Breaking News

ಭೀಮನೊಳಗಣ ನೈಜ ರಾಷ್ಟ್ರಪ್ರೇಮವನ್ನು ಒರೆಗೆ ಹಚ್ಚುವ ಅವಶ್ಯಕತೆ ಇದೆ.

Spread the love

ಅಂಬೇಡ್ಕರರನ್ನು ಮತ್ತೊಂದು ಮಜಲಿನಲ್ಲಿ ದೃಷ್ಟಿಸುವ ಅನಿವಾರ್ಯತೆ ಈವರೆಗೂ ಕಾಣಿಸಿದಂತಿಲ್ಲ. ಅದು ಅವರೊಳಗಿನ ರಾಷ್ಟ್ರೀಯ ಪ್ರಜ್ಞೆ. ವಾಸ್ತವವಾಗಿ ಅವರೊಳಗೆ ಐಕ್ಯತೆ, ರಾಷ್ಟ್ರಪ್ರೇಮ ಜಾಗೃತಜ್ಯೋತಿ ಆಗಿತ್ತು.

ಭೀಮನೊಳಗಣ ನೈಜ ರಾಷ್ಟ್ರಪ್ರೇಮವನ್ನು ಒರೆಗೆ ಹಚ್ಚುವ ಅವಶ್ಯಕತೆ ಇದೆ.

ಸಂವಿಧಾನಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರು ನಿಧನ ಹೊಂದಿದ ದಿನವಾದ ಡಿ.6ನ್ನು ಮಹಾಪರಿನಿರ್ವಾಣ ದಿವಸವೆಂದು ಆಚರಿಸಲಾಗುತ್ತದೆ. ಬೌದ್ಧ ಧರ್ಮದಲ್ಲಿ ‘ಪರಿನಿರ್ವಾಣ’ ಎಂದರೆ ತೀರಿಹೋದ ನಂತರ ನಿರ್ವಾಣವಾಗುವುದು, ಜೀವಿತಾವಧಿಯಲ್ಲಿ ನಿರ್ವಾಣವನ್ನು ಪಡೆದವರು ಎಂದರ್ಥ. ಅಂದರೆ ಈ ಭೌತಿಕ ಜಗತ್ತಿನಿಂದ, ಕರ್ಮ ಮತ್ತು ಮರುಹುಟ್ಟಿನಿಂದ ಬಿಡುಗಡೆ ಹೊಂದುವುದು ಎಂದು. ಭಾರತ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಖ್ಯಾತ ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕೀಯ ಮತ್ತು ಸಮಾಜ ಸುಧಾರಕರಾಗಿ ಕೂಡ ಗುರುತಿಸಿಕೊಂಡಿದ್ದರು, ದೇಶದಲ್ಲಿ ದಲಿತ ಬೌದ್ಧ ಚಳವಳಿಗಳು, ಮಹಿಳೆಯರು, ಕಾರ್ವಿುಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರು.

