ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಆಡಳಿತಾರೂಢ ಬಿಜೆಪಿ ಪಣತೊಟ್ಟಿದ್ದು, ಬಿಕ್ಕಟ್ಟು ಶಮನ, ಪ್ರಾತಿನಿಧ್ಯ ಸರಿದೂಗಿಸಲೆಂದು ರಾಜೀಸೂತ್ರ ಕಂಡುಕೊಂಡಿದೆ. ತೀವ್ರ ಪೈಪೋಟಿ ಏರ್ಪಟ್ಟಿದ್ದ ಜಿಲ್ಲೆಗಳ ಮುಖಂಡರೊಂದಿಗೆ ಪಕ್ಷದ ರಾಜ್ಯ ನಾಯಕರು ನಿರಂತರ ಚರ್ಚೆ ನಡೆಸಿ ಮನವೊಲಿಸಲು ಪ್ರಯತ್ನಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಾಥ್ ನೀಡಿದ್ದಾರೆ.
ಆದರೂ ಒಮ್ಮತ ಮೂಡದ 1-2 ಕ್ಷೇತ್ರಗಳಿಗೆ ಒಂದಕ್ಕಿಂತ ಹೆಚ್ಚು ಹೆಸರು ಸೇರಿಸಿ, ವರಿಷ್ಠರ ವಿವೇಚನೆಗೆ ಬಿಡಲು ನಿರ್ಧರಿಸಿದರು. ಜತೆಗೆ ಅಂತಿಮಪಟ್ಟಿಯನ್ನು ಸೋಮವಾರ ರಾತ್ರಿ ದೆಹಲಿಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇಲ್ಮನೆಯಲ್ಲಿ ಮೇಲುಗೈ ಸಾಧಿಸುವುದಕ್ಕೆ ಗೆಲುವೊಂದೇ ಮಾನದಂಡ ಮಾಡಿಕೊಂಡಿರುವ ಕಾರಣ ವಲಸಿಗರು ಮತ್ತು ಕೆಲವರ ಒತ್ತಡಕ್ಕೆ ರಾಜ್ಯದ ಕಮಲಪಡೆ ಮಣೆ ಹಾಕಿದೆ. ಜಾರಕಿಹೊಳಿ ಕುಟುಂಬದ ಲಖನ್ ಜಾರಕಿಹೊಳಿ (ಬೆಳಗಾವಿ), ವಲಸಿಗರಾದ ಸಂದೇಶ್ ನಾಗರಾಜ್ (ಮೈಸೂರು) ಹಾಗೂ ಸಿ.ಆರ್.ಮನೋಹರ್ (ಕೋಲಾರ) ಹೆಸರು ಪಟ್ಟಿಯಲ್ಲಿ ಸೇರಿದ್ದು, ಪಕ್ಷದ ಸಂಸದೀಯ ಮಂಡಳಿ ತೀರ್ವನವೇ ಅಂತಿಮವಾಗಲಿದೆ. ಚುನಾವಣೆ ನಡೆಯಲಿರುವ 20 ಸ್ಥಳೀಯ ಸಂಸ್ಥೆಗಳ 25 ಸ್ಥಾನಗಳ ಪೈಕಿ 20ಕ್ಕೆ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲು ಪಕ್ಷದ ನಾಯಕರು ಈ ಮೊದಲು ಯೋಚಿಸಿದ್ದರು. ದ್ವಿಸದಸ್ಯ ಕ್ಷೇತ್ರದಲ್ಲಿ ಇಬ್ಬರು ಸ್ಪರ್ಧಿಸಿದರೆ ಗೊಂದಲವಾಗಿ ಗೆಲ್ಲುವ ಸ್ಥಾನವನ್ನೂ ಕಳೆದುಕೊಳ್ಳುವ ಸಾಧ್ಯತೆ ಅಂದಾಜಿಸಿ, ದ್ವಿಸದಸ್ಯ ಸ್ಥಾನಗಳಿರುವ ದಕ್ಷಿಣ ಕನ್ನಡ, ಮೈಸೂರು, ಬೆಳಗಾವಿ, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದು ಸ್ಥಾನಕ್ಕೆ ಸೀಮಿತವಾಗಲು ನಿರ್ಣಯಿಸಿತ್ತು. ಬದಲಾದ ಪರಿಸ್ಥಿತಿ ನಿರ್ವಹಣೆ, ಬಿಕ್ಕಟ್ಟು ಶಮನಸೂತ್ರವಾಗಿ ಎಲ್ಲ ಕ್ಷೇತ್ರಗಳಲ್ಲೂ ಸಡ್ಡು ಹೊಡೆಯಲು ಮುಂದಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬೆಳಗಾವಿಗೆ ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಟಿಕೆಟ್ ಖಾತರಿಪಡಿಸಿದ್ದು, ಮತ್ತೊಂದು ಸ್ಥಾನಕ್ಕೂ ಸ್ಪರ್ಧಿಸಲು ಲಖನ್ಗೆ ಅವಕಾಶ ನೀಡಬೇಕು ಎಂದು ಜಾರಕಿಹೊಳಿ ಸೋದರರು ಪಟ್ಟು ಹಿಡಿದಿದ್ದರು. ತಪುಪ ಸಂದೇಶ ರವಾನೆಯಾಗುವುದನ್ನು ತಪ್ಪಿಸುವುದಕ್ಕಾಗಿ ಉಳಿದ ದ್ವಿಸದಸ್ಯ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಅನಿವಾರ್ಯವಾಯಿತು. ಪಟ್ಟಿ ಶಿಫಾರಸು ಮಾಡಿದ್ದರೂ ವರಿಷ್ಠರು ಅಧಿಕೃತ ಮುದ್ರೆ ಹಾಕುವ ತನಕ ಇದೇ ಅಂತಿಮ ಎನ್ನಲಾಗದು.
