ಬೆಂಗಳೂರು: ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ಪೈಪೋಟಿ ಶುರುವಾಗಿದ್ದು, ಘಟಾನುಘಟಿಗಳು ಸ್ಪರ್ಧೆಯಲ್ಲಿದ್ದಾರೆ. ಈ ಹುದ್ದೆಗೆ ಮಾನದಂಡ ಪಕ್ಷ ನಿಷ್ಠೆಯಾ ಅಥವಾ ವಿವಾದಾತ್ಮಕ ವ್ಯಕ್ತಿತ್ವವಾ ಎಂಬ ವಿಷಯ ಹೈಕಮಾಂಡ್ ಅಂಗಳ ತಲುಪಿದೆ.
ಈ ಹುದ್ದೆಯಲ್ಲಿ ತಮ್ಮವರನ್ನು ಪ್ರತಿಷ್ಠಾಪಿಸಲು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ “ರಂಗಪ್ರವೇಶ’ ಮಾಡಿದ್ದಾರೆ.
ಬಿ.ಕೆ.ಹರಿಪ್ರಸಾದ್, ನಸೀರ್ ಅಹಮದ್, ಸಿ.ಎಂ.ಇಬ್ರಾಹಿಂ, ಅಲ್ಲಂ ವೀರಭದ್ರಪ್ಪ, ಸಲೀಂ ಅಹಮದ್ ವಿಪಕ್ಷ ನಾಯಕ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಿ.ಕೆ.ಹರಿಪ್ರಸಾದ್ ಪರ ಡಿ.ಕೆ.ಶಿವಕುಮಾರ್, ನಸೀರ್ ಅಹಮದ್ ಪರ ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಈ ಮಧ್ಯೆ, ವಿಪಕ್ಷ ನಾಯಕ ಆಗಲೇ ಬೇಕೆಂದು ಹಠಕ್ಕೆ ಬಿದ್ದಿರುವ ಸಿ.ಎಂ.ಇಬ್ರಾಹಿಂ ವಿಚಾರದಲ್ಲಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ. ಜೆಡಿಎಸ್ ನಾಯಕರ ಜತೆ ನಂಟು ಹೊಂದಿರುವ ಹಾಗೂ ಆಗಾಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಮುಜುಗರ ಉಂಟು ಮಾಡುವ ಅವರ ಹೆಸರು ಶಿಫಾರಸು ಮಾಡಿ ಮುಂದೆ ಏನಾದರೂ ಸಮಸ್ಯೆಯಾದರೆ ಎಂಬ ಆತಂಕ ಅವರದು ಎನ್ನಲಾಗಿದೆ.
ಹೈಕಮಾಂಡ್‌ನತ್ತ ಚಿತ್ತ
ಪರಿಷತ್ ವಿಪಕ್ಷ ಸ್ಥಾನಕ್ಕಾಗಿ ಹಿಂದುಳಿದ ವರ್ಗ, ಮುಸ್ಲಿಂ ಹಾಗೂ ಲಿಂಗಾಯಿತ ಸಮುದಾಯ ತಮ್ಮದೇ ಆದ ರೀತಿಯಲ್ಲಿ ಲಾಬಿ ನಡೆಸುತ್ತಿದೆ. ಲಿಂಗಾಯಿತ ಸಮುದಾಯದ ಆಲ್ಲಂ ವೀರಭದ್ರಪ್ಪ ಅವರಿಗೆ ವಯಸ್ಸು ಅಡ್ಡಿಯಾಗುತ್ತಿದೆ ಎನ್ನಲಾಗಿದೆ. ಹೀಗಾಗಿ, ಹಿಂದುಳಿದ ಅಥವಾ ಮುಸ್ಲಿಂ ಸಮುದಾಯಕ್ಕೆ ಪಕ್ಷನಿಷ್ಠೆ ಹಾಗೂ ಹಿರಿತನ ಆಧರಿಸಿ ಅವಕಾಶ ಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಈ ನಡುವೆ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ಅವಕಾಶ ಇದ್ದಾಗ ಕೊಟ್ಟರೆ ಸಂದೇಶ ರವಾನೆಯಾದಂತಾಗುತ್ತದೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪಟ್ಟು ಹಿಡಿದಿದ್ದಾರೆ. ಮುಸ್ಲಿಂ ವಿಚಾರದಲ್ಲಿ ಅವರ ಒಲವು ನಸೀರ್ ಅಹಮದ್ ಪರ ಇದೆ . ಜತೆಗೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಸಹ ನಸೀರ್ ಅಹಮದ್ ವಿಚಾರದಲ್ಲಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
ವಿಧಾನಸಭೆಯಲ್ಲಿ ಹಿಂದುಳಿದ ವರ್ಗದ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿರುವುದರಿಂದ ಅಲ್ಲಿಯೂ ಅದೇ ವರ್ಗಕ್ಕೆ ಬೇಡ ಎಂಬುದು ಕೆಲವರ ಪ್ರತಿಪಾದನೆ. ಆದರೆ, ಬಿ.ಕೆ.ಹರಿಪ್ರಸಾದ್ ಪರ ಡಿ.ಕೆ.ಶಿವಕುಮಾರ್ ನಿಂತಿದ್ದಾರೆ. ಇಬ್ರಾಹಿಂ ತನ್ನದೇ ಆದ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಜೆಡಿಎಸ್ ಜತೆಗಿನ ನಂಟು, ಉಪ ಚುನಾವಣೆಗಳಲ್ಲಿ ಪಕ್ಷದ ಪರ ಕೆಲಸ ಮಾಡದಿರುವುದು ಸೇರಿ ನಕಾರಾತ್ಮಕ ಅಂಶಗಳ ಬಗ್ಗೆ ವರಿಷ್ಠರಿಗೆ ವರದಿ ಸಹ ಹೋಗಿದೆ ಎಂಬ ಮಾತುಗಳಿವೆ.