ಸ್ವಾತಂತ್ರ್ಯಪೂರ್ವ ಭಾರತದ ರಾಜಕೀಯ ಕ್ಷಿತಿಜದಲ್ಲಿ ಅನೇಕ ಉದ್ಧಾಮ ವ್ಯಕ್ತಿಗಳು, ರಾಜಕಾರಣಿಗಳು, ಮುತ್ಸದ್ದಿಗಳು ಮತ್ತು ದೇಶಪ್ರೇಮಿಗಳು ಕಾಣಿಸಿಕೊಂಡು ದೇಶದ ವಿಮೋಚನೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಚಿರಸ್ಮರಣೀಯರಾಗಿದ್ದಾರೆ. ಡಾ. ಭೀಮರಾವ್ ರಾಮ್ ಅಂಬೇಡ್ಕರ್ ಇಂತಹ ನಾಯಕರಲ್ಲಿ ಒಬ್ಬರಾಗಿದ್ದರು. ಅವರು ಭಾರತದ ದೀನದಲಿತರ ವಿಮೋಚನೆಗಾಗಿ ತಾವು ನಡೆಸಿದ ಹೋರಾಟವನ್ನು ದೇಶದ ಸ್ವಾತಂತ್ರ್ಯ ಹೋರಾಟದ ಅಂಗವಾಗಿಯೇ ಸಂಘಟಿಸಿ ಅಸ್ಪೃಯತಾ ನಿವಾರಣೆ ಮತ್ತು ಎಲ್ಲಾ ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ದೇಶದ ಸ್ವಾತಂತ್ರ್ಯ ಅರ್ಥರಹಿತ ಎಂಬ ಮೂಲತತ್ವವನ್ನು ಪ್ರತಿಪಾದಿಸಿದ ಏಕೈಕ ನಾಯಕರಾಗಿದ್ದರು. ಅವರು ಕೇವಲ ಅಸ್ಪೃಯರ ನಾಯಕರಾಗಿರದೆ ಇಡೀ ಮಾನವ ಕುಲದ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸ್ಥಾಪನೆಗಾಗಿ ಹೋರಾಡಿದರು. ಅವರು ಜಾತ್ಯತೀತ, ಸಮಾಜವಾದಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಹೊಂದಿದ್ದರು. ಅಸಮಾನತೆಯ ಸಮಾಜದಲ್ಲಿ, ಜಾತಿವ್ಯವಸ್ಥೆಯಲ್ಲಿ ನೊಂದವರಿಗೆ ದಾರಿದೀಪವಾಗಿ ಬೆಳಗಿದವರು ಅಂಬೇಡ್ಕರ್. ಅವರು ನಮ್ಮನ್ನಗಲಿ 65 ವಸಂತಗಳು ಕಳೆದಿವೆ. ಅವರ ಚಿಂತನೆಗಳು, ಬರಹಗಳು, ಭಾಷಣಗಳು ಇಂದಿಗೂ ನಮ್ಮೆಲ್ಲರ ಕೈದೀವಿಗೆ ಆಗಿವೆ ಎಂಬುದು ಸತ್ಯ. ಅವರು ಹುಟ್ಟು ಹೋರಾಟಗಾರರು. ಬಾಲ್ಯದಲ್ಲಿಯೇ ಮೌಢ್ಯ, ಕಂದಾಚಾರ, ಜಾತಿಯ ವಿಷಮ ಶೋಷಣೆಯನ್ನು ಪ್ರಶ್ನಿಸುತ್ತಿದ್ದವರು. ಹಿಂದು ಧರ್ಮದ ಗೊಡ್ಡು ಸಂಪ್ರದಾಯಗಳನ್ನು ತಿರಸ್ಕರಿಸುತ್ತಿದ್ದರು. ಹಿಂದು ಧರ್ಮದ ಆಚಾರ ವಿಚಾರಗಳನ್ನು ಮತ್ತು ಈ ಧರ್ಮದ ಅಪಾಯಗಳನ್ನು ವೈಚಾರಿಕ ದೃಷ್ಟಿಕೋನದಿಂದ ಜನಸಾಮಾನ್ಯರಿಗೆ ತಿಳಿಹೇಳುತ್ತಿದ್ದರು. ಭಾರತೀಯ ಸಮಾಜವು ಸಮಾನತೆ ಮತ್ತು ಸಾಮಾಜಿಕ ನ್ಯಾಯದಿಂದ ದಲಿತರು, ಅಸ್ಪೃಯರು, ಶೋಷಿತರು, ಮಹಿಳೆಯರು, ಹಿಂದುಳಿದ ವರ್ಗದವರನ್ನು ದೂರ ಇಟ್ಟಿದೆ. ನಾವುಗಳು ಹೆಚ್ಚು ಹೆಚ್ಚು ಶಿಕ್ಷಿತರಾಗಿ, ವಿದ್ಯಾವಂತರಾದಂತೆ ನಮ್ಮ ಹಕ್ಕು ಮತ್ತು ಸಾಮಾಜಿಕ ಸಮಾನತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಿದ್ದರು. ಅಂಬೇಡ್ಕರರು ಅಸಮಾನತೆಯ ಸಮಾಜದಿಂದ ನೋವು, ಜಾತಿಯ ಅಪಮಾನ-ಅವಮಾನವನ್ನು ಅನುಭವಿಸಿದರು. ಇದಕ್ಕೆ ಪ್ರಮುಖ ಕಾರಣ ಜಾತೀಯತೆ. 1935ರ ದಲಿತ ಸಮ್ಮೇಳನದಲ್ಲಿ ‘ನಾನೊಬ್ಬ ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿಯೇ ಸಾಯಲಾರೆ’ ಎಂದು ಘೊಷಿಸಿ ಅಸ್ಪೃಯರನ್ನು ಹಿಂದುವೆಂದು ಒಪ್ಪಿಕೊಂಡಿರದ ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಗಂಟೆ ಮೊಳಗಿಸಿದರು. ಅಸ್ಪೃಯರಿಗೆ ಹಿಂದೂಧರ್ಮದಲ್ಲಿ ಏಳಿಗೆ ಮತ್ತು ಬೆಳವಣಿಗೆ ಅವಕಾಶ ಇಲ್ಲವಾದ್ದರಿಂದ ಬೌದ್ಧಧರ್ಮಕ್ಕೆ ಮತಾಂತರ ಹೊಂದುವುದು ಸೂಕ್ತ ಎಂಬ ನಿರ್ಣಯಕ್ಕೆ ಅಂಬೇಡ್ಕರರು ಬಂದರು. ಕೊಲಂಬೋದ ಯಂಗ್ ಮೆನ್ಸ್ ಬುದ್ಧಿಸ್ಟ್ ಅಸೋಸಿಯೇಷನ್ ಆಹ್ವಾನದ ಮೇಲೆ 1950ರಲ್ಲಿ ಶ್ರೀಲಂಕಾಕ್ಕೆ ತೆರಳಿದರು. ಅಲ್ಲಿನ ಕ್ಯಾಂಡಿಯಲ್ಲಿ ವಿಶ್ವ ಬೌದ್ಧ ಸಮಾವೇಶದಲ್ಲಿ ಭಾಷಣ ಮಾಡಿ ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಶ್ರೀಲಂಕಾದ ಅಸ್ಪೃಯರಿಗೆ ಕರೆಕೊಟ್ಟರು. 1951ರಲ್ಲಿ ‘ಬೌದ್ಧ ಉಪಾಸನಾ ಪಥ’ ಎಂಬ ಕೃತಿಯನ್ನು ಹೊರತಂದರು. ಬೌದ್ಧಧರ್ಮದ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲು 1954 ರಲ್ಲಿ ಎರಡು ಬಾರಿ ಬರ್ವ ಪ್ರವಾಸ ಕೈಗೊಂಡರು.

