಪರಾಧಿಯೆಂದು ಸಾಬೀತಾಗಲು ಸಮಯ ತೆಗೆದುಕೊಳ್ಳುತ್ತದೆ. ಕೆಲವು ಬಾರಿ ಹತ್ಯೆಗೆ ಸಂಬಂಧಿಸಿ ಪೂರಕ ಸಾಕ್ಷಿಗಳು ಲಭ್ಯವಾಗುವುದಿಲ್ಲ. ಆರೋಪಿ ಸಹ ಕೊನೆ ಸಮಯದಲ್ಲಿ ಹೇಳಿಕೆ ಬದಲಿಸಿ ಬಿಡುತ್ತಾನೆ. ಇದರಿಂದಾಗಿ ಕೆಲವು ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲು ವಿಳಂಬವಾಗುತ್ತದೆ’ ಎನ್ನುವುದು ಪೊಲೀಸರ ಅಭಿಪ್ರಾಯ.
ಪೊಲೀಸ್ ಠಾಣೆಗಳಲ್ಲಿನ ರೌಡಿ ಪಟ್ಟಿಯಲ್ಲಿದ್ದ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ, ಫ್ರೂಟ್ ಇರ್ಫಾನ್, ಅಕ್ಬರ್ ಮುಲ್ಲಾ ಸೇರಿದಂತೆ ಜಿಲ್ಲೆಯಲ್ಲಿನ ಐವರು ರೌಡಿಗಳು ಸಹ ಹತ್ಯೆಯಾಗಿದ್ದಾರೆ. ರಾಜಕೀಯ, ಪ್ರತಿಷ್ಠೆ ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಅವರ ಹತ್ಯೆ ನಡೆದಿದೆ.
Laxmi News 24×7