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷ ಭದ್ರವಾಗ ಬೇಕಾಗಿದ್ದು, ಇದೇ ನೆಲೆಯಲ್ಲಿ ಸಂದೇಶ ನಾಗರಾಜ್ ಮತ್ತು ಸಿ.ಆರ್.ಮನೋಹರ್ಗೆ ಪ್ರಾಶಸ್ಱ ದೊರೆತಿದೆ. ಕೊಡಗು ಕ್ಷೇತ್ರದಲ್ಲಿ ಹಾಲಿ ಸದಸ್ಯ ಸುನೀಲ್ ಸುಬ್ರಮಣಿ ಮತ್ತು ಸುಜಾ ಕುಶಾಲಪ್ಪ ಮಧ್ಯೆ ಪೈಪೋಟಿ ಇದ್ದರೆ, ಜಾತಿವಾರು ಪ್ರಾತಿನಿಧ್ಯದ ಲೆಕ್ಕಾಚಾರದಲ್ಲಿ ಬಳ್ಳಾರಿ ಮತ್ತು ರಾಯಚೂರು ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ವರಿಷ್ಠರ ನಿರ್ಧಾರಕ್ಕೆ ಬಿಡಲಾಗಿದೆ ಎಂದು ಮೂಲಗಳು ಹೇಳಿವೆ.
ಮೂಲ ಕಾರ್ಯಕರ್ತರ ಆಕ್ರೋಶ: ವಿಧಾನಪರಿಷತ್ ಚುನಾವಣೆ ಘೋಷಣೆ ಬಳಿಕ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳಲ್ಲಿ ಪಕ್ಷಾಂತರ ಮತ್ತಷ್ಟು ಬಿರುಸುಗೊಂಡಿದೆ. ಜೆಡಿಎಸ್ನಿಂದ ಪ್ರಾರಂಭವಾದ ಪಕ್ಷಾಂತರ ಈಗ ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿಯೂ ಕಾಣಿಸಿಕೊಂಡಿದೆ. ಮಾಜಿ ಸಚಿವ ಎ.ಮಂಜು ಪುತ್ರನನ್ನು ಕೊಡಗು ಜಿಲ್ಲೆಯಿಂದ ಕಣಕ್ಕಿಳಿಸಲು ಸಿದ್ದರಾಮಯ್ಯ ಮನೆ ಬಾಗಿಲ ತನಕ ಹೋಗಿ ಬಂದಿದ್ದಾರೆ. ಈಗಾಗಲೆ ಬಿಜೆಪಿ ಟಿಕೆಟ್ ಖಾತರಿಪಡಿಸಿಕೊಂಡಿರುವ ಜೆಡಿಎಸ್ನ ಕಾಂತರಾಜ್, ಮನೋಹರ್, ಸಂದೇಶ್ ನಾಗರಾಜ್ ಹಾದಿಯಲ್ಲಿ ಇನ್ನು ಕೆಲ ನಾಯಕರು ಹೆಜ್ಜೆ ಇಟ್ಟಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೇ ದಿನದಂದು ಯಾರ್ಯಾರು ಯಾವ ಪಕ್ಷಕ್ಕೆ ಜಿಗಿಯಲಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ. ಅಚ್ಚರಿ ಎಂದರೆ, ಕಾಂಗ್ರೆಸ್-ಬಿಜೆಪಿಯಿಂದ ಯಾರೂ ಜೆಡಿಎಸ್ ಕಡೆಗೆ ಮುಖ ಮಾಡಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತ್ರ, ‘ನಾವು ಎಲ್ಲ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ’ ಘೋಷಿಸಿದ್ದಾರೆ.
ಮುಂದುವರಿದ ಕಾಂಗ್ರೆಸ್ ಕಸರತ್ತು: ಪರಿಷತ್ನ ಚುನಾವಣೆಯಲ್ಲಿ ಹಿಂದೆ ಬೀಳಬಾರದೆಂದು ತಮ್ಮ ಪಕ್ಷದ ನಾಯಕರಿಗೆ ಪಾಠ ಮಾಡಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ, ವಿಭಾಗವಾರು ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ತೆರಳಿದ್ದಾರೆ. ಚುನಾವಣೆ ಉದ್ದೇಶದಲ್ಲೆ ಭಾನುವಾರ ನಾಲ್ಕು ಸಭೆಗಳು ಪ್ರತ್ಯೇಕವಾಗಿ ನಡೆದಿತ್ತು. ಸೋಮವಾರ ಕೂಡ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರರು ಸಭೆ ನಡೆಸಿ, ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲ ನಿವಾರಿಸಲು ಪ್ರಯತ್ನಿಸಿದರು.