ಇದೆಲ್ಲದರ ಪರಿಣಾಮದಿಂದ ಭಾರತದಲ್ಲಿ ಬೌದ್ಧ ಮಹಾಸಭಾವನ್ನು (ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ) ಸ್ಥಾಪಿಸಿದರು. ಪುಣೆಯ ಸಮೀಪದ ದೇಹು ರಸ್ತೆಯ ದೇವಾಲಯವೊಂದರಲ್ಲಿ ಗೌತಮಬುದ್ಧನ ಪ್ರತಿಮೆಯನ್ನು 1954ರ ಡಿಸೆಂಬರ್ 25ರಂದು ಪ್ರತಿಷ್ಠಾಪಿಸಿದರು. ಅಲ್ಲಿ ಸೇರಿದ್ದ ಸಹಸ್ರಾರು ಅಸ್ಪೃಯ ಸಮುದಾಯದ ಜನರೆದುರಿನಲ್ಲಿ ಬೌದ್ಧಧರ್ಮವನ್ನು ಭಾರತದೆಲ್ಲೆಡೆ ಪ್ರಚಾರಮಾಡುವುದಕ್ಕೆ ತನ್ನ ಉಳಿದ ಜೀವನವನ್ನು ಮೀಸಲಾಗಿಡುವುದಾಗಿ ಘೊಷಿಸುತ್ತಾರೆ. ಬೌದ್ಧಧರ್ಮದ ಸಾರವನ್ನು ಒಳಗೊಂಡ ‘ಬುದ್ಧ ಅಂಡ್ ಹಿಸ್ ಧಮ್ಮ’ ಎಂಬ ಕೃತಿಯನ್ನು ಫೆಬ್ರವರಿ 1956ರಲ್ಲಿ ಪ್ರಕಟಿಸಿದರು.

