ಬೆಂಗಳೂರು: ವಿಧಾನಮಂಡಲ ಅಧಿವೇಶನ ರಾಜಕೀಯ ಮೇಲಾಟದಲ್ಲಿ ಮಂಗಳವಾರವೇ ಕೊನೆಗೊಳ್ಳುವುದು ಖಚಿತವಾಗಿದೆ. ಪ್ರತಿಪಕ್ಷದ ಹಠ, ಆಡಳಿತ ಪಕ್ಷದ ಧಾವಂತ ಈ ಬೆಳವಣಿಗೆಗೆ ಪುಷ್ಟಿ ನೀಡಿದೆ. ಕಲಾಪ ಸುಸೂತ್ರವಾಗಿ ನಡೆಯದ ವಾತಾವರಣ ಸೋಮವಾರವೂ ಮರುಕಳಿಸಿತು.
ಈ ನಡುವೆ, ಕಿಂಚಿತ್ತೂ ಚರ್ಚೆ ಇಲ್ಲದೆ ನಾಲ್ಕು ಮಹತ್ವದ ವಿಧೇಯಕಗಳ ಅನುಮೋದನೆ ಪ್ರಕ್ರಿಯೆಗೂ ವಿಧಾನಸಭೆ ಸಾಕ್ಷಿಯಾಯಿತು. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮೇಲಾಟ ಮಂಗಳವಾರ ರಾಜಭವನ ತಲುಪಲಿದೆ. 5 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ಶಾಸಕರು ಮಂಗಳವಾರ ಸಂಜೆ ವಿಧಾನಸೌಧದಿಂದ ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಲಿದ್ದಾರೆ. ಇದರೊಟ್ಟಿಗೆ ವರ್ಷದ ಆರಂಭದ ಅಧಿವೇಶನವು ಪ್ರತಿಪಕ್ಷದ ಅಸಹಕಾರದೊಂದಿಗೆ ಕೊನೆಗೊಳ್ಳುತ್ತಿದೆ. ಜನರ ನಿರೀಕ್ಷೆ ಹಿನ್ನೆಡೆಗೆ ಸರಿದಂತಾಗಿದೆ. ಸೋಮವಾರ ಕಲಾಪ ಆರಂಭವಾಗುವ ಮುನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನ
ಪ್ರಮುಖ ನಾಯಕರೊಂದಿಗೆ ಸಮಾಲೋಚಿಸಿ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಕೋರಿದರು. ಆದರೆ, ಈ ಪ್ರಯತ್ನ ಫಲಕೊಡಲಿಲ್ಲ. ಪ್ರಶ್ನೋತ್ತರ ಕಲಾಪ ಗದ್ದಲದಲ್ಲೇ ನಡೆಯಿತು. ಬಿಜೆಪಿ, ಜೆಡಿಎಸ್ ಶಾಸಕರ ಪ್ರಶ್ನೆಗಳಿಗೆ ಸಚಿವರುಗಳು ಉತ್ತರ ನೀಡಿದರು. ಕಾಂಗ್ರೆಸ್ ಶಾಸಕರು ಘೋಷಣೆ ಹಾಕುತ್ತಲೇ ಸ್ಪೀಕರ್ ಪೀಠದ ಮುಂದೆ ಧರಣಿ ನಿರತರಾಗಿದ್ದರು. ಬಳಿಕ ವಿಧೇಯಕಗಳ ಪರ್ಯಾಲೋಚನೆ ಪ್ರಕ್ರಿಯೆ ಆರಂಭವಾದಾಗ ಸ್ಪೀಕರ್ ಪುನಃ ಧರಣಿ ನಿರತರನ್ನು ಮನವೊಲಿಸಲು ಯತ್ನಿಸಿದರು. ಅಭಿಪ್ರಾಯಭೇದ ಇದ್ದೇ ಇರುತ್ತದೆ, ವಿಧೇಯಕದ ಬಗ್ಗೆ ರ್ಚಚಿಸಿ ಎಂದು ಕೇಳಿಕೊಂಡರೂ ಕೈ ಶಾಸಕರು ಹಠ ಬಿಡಲಿಲ್ಲ. ‘ಧ್ವಜ’ ಪ್ರಕರಣದಲ್ಲಿ ಪ್ರತಿಪಕ್ಷ, ಆಡಳಿತ ಪಕ್ಷದ ನಡುವಿನ ಹಗ್ಗ ಜಗ್ಗಾಟ ಮುಂದುವರಿ ದಿದ್ದು, ಮೇಲ್ಮನೆಯಲ್ಲಿ ಕಾಂಗ್ರೆಸ್ನ ಧರಣಿ, ಗದ್ದಲದಿಂದ ಕಲಾಪ ಸರಿಯಾಗಿ ನಡೆಯಲಿಲ್ಲ.
ಸದನ ಸುಸೂತ್ರವಾಗಿ ನಡೆಯುವುದಕ್ಕೆ ಸಹಕರಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಕೋರಿದರು. ಅಧಿವೇಶನ ಫೆ.14ರಂದು ಶುರುವಾಗಿದ್ದು, ಈವರೆಗೆ ಕೇವಲ 11 ಗಂಟೆಗಳ ಚರ್ಚೆಯಾಗಿದೆ ಎಂದು ಬೇಸರ ಹೊರಹಾಕಿದರು. ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಶಿವಮೊಗ್ಗದ ಹತ್ಯೆ ಘಟನೆ ಬಗ್ಗೆ ಪ್ರಸ್ತಾಪಿಸಿ, ಸಚಿವ ಈಶ್ವರಪ್ಪ ಅವರೇ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಈ ಕೊಲೆ ಮಾಡಿಸಿದ್ದಾರೆ ಎಂದು ಅರೋಪಿಸಿದಾಗ ಬಿಜೆಪಿ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು. ಈ ವಿಷಯವನ್ನು ಯಾವ ರೂಪದಲ್ಲಿ ಪ್ರಸ್ತಾಪಿಸುತ್ತಿದ್ದೀರಿ? ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಕೇಳಿದರು. ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಬಿಡುತ್ತಿಲ್ಲವೆಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ಸಭಾನಾಯಕರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದೇನೆ, ಕೇಳೋಣ ಸುಮ್ಮನಿರಿ ಎಂದು ಸಭಾಪತಿ ಸಲಹೆ ನೀಡಿದರು.