ಚಿಕ್ಕೋಡಿ: ರಾಯಭಾಗ ತಾಲೂಕಿನಲ್ಲಿ ಎರಡು ದಿನಗಳ ಹಿಂದೆ ಹಾಲು ವ್ಯಾಪಾರಿಯೊಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿ ಶವ ಬಿಸಾಡಿ ಪರಾರಿಯಾಗಿದ್ದ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಹಾಲು ವ್ಯಾಪಾರಿ ಅರ್ಜುನ್ ಮಾರುತಿ ಮೇಗಡೆ(30) ಕೊಲೆಯಾದವ. ಆರೋಪಿ ಭೀಮಪ್ಪ ದುಂಡಪ್ಪ ತಟ್ಟಿಮನಿ ಹಾಗೂ ಈತನ ಮತ್ತಿಬ್ಬರು ಸಹಚರರು ಬಂಧಿತರು. ತನ್ನ ಪತ್ನಿ ಜತೆ ಹಾಲು ವ್ಯಾಪಾರಿ ಅರ್ಜುನ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಭೀಮಪ್ಪ ದುಂಡಪ್ಪ ತಟ್ಟಿಮನಿಗೆ ಬಂದಿತ್ತು.
ಅನೈತಿಕ ಸಂಬಂಧದ ಬಗ್ಗೆ ಸಂಶಯಗೊಂಡಿದ್ದ ಭೀಮಪ್ಪ, ಇದೇ ವಿಚಾರಕ್ಕೆ ಕುಪಿತಗೊಂಡು ಅರ್ಜುನನ್ನು ಮುಗಿಸಲು ಸೇಹಿತರ ಜತೆ ಸಂಚು ರೂಪಿಸಿದ್ದ. ಅದರಂತೆ ಡಿ.3ರಂದು ರಾಯಭಾಗ ತಾಲೂಕಿನ ಬೆಂಡವಾಡ ಹೊರವಲಯದಲ್ಲಿ ಹಾಡಹಗಲೇ ಅರ್ಜುನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಬಳಿಕ ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಕೆನಾಲ್ ಒಂದರಲ್ಲಿ ಶವ ಬಿಸಾಕಿ ಪರಾರಿಯಾಗಿದ್ದರು.
ಪ್ರಕರಣದ ಬೆನ್ನತ್ತಿದ ರಾಯಭಾಗ ಠಾಣೆ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೀಮಪ್ಪ ತಟ್ಟಿಮನಿ, ಇವನ ಸ್ನೇಹಿತರಾದ ಲೋಕೆಶ್ ಬಂಡಿವಡ್ಡರ್ ಮತ್ತು ಶಿವನಗೌಡ ಪಾಟೀಲ್ ಎಂಬುವರನ್ನು ಬಂಧಿಸಿದ್ದಾರೆ.
Laxmi News 24×7