1956 ಅಕ್ಟೋಬರ್ 14 ರಂದು ಅಂಬೇಡ್ಕರರು ನಾಗಪುರದಲ್ಲಿ ಬುದ್ಧ ಭಿಕ್ಷುವಿನಿಂದ ಧಮ್ಮ ದೀಕ್ಷೆಯನ್ನು ಸ್ವೀಕರಿಸಿದರು. ಅವರ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳನ್ನೊಳಗೊಂಡ 3,80,000 ಜನಸಮೂಹಕ್ಕೆ ತಾವೇ ಧಮ್ಮ ದೀಕ್ಷೆಯನ್ನು ಬೋಧಿಸಿದರು. ನಂತರ ಬೌದ್ಧಧರ್ಮದ ಸಮ್ಮೇಳನಕ್ಕಾಗಿ ವಿಶ್ವಪರ್ಯಟನೆ ಕೈಗೊಳ್ಳುತ್ತಾರೆ. ನೇಪಾಳದಲ್ಲಿ ವಿಶ್ವ ಬೌದ್ಧ ಸಮಾವೇಶದ ನಾಲ್ಕನೇ ಸಮ್ಮೇಳನದಲ್ಲಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ವಿಷಯವಾಗಿ ಭಾಷಣ ಮಾಡಿ ಬೌದ್ಧಧರ್ಮದ ತತ್ವ ಮತ್ತು ಮಾರ್ಕ್ಸ್ ಚಿಂತನೆಯನ್ನು ತಿಳಿಸಿಕೊಡುತ್ತಾರೆ. ಭಾರತದ ಹಲವು ಭಾಗಗಳಲ್ಲಿ ಬುದ್ಧನ ತತ್ವ ಸಿದ್ಧಾಂತಗಳನ್ನು ಜನಸಾಮಾನ್ಯರಲ್ಲಿ ಬಿತ್ತುವ ಕೆಲಸ ಮಾಡುತ್ತಾರೆ. ಇದರಿಂದ ಸ್ವಯಂಘೊಷಿತವಾಗಿ ಹಲವಾರು ಜನರು ಬೌದ್ಧಧರ್ಮ ಅನುಸರಿಸಲು ಮುಂದಾಗುತ್ತಾರೆ. ಜೀವಿತದ ಕೊನೆಯ ಕಾಲದಲ್ಲಿ ‘ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್’ ಪುಸ್ತಕದ ಕೊನೆಯ ಅಧ್ಯಾಯವನ್ನು ಬರೆದು ಮುಗಿಸಿದರು. ಈ ಪುಸ್ತಕ ಹೊರ ಬಂದ ಕೆಲವೇ ದಿನಗಳಲ್ಲಿ ಅಂದರೆ 1956 ರ ಡಿ.6ರಂದು ಅಂಬೇಡ್ಕರ್ ಅವರು ನಂದಾದೀಪವಾದರು. ಅವರು ಹಾಕಿಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಮಂತ್ರಗಳು ಇಂದಿಗೂ ನಂದಾದೀಪವಾಗಿ ಬೆಳಗುತ್ತಿದೆ.

