ಬೆಂಗಳೂರು,ಮಾ.13- ಕಾಂಗ್ರೆಸ್ ತೊರೆದು ಪಕ್ಷ ಸೇರ್ಪಡೆಯಾಗಲಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರಿಗೆ ಗೌರವಯುತ ಸ್ಥಾನ ನೀಡಲು ಜೆಡಿಎಸ್ ಉದ್ದೇಶಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಣೆ ಮಾಡಿದ ಬಳಿಕ ಇಬ್ರಾಹಿಂ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಜೆಡಿಎಸ್ ಜೊತೆ ಚರ್ಚೆ ನಡೆಸಿದರು.
ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ನೀಡುವ ಸ್ಥಾನಮಾನ, ಪಕ್ಷ ಸಂಘಟನೆ, ಮುಂಬರುವ ಚುನಾವಣೆ ಹಾಗೂ ತಮ್ಮ ಬೆನ್ನ ಹಿಂದೆಯೇ ಇತರರು ಸೇರ್ಪಡೆಯಾಗುವುದು ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ನಿನ್ನೆ ರಾತ್ರಿ ಸಮಾಲೋಚನೆ ನಡೆಸಿದ್ದಾರೆ.
ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಇಬ್ರಾಹಿಂ ಅವರು ಆ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗಿದೆ. ಹೀಗಾಗಿ ಜೂನ್‍ನಲ್ಲಿ ನಡೆಯುವ ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚೆಯಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇಬ್ರಾಹಿಂ ಸೇವೆಯನ್ನು ಹೆಚ್ಚಾಗಿ ಬಳಸಿಕೊಳ್ಳಳಲು ಉದ್ದೇಶಿಸಿದ್ದು, ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಸೇರ್ಪಡೆಯ ದಿನಾಂಕವನ್ನು ಇನ್ನು ಅಂತಿಮಗೊಳಿಸಿಲ್ಲ. ಎರಡುಮೂರು ದಿನದಲ್ಲಿ ಇಬ್ರಾಹಿಂ ಅವರನ್ನು ಗೌರವಯುತವಾಗಿ ಸೇರ್ಪಡೆ ಮಾಡಿಕೊಳ್ಳುವ ದಿನಾಂಕ ನಿಗದಿಪಡಿಸಲಾಗುತ್ತದೆ.ದೇವೇಗೌಡರ ಆಪ್ತರಾಗಿರುವ ಇಬ್ರಾಹಿಂ ಮರಳಿ ಪಕ್ಷಕ್ಕೆ ಬರುತ್ತಿರುವುದರಿಂದ ಇನ್ನಷ್ಟು ಪಕ್ಷದ ಬಲ ವೃದ್ದಿಸಲಿದೆ ಎಂಬ ಅಭಿಪ್ರಾಯವನ್ನು ವರಿಷ್ಠರು ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಎಚ್.ಕೆ.ಕುಮಾರಸ್ವಾಮಿ ಅವರನ್ನು ಸದ್ಯಕ್ಕೆ ಬದಲಾವಣೆ ಮಾಡುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿ ಇಬ್ರಾಹಿಂ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಈಗಾಗಲೇ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
Laxmi News 24×7