ನವದೆಹಲಿ: ಬೆಲೆ ಏರಿಕೆ ಆಘಾತದಿಂದ ಈಗಾಗಲೇ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಮತ್ತೊಂದು ಸುತ್ತಿನ ದುಬಾರಿ ಬರೆ ಬೀಳುವುದು ಖಚಿತವಾಗಿದೆ. ಸಗಟು ಮತ್ತು ಚಿಲ್ಲರೆ ಮಾರಾಟ ಹಣದುಬ್ಬರದ ದರ ಏರಿಕೆಯಾದ ಬೆನ್ನಲ್ಲೇ ದಿನಬಳಕೆಯ ಶೀಘ್ರ ಬಿಕರಿಯಾಗುವ ಗ್ರಾಹಕ ಸರಕುಗಳ (ಎಫ್ಎಂಸಿಜಿ) ಬೆಲೆಯನ್ನು ಶೇ.10 ಹೆಚ್ಚಿಸಲು ತಯಾರಿಕಾ ಕಂಪನಿಗಳು ಮುಂದಾಗಿವೆ.
ಕೆಲವು ಕಂಪನಿಗಳು ಈಗಾಗಲೇ ಏರಿಕೆ ಮಾಡಿಯೂ ಆಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣ ಕಳೆದ ಜನವರಿಯಲ್ಲಿ ಎಫ್ಎಂಸಿಜಿ ಬೆಲೆ ಪರಿಷ್ಕರಣೆ ಆಗಿತ್ತು. ಈಗ ಮತ್ತೊಂದು ಸುತ್ತು ದರ ಏರಿಕೆಯಿಂದ ಬಳಕೆದಾರರಿಗೆ ನಿತ್ಯದ ಅಗತ್ಯ ವಸ್ತುಗಳು ಬಲು ದುಬಾರಿಯಾಗಲಿವೆ.
ಆಹಾರೋತ್ಪನ್ನ ಶಾಕ್: ಎಚ್ಯುುಎಲ್ ಮತ್ತು ನೆಸ್ಲೆ ಕಂಪನಿಗಳು ಆಹಾರೋತ್ಪನ್ನ ಮತ್ತು ಕಾಫಿ/ಟೀ ಉತ್ಪನ್ನಗಳ ಬೆಲೆಯನ್ನು ಕಳೆದ ವಾರ ಶೇ. 9ರಿಂದ 16ರವರೆಗೆ ಹೆಚ್ಚಳ ಮಾಡಿವೆ. ಡಾಬರ್, ಪಾರ್ಲೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹಣದುಬ್ಬರದ ಹೊಡೆತವನ್ನು ತಗ್ಗಿಸಲು ಬೆಲೆ ಏರಿಕೆಯ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿವೆ. ಶೇ. 10ರಿಂದ 15 ದರ ಏರಿಕೆ ಆಗುವ ಸುಳಿವನ್ನು ಪಾರ್ಲೆ ಕಂಪನಿಯ ಹಿರಿಯ ಅಧಿಕಾರಿ ಮಯಾಂಕ್ ಷಾ ನೀಡಿದ್ದಾರೆ.ಕಳೆದ ದರ ಪರಿಷ್ಕರಣೆ ವೇಳೆ ಕಂಪನಿಗಳು ಘೋಷಿಸಿದಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿರಲಿಲ್ಲ. ಅಂದರೆ, ಶೇ. 10 ಬೆಲೆ ಏರಿಕೆ ಘೋಷಿಸಿದ್ದರೂ, ಆರೇಳು ಪ್ರತಿಶತವನ್ನಷ್ಟೇ ಹೆಚ್ಚಿಸಿದ್ದವೆ. ಆದರೆ, ಈ ಸಾರಿ ಹೆಚ್ಚು ಉದಾರವಾಗಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇತರ ಕಾರಣ?: ರಷ್ಯಾ – ಯೂಕ್ರೇನ್ ಯುದ್ಧದ ಪರಿಣಾಮ ಖಾದ್ಯ ತೈಲ ಮತ್ತು ಗೋಧಿ ಬೆಲೆ ಏರಿಕೆ ಆಗಿರುವುದು ಎಫ್ಎಂಸಿಜಿ ಕಂಪನಿಗಳಿಗೆ ದೊಡ್ಡ ಹೊಡೆತ ನೀಡಿದೆ. ಈ ಕಾರಣದಿಂದಲೂ ಅವು ದರ ಪರಿಷ್ಕರಣೆ ಮಾಡಲು ಮುಂದಾಗಿವೆ.
