ಬಜೆಟ್ ಎಂದಾಕ್ಷಣ ಜನ ಸಾಮಾನ್ಯರಿಂದ ಹಿಡಿದು ಉದ್ಯಮಿಗಳ ತನಕ ಹತ್ತು ಹಲವು ನಿರೀಕ್ಷೆಗಳು ಗರಿಗೆದ ರುವುದು ಸಹಜ. ಇಂಥದ್ದೆ ನಿರೀಕ್ಷೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್ ಮೇಲೂ ಇದೆ.
ಮೊದಲಿಂದಲೂ ರೈತ ಸಮುದಾಯಕ್ಕೆ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಂಗಾರಪ್ಪ, ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ, ಜೆಡಿಎಸ್ ಅಧಿಕಾರದಲ್ಲಿದ್ದಾಗ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ವಿಶೇಷ ಕಾಳಜಿ ವಹಿಸಿದ್ದಾರೆ. ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, ಸಬ್ಸಿಡಿ ನೀಡುವ ಕಾರ್ಯಕ್ರಮ, ಸಾಲಮನ್ನಾ ಯೋಜನೆಗಳು ಆಯಾ ಕಾಲಘಟ್ಟಕ್ಕೆ ಸರ್ಕಾರದ ಜನಪ್ರಿಯತೆ ಹೆಚ್ಚಿಸಲು ಕಾರಣವಾಗಿವೆ. ವಿದ್ಯಾರ್ಥಿಗಳಿಗಾಗಿ ತಂದ ಯೋಜನೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಸೈಕಲ್, ಲ್ಯಾಪ್ಟಾಪ್ ಉಚಿತ ವಿತರಣೆ ಯೋಜನೆಗಳು ಪ್ರಮುಖ ವಾದವು. ತಳ ಸಮುದಾಯಗಳು, ಹಿಂದುಳಿದ ವರ್ಗಗಳು, ಎಸ್ಸಿ,ಎಸ್ಟಿ, ನಾನಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿಯೂ ಹಲವು ಯೋಜನೆಗಳು ರೂಪು ಗೊಂಡಿದ್ದು ಬಜೆಟ್ನಲ್ಲಿ ಘೋಷಣೆ ಮಾಡಿ, ಅದನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡ ನಿದರ್ಶನಗಳು ಇವೆ. ಆಯಾ ಸಂದ ರ್ಭಕ್ಕೆ ಎಲ್ಲ ವರ್ಗಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಬಜೆಟ್ನಲ್ಲಿ ಯಾವ ವರ್ಗದ ನಿರೀಕ್ಷೆಗಳು ಏನೇನು ಎನ್ನುವ ಚಿತ್ರಣ ಇಲ್ಲಿದೆ.
ರೈತ ಸಮುದಾಯ: ರಾಗಿ, ಭತ್ತ, ಜೋಳ, ಕಬ್ಬು, ತೊಗರಿ, ಕೊಬ್ಬರಿ ಸೇರಿ ಎಲ್ಲ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು. ಖರೀದಿ ಆವರ್ತ ನಿಧಿ ಮೊತ್ತವನ್ನು ಸಾವಿರ ಕೋಟಿ ರೂ.ಗೆ ಏರಿಕೆ ಮಾಡಬೇಕು. ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ನಿಖರ ಬೆಲೆ ಸಿಗುವ ವ್ಯವಸ್ಥೆ ಆಗಬೇಕು. ಕೃಷಿ ಸಾಮಗ್ರಿ ಮತ್ತು ಯಂತ್ರೋಪಕರಣಗಳಿಗೆ ನೀಡುತ್ತಿರುವ ಸಬ್ಸಿಡಿ ಪ್ರಮಾಣವನ್ನು ಹೆಚ್ಚಳ ಮಾಡಿ ಹೆಚ್ಚು ಜನರಿಗೆ ತಲುಪುವಂತೆ ಮಾಡಬೇಕು. ಉಚಿತವಾಗಿ ಬಿತ್ತನೆ ಬೀಜ ನೀಡಬೇಕು. ರಸಗೊಬ್ಬರಕ್ಕೆ ಹೆಚ್ಚು ಸಬ್ಸಿಡಿ ನೀಡಬೇಕು. ರೈತರ ಪಹಣಿ, ಪಟ್ಟಾ ಸೇರಿ ಎಲ್ಲ ದಾಖಲೆಗಳು ಸರಳವಾಗಿ ಮನೆ ಬಾಗಿಲಿಗೆ ಸಿಗುವ ವ್ಯವಸ್ಥೆ ಮಾಡಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು.
ವಿದ್ಯಾರ್ಥಿಗಳ ನಿರೀಕ್ಷೆಗಳೇನು?: ಬೊಮ್ಮಾಯಿ ಮುಖ್ಯ ಮಂತ್ರಿ ಗದ್ದುಗೆ ಅಲಂಕರಿಸುತ್ತಿದ್ದಂತೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಘೋಷಣೆ ಮಾಡಿದ ಯೋಜನೆಗೆ ಜನಮನ್ನಣೆ ಸಿಕ್ಕಿದೆ. ಈ ಯೋಜನೆಯಲ್ಲಿ ನೀಡುತ್ತಿರುವ ಪ್ರೋತ್ಸಾಹಧನ ದುಪ್ಪಟ್ಟು ಮಾಡಬೇಕು. ಕೆಲ ವರ್ಗಗಳಿಗೆ ಮಾತ್ರವೇ ಸೀಮಿತ ಮಾಡಿರುವ ಯೋಜನೆಗಳನ್ನು ಎಲ್ಲ ವಿದ್ಯಾರ್ಥಿ ಗಳಿಗೂ ವಿಸ್ತರಣೆ ಮಾಡಬೇಕು. ಉನ್ನತ ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ಶಾಲಾ ಕಾಲೇಜುಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಿ, ಲೈಬ್ರರಿ, ಕಂಪ್ಯೂಟರ್ ಸಹಿತ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಬೋಧನಾ ಮಟ್ಟ ಹೆಚ್ಚಿಸಲು ಕ್ರಮ ವಹಿಸಬೇಕು.
ಎಸ್ಸಿಎಸ್ಟಿ ಸಮುದಾಯದ ಆದ್ಯತೆ: ಜನಸಂಖ್ಯೆ ಆಧಾರದ ಮೇಲೆ ಬಜೆಟ್ ಅನುದಾನ ನಿಗಧಿಯಾಗಬೇಕು ಎನ್ನುವುದನ್ನು ಕಾರ್ಯಗತ ಮಾಡಬೇಕು. ಎಲ್ಲ ನಿಗಮಗಳಿಗೂ ಹೆಚ್ಚಿನ ಅನುದಾನ ನೀಡಬೇಕು. ಜಮೀನು ಖರೀದಿಗಾಗಿ ನೀಡುವ ಮೊತ್ತ ಹೆಚ್ಚಿಸಿ, ಹೆಚ್ಚು ಜನ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕು. ವಸತಿ ಹೀನರಿಗೆ ಉಚಿತವಾಗಿ ಮನೆ ಕೊಡಬೇಕು. ನಿಗಮ ಮಂಡಳಿಗಳಲ್ಲಿ ಸಾಲ ಸೌಲಭ್ಯ ಹೆಚ್ಚಿಸಬೇಕು. ಕಾಮಗಾರಿಗಳಿಗಾಗಿ ಗುತ್ತಿಗೆಯಲ್ಲಿ ತಂದಿರುವ ಮೀಸಲು ವ್ಯವಸ್ಥೆ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಬೇಕು.
ತಳ ಸಮುದಾಯಗಳು ನಿರೀಕ್ಷೆ: ಚುನಾವಣೆ ಸಂದರ್ಭದಲ್ಲಿ ಮಾತ್ರವೇ ನೆನಪಿಗೆ ಬರುವ ತಳ ಸಮುದಾಯಗಳ ಅಭಿವೃದ್ಧಿಗೆ ಯಾವ ಸರ್ಕಾರಗಳು ಹೆಚ್ಚಿನ ನೆರವು ನೀಡುತ್ತಿಲ್ಲ ಎನ್ನುವ ನೋವು ಆ ವರ್ಗಗಳಲ್ಲಿದೆ. ಕೆಲ ಸಮುದಾಯದ ಅಭಿವೃದ್ಧಿಗಾಗಿ ಪ್ರಾರಂಭ ಮಾಡಿರುವ ನಿಗಮ ಮಂಡಳಿಗಳು ಅನುದಾನವಿಲ್ಲದೆ ಸೊರಗುತ್ತಿವೆ. ಈ ಬಜೆಟ್ನಲ್ಲಿ ಹೆಚ್ಚಿನ ನೆರವು ನೀಡಲು ಮುಂದಾಗಬೇಕು. ಈಗಾಗಲೆ ಹಲವು ಯೋಜನೆಗಳಲ್ಲಿ ನೀಡಿರುವ ಸಾಲ ಸಂರ್ಪರ್ಣ ಮನ್ನಾ ಮಾಡಬೇಕು.
ಉದ್ಯಮಿಗಳ ಬೇಡಿಕೆ: ಕೈಗಾರಿಕೆ, ಸಾರಿಗೆ ಸೇರಿ ನಾನಾ ಉದ್ಯಮಗಳು ಕೋವಿಡ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಆ ಸಂದರ್ಭದಲ್ಲಿ ಘೋಷಣೆ ಮಾಡಲಾಗಿದ್ದ ರಿಯಾಯಿತಿಗಳನ್ನು ಇನ್ನೊಂದು ವರ್ಷ ಮುಂದುವರಿಸಬೇಕು. ನಷ್ಟದ ಕಾರಣಕ್ಕೆ ಬಹಳ ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಹೊಸ ಸಾಲ ನೀತಿ ಸರಳೀಕರಣ ಮಾಡಬೇಕು. ಜಿಎಸ್ಟಿ ಬಂದ ಮೇಲೆ ಹಲವು ಸಮಸ್ಯೆಗಳು ಎದುರಾಗಿವೆ. ತೆರಿಗೆ ಹೆಚ್ಚಳವಾಗಿದ್ದು, ಕೈಗಾರಿಕೆ ನಡೆಸುವುದು ಕಷ್ಟವಾಗಿದೆ. ಅದಕ್ಕೆ ಪರಿಹಾರ ಮಾರ್ಗಗಳನ್ನು ಕಂಡು ಹಿಡಿದು, ತೆರಿಗೆ ಹೊರೆಯನ್ನು ಕೂಡಲೆ ಇಳಿಸಬೇಕು.
ಕೂಲಿ ಕಾರ್ವಿುಕರ ಬೇಡಿಕೆ: ಕೂಲಿ ಕಾರ್ವಿುಕರಿಗಾಗಿ ತಂದ ಯೋಜನೆಗಳು ಹೆಚ್ಚು ಜನರನ್ನು ಮುಟ್ಟಲು ಸಾಧ್ಯವಾಗಿಲ್ಲ. ಅದಕ್ಕಾಗಿ ಬಜೆಟ್ನಲ್ಲಿ ಹೆಚ್ಚು ಅನುದಾನವಿಟ್ಟು ಶ್ರಮಿಕ ವರ್ಗಕ್ಕೆ ಸಿಗುವಂತೆ ನೋಡಿಕೊಳ್ಳಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ಕೂಲಿ ಕಾರ್ವಿುಕರಿಗಾಗಿ ಪ್ರತ್ಯೇಕ ವಸತಿ ಯೋಜನೆ ರೂಪಿಸಿ ಎಲ್ಲರಿಗೂ ಮನೆ ಸಿಗುವಂತೆ ಮಾಡಬೇಕು. ಸರ್ಕಾರವೇ ಪ್ರೀಮಿಯಂ ಕಟ್ಟುವ ಉಚಿತ ಜೀವ ವಿಮೆ ಯೋಜನೆ ತರಬೇಕು.