ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಎಂಬ ಕಾನೂನು ಈಗಾಗಲೇ ಇದ್ದರೂ ಧಾರ್ಮಿಕ ಸ್ವಾತಂತ್ರ್ಯ, ಬದುಕಿನ ಹಾಗೂ ವಿಚಾರದ ಹಕ್ಕನ್ನು ಯಾರು ಕಸಿಯಲು ಆಗುವುದಿಲ್ಲ. ಇದು ಎಲ್ಲ ಧರ್ಮಕ್ಕೂ ಸೇರಿದ ವಿಚಾರ. ಬೌದ್ಧ, ಕ್ರೈಸ್ತ ಧರ್ಮ ಸೇರಿದಂತೆ ಎಲ್ಲವೂ ಇದರ ವ್ಯಾಪ್ತಿಯಲ್ಲಿದೆ. ಇಸ್ಕಾನ್, ಅಮೃತಾನಂದಮಯಿ ಆಶ್ರಮ ಸೇರಿದಂತೆ ಹಲವೆಡೆ ವಿದೇಶದಿಂದ ಅನ್ಯ ಧರ್ಮದವರು ಬಂದು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುತ್ತಾರೆ. ಹೀಗಿರುವಾಗ ಈ ಮಸೂದೆ ಎಲ್ಲರಿಗೂ ಕಸಿವಿಸಿ ವಾತಾವರಣ ಸೃಷ್ಟಿಸುತ್ತಿದೆ. ಇದು ಜಾತ್ಯಾತೀತ ರಾಜ್ಯ, ಇದೊಂದು ಶಾಂತಿಯ ನಾಡು. ಇಲ್ಲಿ ಎಲ್ಲ ಜನಾಂಗದವರು ಬದುಕಲು ಅವಕಾಶ ಇದೆ ಎಂದು ಹೊರಗಿನವರು ಗೌರವ ಇಟ್ಟುಕೊಂಡಿದ್ದಾರೆ. ಆದರೆ ಇಲ್ಲಿ ಶಾಂತಿ ಕದಡಲು ಪ್ರಯತ್ನ ಮಾಡಲಾಗುತ್ತಿದೆ. ಕೆಲವು ಕ್ರೈಸ್ತರನ್ನು ಗಮನದಲ್ಲಿಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದು ಡಿಕೆಶಿ ಅಸಮಾಧಾನ ಹೊರ ಹಾಕಿದರು.ಈ ದೇಶವನ್ನು ಮೊಘಲರು, ಪೆÇೀರ್ಚುಗೀಸರು ಹಾಗೂ ಬ್ರಿಟಿಷರು ಆಳಿದ್ದಾರೆ. ಅವರ ಜನಸಂಖ್ಯೆ ಎಲ್ಲಿ ಹೆಚ್ಚಾಗಿದೆ. ಈಗಲೂ ಸುಮಾರು ಶೇ. 2.30 ರಷ್ಟು ಜನ ಇದ್ದಾರೆ. ಎಲ್ಲ ನಾಯಕರು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಅಂತಾರೆ. ನಾನು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದೇನೆ. ನನಗೆ ಯಾರೂ ಬಂದು ಕ್ರೈಸ್ತ ಧರ್ಮದ ಬಗ್ಗೆ ಬೋಧನೆ ಆಗಲಿ ಮತಾಂತರಕ್ಕೆ ಬಲವಂತ ಮಾಡಿಲ್ಲ. 21 ಮಂತ್ರಿಗಳ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಎಲ್ಲಾದರೂ ಒಂದು ಕಡೆ. ಬಲವಂತದ ಮತಾಂತರ ಆಗಿರುವ ಪ್ರಕರಣ ಇದೆಯಾ? ಈ ಸಮುದಾಯ ಸಮಾಜ ಸೇವೆ ಮಾಡಿಕೊಂಡು ಬಂದಿದೆ. ಹಿಂದೂ ಧರ್ಮದಲ್ಲೂ ಧಾರ್ಮಿಕ ಸೇವೆ ಮಾಡಿಕೊಂಡು ಬರಲಾಗುತ್ತಿದೆ. ನಾವು ಕೂಡ ಯಾರಿಗೂ ಹಿಂದೂ ಧರ್ಮಕ್ಕೆ ಮತಾಂತರ ಆಗಿ ಎಂದು ಹೇಳುತ್ತಿಲ್ಲ. ಈ ರೀತಿ ಮಾಡುವುದು ಸರಿಯಲ್ಲ. ನಾವು ಈ ಮಸೂದೆ ಖಂಡಿಸುತ್ತೇವೆ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಲಿದೆ ಎಂದು ಡಿಕೆಶಿ ಎಚ್ಚರಿಕೆ ನೀಡಿದರು.
ಇಷ್ಟು ವರ್ಷ ಆಗದ ಬಲವಂತ ಮತಾಂತರ ಈಗ ಯಾರು ಮಾಡುತ್ತಿದ್ದಾರೆ. ಮೊಘಲರು ಎಷ್ಟು ವರ್ಷ ದೇಶ ಆಳಿದ್ದಾರೆ. ಎಷ್ಟು ಜನ ಮುಸಲ್ಮಾನರಿದ್ದಾರೆ? ಈಗಲೂ ಶೇ. 11-12 ರಷ್ಟು ಮುಸಲ್ಮಾನರಿದ್ದಾರೆ. ಹಿಂದೂ ರಾಷ್ಟ್ರ ಇದು. ಎಲ್ಲಿ ಬಲವಂತ ಮತಾಂತರ ನಡೆಯುತ್ತಿದೆ. ಸುಮ್ಮನೆ ರಾಜಕೀಯವಾಗಿ ಇದನ್ನು ಉಪಯೋಗಿಸಿಕೊಳ್ಳುವುದು ಸರಿಯಲ್ಲ. ಇಬ್ಬರ ಹೃದಯ ಪರಸ್ಪರ ಇಷ್ಟಪಟ್ಟು ಪ್ರೀತಿಸಿದರೆ ಅದು ಲವ್ ಜಿಹಾದ್ ಆಗುತ್ತದಾ? ಅಕ್ಕಿ ಒಂದು ಕಡೆ, ಅರಿಶಿನ ಒಂದು ಕಡೆ ಇರುತ್ತದೆ. ಅವೆರಡೂ ಸೇರಿದರೆ ಮಾತ್ರ ಮಂತ್ರಾಕ್ಷತೆ ಆಗುತ್ತದೆ ಎಂದು ಕಿಡಿಕಾರಿದರು.