ಹಣದುಬ್ಬರ ಆಘಾತ: ಹಣದುಬ್ಬರ ಪ್ರಮಾಣವು ಸತತ ಎರಡನೇ ವರ್ಷವೂ ಉದ್ಯಮವನ್ನು ಕಂಗೆಡಿಸಿದೆ. ಕಚ್ಚಾ ವಸ್ತು ಮತ್ತು ಉತ್ಪಾದನಾ ವೆಚ್ಚ ಏರಿಕೆಯಿಂದ ಪಾದರ್ಥಗಳ ಬೆಲೆಯನ್ನು ಕಂಪನಿಗಳು ಹೆಚ್ಚಿಸಬೇಕಾಗುತ್ತದೆ. ಇದೇ ವೇಳೆ ಗ್ರಾಹಕರಲ್ಲಿ ಕೊಳ್ಳುವ ಶಕ್ತಿಯೂ ಕಡಿಮೆ ಆಗುತ್ತದೆ. ಇದು ಉತ್ಪಾದನೆಯನ್ನು ಕಡಿಮೆ ಮಾಡುವ ಒತ್ತಡಕ್ಕೆ ಕಂಪನಿಗಳನ್ನು ನೂಕುತ್ತದೆ. ಕೋವಿಡ್ ಸಾಂಕ್ರಾಮಿಕದ ಕಟ್ಟುಪಾಡಿನ ಕಾರಣ ಸೊರಗಿದ್ದ ಮಾರುಕಟ್ಟೆಯು ಈಗ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ, ಹಣದುಬ್ಬರವು ಗ್ರಾಹಕರು ಮತ್ತು ಉದ್ಯಮಗಳನ್ನು ಕಟ್ಟಿಹಾಕುತ್ತಿವೆ ಎಂದು ಡಾಬರ್ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಅಂಕುಶ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.
ಒತ್ತಡದಲ್ಲಿ ಕಂಪನಿಗಳು: ಎಫ್ಎಂಸಿಜಿ ಕಂಪನಿಗಳು ಮುಂದಿನ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಕನಿಷ್ಠವೆಂದರೂ ಶೇ. 3ರಿಂದ 5 ಬೆಲೆ ಏರಿಕೆ ಮಾಡುವ ಒತ್ತಡಕ್ಕೆ ಸಿಲುಕಿಕೊಂಡಿವೆ. ಅವುಗಳಿಗೆ ಆಗುತ್ತಿರುವ ನಷ್ಟವನ್ನು ಗ್ರಾಹಕರಿಗೆ ದಾಟಿಸಬೇಕಾದ ಅನಿವಾರ್ಯಕ್ಕೆ ಒಳಗಾಗಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬೃಹತ್ ಬಳಕೆದಾರರಿಗೆ ಡೀಸೆಲ್ ಏರಿಕೆ ಶಾಕ್: ನವದೆಹಲಿ: ಕಳೆದ ನವೆಂಬರ್ ಮೊದಲ ವಾರದ ನಂತರ ಇದೇ ಮೊದಲ ಬಾರಿಗೆ ಇಂಧನ ದರ ಪರಿಷ್ಕರಣೆ ಆಗಿದ್ದು, ಇದು ಬೃಹತ್ (ಬಲ್ಕ್) ಬಳಕೆದಾರರಿಗೆ ಅನ್ವಯ ವಾಗುವಂತೆ ಪ್ರತಿ ಲೀಟರ್ ಡೀಸೆಲ್ಗೆ 25 ರೂ. ಏರಿಕೆ ಮಾಡಲಾಗಿದೆ. ಆದರೆ, ಪೆಟ್ರೋಲ್ ಬಂಕ್ಗಳಲ್ಲಿ ಚಿಲ್ಲರೆ ಮಾರಾಟದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಹೀಗಾಗಿ ಚಿಲ್ಲರೆ ಡೀಸೆಲ್ ಮಾರಾಟ ಐದು ಪಟ್ಟು ಹೆಚ್ಚಳ ಆಗಿದೆ. ದೆಹಲಿಯ ಪೆಟ್ರೋಲ್ ಬಂಕ್ಗಳಲ್ಲಿ ಪ್ರತಿ ಲೀಟರ್ ಡೀಸೆಲ್ 86.67 ರೂ.ಗೆ ದೊರೆಯುತ್ತಿದ್ದರೆ, ಬಲ್ಕ್ ಖರೀದಿಯಲ್ಲಿ ಇದರ ದರ 115 ರೂ. ಆಗಿದೆ. ಮುಂಬೈನಲ್ಲಿ ಬಲ್ಕ್ ಡೀಸೆಲ್ ದರ 122.05 ರೂ. ಮುಟ್ಟಿದ್ದರೆ, ಪೆಟ್ರೋಲ್ ಬಂಕ್ಗಳಲ್ಲಿ ಇದರ ದರ 94.14 ರೂ. ಇದೆ.
ಯೂಕ್ರೇನ್-ರಷ್ಯಾ ಯುದ್ಧದ ಕಾರಣ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ. 40ರವರೆಗೆ ಏರಿಕೆ ಆಗಿದ್ದರೂ, ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿದ್ದ ಕಾರಣ ಭಾರತದಲ್ಲಿ ಇಂಧನ ತೈಲ ದರ ಪರಿಷ್ಕರಣೆ ಆಗಿರಲಿಲ್ಲ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾದ ನಂತರ ಪ್ರತಿ ಲೀಟರ್ ಇಂಧನಕ್ಕೆ ಕನಿಷ್ಠ 12 ರೂ. ಏರಿಕೆ ಆಗುತ್ತದೆ ಎಂದು ಹೇಳಲಾಗಿತ್ತಾದರೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿರಲಿಲ್ಲ.