ಕನ್ನಡದ ಶ್ರೀಮಂತಿಕೆ ಇರುವುದೇ ಸಾಹಿತ್ಯದಲ್ಲಿ…. ಸಾಹಿತ್ಯವೆಂದರೆ ಪುಸ್ತಕ… ಆದರೆ, ಕನ್ನಡವನ್ನು ಪೋಷಿಸಿ, ಬೆಳೆಸುವ ಪುಸ್ತಕೋದ್ಯಮಕ್ಕೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ನೀಡಿದ ಪೆಟ್ಟು ಮಾತ್ರ ಸಹಿಸಲು ಸಾಧ್ಯವೇ ಇಲ್ಲದಂಥದ್ದು!
ಕೋವಿಡ್ ಮತ್ತು ಲಾಕ್‌ಡೌನ್ ಕಾಲದಲ್ಲಿ ಸಾಹಿತ್ಯ ಬರೆಯುವವವರಿಗೆ ಯಾವುದೇ ರೀತಿಯಲ್ಲೂ ಕೊರತೆಯಾಗಲಿಲ್ಲ. ಆದರೆ, ಬರೆದ ಮೇಲೆ ಪುಸ್ತಕ ರೂಪದಲ್ಲಿ ಪ್ರಿಂಟ್ ಮಾಡಿ ಮಾರಾಟ ಮಾಡುವ ಪ್ರಕ್ರಿಯೆಗೆ ಮಾತ್ರ ದೊಡ್ಡ ಪೆಟ್ಟು ಬಿದ್ದಿರುವುದು ಸತ್ಯ.
ಕೋವಿಡ್ ಎರಡು ಬಾರಿಯ ಲಾಕ್‌ಡೌನ್ ಹಾಗೂ ಇತರ ನಿರ್ಬಂಧಗಳ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟ ಹಾಗೂ ಪ್ರಕಾಶಕರ ವಲಯಕ್ಕೂ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.
ಎರಡು ಹಂತಗಳ ಲಾಕ್‌ಡೌನ್ ವೇಳೆ ಕನ್ನಡ ಪುಸ್ತಕ ಪ್ರಕಾಶನ ವಲಯಕ್ಕೆ ಸುಮಾರು 3 ಕೋಟಿ ರೂ. ನಷ್ಟವಾಗಿದೆ. ಈ ಅವಧಿಯಲ್ಲಿಯೇ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರು ತಲಾ 20ರಿಂದ 30 ಲಕ್ಷ ರೂ.ನಷ್ಟ ಅನುಭವಿಸಿದ್ದಾರೆ.
ಆನ್‌ಲೈನ್ ