Breaking News

ರೋಬೋ ಪಾಪಣ್ಣನ ವರದಿಗೆ ಅಮಾಯಕ BMTC ನೌಕರರು ಸೇವೆಯಿಂದ ವಜಾ!

Spread the love

ಬೆಂಗಳೂರು, ಡಿ. 01: ವೇತನ ಪರಿಷ್ಕರಣೆ ಮಾಡುವಂತೆ ಕೋರಿ ಸಾರಿಗೆ ನೌಕರರು ನಡೆಸಿದ ಮುಷ್ಕರ ನೌಕರರನ್ನೇ ಸಾರಿಗೆ ಇಲಾಖೆ ಬೀದಿ ಪಾಲು ಮಾಡಿದೆ. ಬಿಡಿಗಾಸು ಹೆಚ್ಚಳ ಮಾಡಿಸಿಕೊಳ್ಳಲು ಹೋಗಿ ಕೆಲಸವೇ ಕಳೆದುಕೊಂಡಿದ್ದಾರೆ. ಹತ್ತು ದಿನದಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದ ಸರ್ಕಾರ ಬರೋಬ್ಬರಿ 2500 ಸಾರಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿ ಸಿಟ್ಟು ತೀರಿಸಿಕೊಂಡಿದೆ.

ವೇತನ ಹೆಚ್ಚಳಕ್ಕಾಗಿ ಹೋರಾಟ ಮಾಡಿದವರು ಎಂಟು ತಿಂಗಳಿನಿಂದ ಕೆಲಸವೇ ಇಲ್ಲದೇ ‘ಮರು ನೇಮಿಸಿಕೊಳ್ಳಿ ಸ್ವಾಮಿ” ಎಂಬ ಮನವಿ ಹಿಡಿದು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಬೇಡಿಕೆ ಈಡೇರಿಕೆಗಾಗಿ ನಡೆಸಿದ ಹೋರಾಟ ಸಾರಿಗೆ ನೌಕರರ ಬದುಕನ್ನೇ ಬೀದಿಗೆ ತಳ್ಳಿದೆ. ಹೋರಾಟದ ಸಾರಥ್ಯ ವಹಿಸಿದ್ದ ನಾಯಕರು ನೆಮ್ಮದಿಯಾಗಿದ್ದಾರೆ. ಆದರೆ, ಸಾರಿಗೆ ನೌಕರರು ನರಕ ಅನುಭವಿಸುತ್ತಿದ್ದಾರೆ.

ಸಾರಿಗೆ ನೌಕರರ ಸಿಟ್ಟು ಅಸಹನೆ ಒಂದೇ ಸಲ ಸ್ಫೋಟಗೊಂಡಿತ್ತು. ವೇತನ ಪರಿಷ್ಕರಣೆ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನು ಪರಿಗಣಿಸಬೇಕು ಎಂಬ ಬಹು ಬೇಡಿಕೆಗಳನ್ನು ಮುಂದಿಟ್ಟು ರಾಜ್ಯದಲ್ಲಿ 1.30 ಲಕ್ಷ ಸಾರಿಗೆ ನೌಕರರು ಬೀದಿಗೆ ಇಳಿದಿದ್ದರು. ಇಡೀ ರಾಜ್ಯದಲ್ಲಿಯೇ ಸಾರಿಗೆ ವ್ಯವಸ್ಥೆ ಅಯೋಮಯವಾಗಿತ್ತು. ಹದಿನೈದು ದಿನಗಳ ಹೋರಾಟಕ್ಕೆ ಬಿಜೆಪಿ ಸರ್ಕಾರ ಸ್ಪಂದನೆ ಕೊಡಲಿಲ್ಲ. ನಿಮ್ಮ ನ್ಯಾಯಯುತ ಹೋರಾಟದ ಬಗ್ಗೆ ನೋಡೋಣ, ಮೊದಲು ಕರ್ತವ್ಯಕ್ಕೆ ಹಾಜರಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕೋರ್ಟ್ ಹೇಳಿತ್ತು. ಅಲ್ಲಿಗೆ ಅಂತ್ಯಗೊಂಡಿದ್ದ ಹೋರಾಟದ ಅಸಲಿ ಪ್ರತಿಫಲವೇ ಬೇರೆಯದ್ದು ಆಗಿದೆ.

2700 ಸಾರಿಗೆ ನೌಕರರನ್ನು ಸೇವೆಯಿಂದ ವಜಾ
 ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 2700 ಸಾರಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಸರಿಯಾಗಿ ಲೆಕ್ಕ ಹೇಳಬೇಕಾದರೆ, ಸಾರಿಗೆ ನೌಕರರ ಮುಷ್ಕರ ಪರಿಣಾಮ 2160 ಸಾರಿಗೆ ಸಿಬ್ಬಂದಿ ಸೇವೆಯಿಂದ ವಜಾಗೊಂಡಿದ್ದಾರೆ, 2941 ಸಿಬ್ಬಂದಿ ಅಮಾನತುಗೊಂಡಿದ್ದಾರೆ, 8000 ಸಾರಿಗೆ ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ, 7969 ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

ತಿಂಗಳುಗಳು ಕಳೆದರೂ ಬೇಡಿಕೆ ಈಡೇರಿಸಿಲ್ಲ

ಎಂಟು ತಿಂಗಳಿನಿಂದ ಕೆಲಸವಿಲ್ಲದೇ ಅಲೆಯುತ್ತಿದ್ದಾರೆ ಇನ್ನೂ ಬಹುತೇಕರಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ಹತ್ತು ದಿನದಲ್ಲಿ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದ ಸಾರಿಗೆ ನೂತನ ಸಚಿವ ಬಿ. ಶ್ರೀರಾಮುಲು ತಿಂಗಳುಗಳು ಕಳೆದರೂ ಈಡೇರಿಸಿಲ್ಲ. ನಮ್ಮ ಬಳಿ ಎಂದಿದ್ದ ಕೋರ್ಟ್ ಇದೀಗ ನೀವು ಲೇಬರ್ ಕೋರ್ಟ್‌ಗೆ ಹೋಗಿ ಫೈಟ್ ಮಾಡಿ ಎಂದು ಹೇಳಿದೆ. ಈ ಪರಿಸ್ಥಿತಿ ಲಾಭ ಪಡೆದು ಸಣ್ಣ- ಸಣ್ಣ ಕಾರಣ ಹುಡುಕಿ ಸಾರಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿ ಮನೆಗೆ ಕಳುಹಿಸಲಾಗಿದೆ.

ಮುಷ್ಕರದಲ್ಲಿ ಪಾಲ್ಗೊಳ್ಳದಿದ್ದರೂ ವಜಾ

ಎಷ್ಟೋ ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದಿದ್ದರೂ ವಜಾ ಶಿಕ್ಷೆಗೆ ಗುರಿಯಾಗಿದ್ದಾರೆ. ನಮ್ಮನ್ನು ಮಾನವೀಯ ಆಧಾರದ ಮೇಲೆ ಮರು ನೇಮಕ ಮಾಡಿಕೊಳ್ಳಿ ಎಂದು ಮೇಲ್ಮನವಿ ಪುನರ್ ಪರಿಶೀಲನಾ ಪ್ರಾಧಿಕಾರಕ್ಕೆ ಸಲ್ಲಿಸುವ ಅರ್ಜಿಗಳು ವಜಾ ಆಗುತ್ತಿವೆ. ನ್ಯಾಯ ಕೋರಿ ಮೇಲಾಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸುತ್ತಿರುವ ಸಾರಿಗೆ ನೌಕರರ ಕಷ್ಟ ಕೇಳುವರು ಇಲ್ಲ. ಬಾಗಿಲ ಬಳಿಯೂ ಬಿಟ್ಟುಕೊಳ್ಳುತ್ತಿಲ್ಲ. ಇನ್ನೂ ಹೋರಾಟದ ಸಾರಥ್ಯ ವಹಿಸಿದ್ದ ಸಾರಿಗೆ ನೌಕರರ ನಾಯಕರಾದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸದ್ದೇ ಇಲ್ಲ! ಹೀಗೆ ನಾವಿಕನಿಲ್ಲದೇ ಮುಳುಗುತ್ತಿರುವ ದೋಣಿಯಲ್ಲಿ ಸಾರಿಗೆ ನೌಕರರು ಸವಾರಿ ಮಾಡುತ್ತಿದ್ದಾರೆ. ಹೋರಾಟದ ಹಾದಿಯೂ ಇಲ್ಲ. ವೇತನವೂ ಇಲ್ಲ. ಕೆಲಸವೂ ಇಲ್ಲ. ನ್ಯಾಯವೂ ಸಿಗಲಿಲ್ಲ. ಇದರೊಂದಿಗೆ ತಪ್ಪು ಮಾಡದಬೆವರಿಗೂ ಸೇವೆಯಿಂದ ವಜಾ ಶಿಕ್ಷೆ. ಇಂತಹ ಸಂಕಷ್ಟದಲ್ಲಿ ಸಾರಿಗೆ ನೌಕರರು ದಿನದೂಡುತ್ತಿದ್ದಾರೆ.

ರೋಬೋ ಪಾಪಣ್ಣನ ವರದಿ ಎಫೆಕ್ಟ್:

ವೇತನ ಪರಿಷ್ಕರಣೆ ಮಾಡದಿದ್ದರೆ ಹಾಳಾಗಿ ಹೋಗಲಿ, ಕನಿಷ್ಠ ಪಕ್ಷ ನ್ಯಾಯ ಕೇಳಿ ಮುಷ್ಕರ ಮಾಡಿದ್ದನ್ನೇ ಮುಂದಿಟ್ಟುಕೊಂಡು ಕೇವಲ 2700 ಬಿಎಂಟಿಸಿ ನೌಕರರನ್ನು ಸೇವೆಯಿಂದ ವಜಾ ಮಾಡಿರುವದು ಎಷ್ಟು ಸರಿ? ಹೋರಾಟ ನಡೆಸಿದ್ದು 1.30 ಲಕ್ಷ ಮಂದಿ. ಅಷ್ಟು ಪ್ರಾಮಾಣಿಕವಾಗಿ ವಿಚಾರಣೆ ನಡೆಸಿ ಅಷ್ಟು ಮಂದಿಯನ್ನು ಸೇವೆಯಿಂದ ವಜಾ ಮಾಡಬಹುದಿತ್ತಲ್ಲವೇ? ಬೇಕಾದವರನ್ನು ಟಾರ್ಗೆಟ್ ಮಾಡಿ ಸೇವೆಯಿಂದ ವಜಾ ಮಾಡಲಾಗಿದೆ. ಇನ್ನು ಸಾರಿಗೆ ನೌಕರರು ಕಾನೂನು ಬಾಹಿರ ಮುಷ್ಕರದಲ್ಲಿ ಪಾಲ್ಗೊಂಡ ಬಗ್ಗೆ ವರದಿ ನೀಡಿರುವುದು ಪಾಪಣ್ಣ. ಅವರು ವರದಿ ನೀಡಿದ ಬಳಿಕ ರೋಬೋಟ್ ಪಾಪಣ್ಣ ಎಂದೇ ಖ್ಯಾತಿ ಆಗಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ಬೆಂಗಳೂರನ್ನು ಕ್ಷಣದಲ್ಲಿ ಸ್ಕ್ಯಾನ್ ಮಾಡಿ ವರದಿ ನೀಡಿದ್ದಾರೆ. ಅವರು ನೀಡಿದ ವರದಿಯನ್ನೇ ಗಂಭೀರವಾಗಿ ಪರಿಗಣಿಸಿ ಹಾನಗರ ಸಾರಿಗೆ ಸಂಸ್ಥೆ ಸೇವೆಯಿಂದ ವಜಾ ಮಾಡಿದೆ. ಒಬ್ಬ ಅಧಿಕಾರಿ ಇಡೀ ಮುಷ್ಕರದ ಬಗ್ಗೆ ಸಮಗ್ರ ತನಿಖೆ ನಡೆಸಿ ಸಾಕ್ಷಾಧಾರಗಳ ಸಮೇತ ವರದಿ ನೀಡಿದ್ದಾರಂತೆ!

ಕೋಲಾರಕ್ಕೆ ಹೋಗಿದ್ದ ನಿರ್ವಾಹಕಿ ವ್ಯಥೆ

ಕಾಣೆಯಾದ ಮಗಳನ್ನು ಹುಡುಕಿಕೊಂಡು ಕೋಲಾರಕ್ಕೆ ಹೋಗಿದ್ದ ನಿರ್ವಾಹಕಿ ಕೂಡ ಮುಷ್ಕರದಲ್ಲಿ ಪಾಲ್ಗೊಂಡಿದ್ದಾಳೆ ಎಂದು ಸೇವೆಯಿಂದ ವಜಾ ಮಾಡಲಾಗಿದೆ. ಆಕೆ ಕೂಡ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ರೋಬೋ ಪಾಪಣ್ಣನ ವರದಿ ಹೇಳುತ್ತದೆ. ಎಫ್‌ಐಆರ್ ಕೊಟ್ಟರೂ ನಿರ್ವಾಹಕಿ ಮಾತು ನಂಬಿಲ್ಲ. ರೋಬೋ ಪಾಪಣ್ಣನ ವರದಿ ಕಣ್ಣಿಗೆ ಒತ್ತಿಕೊಂಡು ಶಾಂತಮ್ಮ ಎಂಬ ನಿರ್ವಾಹಕಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. ಪುನರ್ ಪರಿಶೀಲನಾ ಪ್ರಾಧಿಕಾರಕ್ಕೆ ಹೋದರೂ ನ್ಯಾಯ ಸಿಗದೇ ಶಾಂತಮ್ಮ ಕಣ್ಣೀರು ಹಾಕುತ್ತಿದ್ದಾರೆ. ರೋಬೋ ಪಾಪಣ್ಣನ ವರದಿಯಲ್ಲಿ ಸಿಕ್ಕ ಒಂದು ಪ್ರಕರಣದ ವಿವರವಿದು. ಇಂತಹ ಅದೆಷ್ಟು ಮುಗ್ಧರು ಕೆಲಸದಿಂದ ವಜಾ ಆಗಿದ್ದಾರೋ ಗೊತ್ತಿಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡಿದ ವರು ಈಗ ಕೆಲಸವೇ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