ಅಂಬೇಡ್ಕರರ ರಾಷ್ಟ್ರೀಯ ಪ್ರಜ್ಞೆ: ಸಂವಿಧಾನ ರಚನೆಯ ನೆಲೆಗಟ್ಟಿನಿಂದ ವಿಶ್ವದ ಅನೇಕ ಸಂವಿಧಾನಗಳ ಅಧ್ಯಯನ, ಮೀಸಲಾತಿಯ ವಿಸ್ತರಣೆ ಕುರಿತ ಚಿಂತನೆ ಇವುಗಳೇ ಚರ್ಚೆಯ ಆದ್ಯ ಭಾಗವಾಗುತ್ತವೆ. ಇವೆಲ್ಲವೂ ಸ್ವೀಕೃತವೇ ಹೌದು. ಅಂಬೇಡ್ಕರರನ್ನು ಹೊರತುಪಡಿಸಿದ ಸಂವಿಧಾನದ ಪರಿಕಲ್ಪನೆ ಅಂಗವೈಕಲ್ಯವೆನಿಸುತ್ತದೆ. ಇದರಿಂದ ಆಚೆಗೆ ಬಾಬಾಸಾಹೇಬರನ್ನು ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ ಎಂದೂ ಬೆರಳೆಣಿಕೆಯ ಜನ ನೆನಪಿಸಿಕೊಳ್ಳುವುದಿದೆ. ಆದರೆ ಅಂಬೇಡ್ಕರರನ್ನು ಮತ್ತೊಂದು ಮಜಲಿನಲ್ಲಿ ದೃಷ್ಟಿಸುವ ಅನಿವಾರ್ಯತೆ ಈವರೆಗೂ ಕಾಣಿಸಿದಂತಿಲ್ಲ. ಅದು ಅವರೊಳಗಿನ ರಾಷ್ಟ್ರೀಯ ಪ್ರಜ್ಞೆ. ವಾಸ್ತವವಾಗಿ ಅಂಬೇಡ್ಕರ್ ಅವರೊಳಗೆ ಐಕ್ಯತೆ, ರಾಷ್ಟ್ರಪ್ರೇಮ ಜಾಗೃತಜ್ಯೋತಿ ಆಗಿತ್ತು. ಆ ಅದಮ್ಯ ಧ್ಯೇಯವನ್ನು ಸಾರ್ವತ್ರಿಕವಾಗಿ ವಿಮರ್ಶೆಗೆ ಹಚ್ಚಿದ್ದು ತೀರಾ ವಿರಳ. ಭೀಮನೊಳಗಣ ನೈಜ ರಾಷ್ಟ್ರಪ್ರೇಮವನ್ನು ಒರೆಗೆ ಹಚ್ಚುವ ಅವಶ್ಯಕತೆ ಇದೆ.

ಸಂವಿಧಾನ ರಚನಾ ಸಭೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಯಮಕ್ಕೆ ಕೊಟ್ಟ ಸ್ಥಾನಮಾನವನ್ನು ನೈತಿಕತೆಗೂ ಹಂಚಿದ ಕೀರ್ತಿ ಅವರದ್ದು. ಕಾನೂನುಗಳ ಅಳವಡಿಕೆಗೆ ಹೊಂದಿದ್ದ ಕಟಿಬದ್ಧತೆಯನ್ನು ರಾಷ್ಟ್ರ ಸ್ಥಿರತೆಗೂ ಅವರು ನೀಡಿದ್ದರು. 1949ರ ಡಿ.17ರ ಸಂವಿಧಾನ ರಚನಾ ಸಭೆಯಲ್ಲಿನ ಮೊದಲ ಭಾಷಣದಲ್ಲಿ ಅವರು ಉಲ್ಲೇಖಿಸಿದ ಅನೇಕ ಸಂಗತಿಗಳು ರಾಷ್ಟ್ರಪ್ರೇಮದ ಸೆಲೆಯನ್ನು ಅನಾವರಣ ಮಾಡುತ್ತವೆ. ಉದಾಹರಣೆಗೆ, ನೆಹರೂ ಮಂಡಿಸಿದ ಗಣರಾಜ್ಯದ ನಿರ್ಣಯವನ್ನು ಕುರಿತು ರಾಷ್ಟ್ರಗಳ ಗಂತವ್ಯಗಳನ್ನು ನಿರ್ಧರಿಸುವಾಗ ವ್ಯಕ್ತಿಗಳ, ಪಕ್ಷಗಳ ಗಂತವ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು. ಎಲ್ಲದರಲ್ಲೂ ರಾಷ್ಟ್ರವನ್ನೆ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ. ‘ರಾಷ್ಟ್ರ ಕಟ್ಟುವಾಗ ಜನಗಳನ್ನು ಭೀತಿಗೀಡು ಮಾಡುವಂತಹ ಶಬ್ದಗಳನ್ನು ಪಕ್ಕಕ್ಕಿಡೋಣ, ನಾವು ಕೇವಲ ಘೊಷವಾಕ್ಯಗಳಿಂದ ದೇಶ ಕಟ್ಟಲಾಗುವುದಿಲ್ಲ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದರು.

ಬಹುತ್ವದಲ್ಲೂ ಏಕತೆ ಸಾಧ್ಯ: ಮತ್ತೊಂದು ಸಂದರ್ಭದಲ್ಲಿ, ‘ನಮ್ಮಲ್ಲಿ ಜಾತಿ ಮತಗಳ ನಡುವೆಯೂ ನಾವು ಯಾವುದೋ ಒಂದು ರೂಪದಲ್ಲಿ ಸಂಯುಕ್ತ ಜನಾಂಗವಾಗುತ್ತೇವೆ ಎನ್ನುವುದರಲ್ಲಿ ನನಗೆ ಅನುಮಾನವೇ ಇಲ್ಲ’ಎಂದಿದ್ದರು. ಸದರಿ ದೃಷ್ಟಿಕೋನ ಬಹುತ್ವದಲ್ಲೂ ಏಕತೆ ಸಾಧ್ಯವೆಂಬ ಆಶಾವಾದ ಇಟ್ಟುಕೊಂಡಿದ್ದಕ್ಕೆ ಸಾಕ್ಷಿ. ‘ಸಮಯ ಮತ್ತು ಸನ್ನಿವೇಶ ಒಟ್ಟುಗೂಡಿದರೆ ಈ ದೇಶವು ಒಂದಾಗುವುದನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲಾರದು. ಈ ಸಭೆಯು ಸಾರ್ವಭೌಮ ಅಧಿಕಾರ ವನ್ನು ತನ್ನದನ್ನಾಗಿ ಮಾಡಿಕೊಂಡಿದ್ದರೆ, ಅದನ್ನು ವಿವೇಕದಿಂದ ಪ್ರಯೋಗಿಸಲು ಸಿದ್ಧವಾಗಿದೆ ಎನ್ನುವುದನ್ನು ನಮ್ಮ ನಡವಳಿಕೆಯಿಂದ ಸಾಧಿಸಿ ತೋರಿಸೋಣ.

ದೇಶದ ಎಲ್ಲ ವಿಭಾಗಗಳೊಡನೆ ವ್ಯವಹರಿಸುವಾಗ ನಮಗೆ ಇರುವುದು ಅದೊಂದೇ ಮಾರ್ಗ. ಒಗ್ಗಟ್ಟಿನೆಡೆಗೆ ನಮ್ಮನ್ನು ಕರೆದೊಯ್ಯಲು ಬೇರೆ ಮಾರ್ಗ ಇಲ್ಲ, ಈ ವಿಷಯವಾಗಿ ನಾವು ಯಾವುದೇ ಅನುಮಾನ ಇಟ್ಟುಕೊಳ್ಳದಿರೋಣ’ ಎಂದಿದ್ದರು. ಈ ಸಾಲುಗಳು, ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿ ಸಂಯಮ ಮತ್ತು ಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನು ಸಮರ್ಥಿಸುತ್ತವೆ. ಅಂಬೇಡ್ಕರರ ರಾಷ್ಟ್ರಪ್ರೇಮದ ವ್ಯಾಖ್ಯಾನಕ್ಕೆ ಇದಕ್ಕಿಂತಲೂ ಘನೀಭೂತವಾದ ಆಧಾರದ ಅವಶ್ಯಕತೆಯಿಲ್ಲ. ಆದ್ದರಿಂದ ಈ ನೆಲೆಯಲ್ಲೂ, ಅಂಬೇಡ್ಕರರ ಬೋಧನೆಗಳು, ಸಂದೇಶಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಅಭ್ಯಸಿಸುವುದು, ಅವಲೋಕಿಸುವುದು, ವಿಮಶಿಸುವುದು ಈ ಹೊತ್ತಿನ ಜರೂರು.

(ಲೇಖಕರು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕರು)


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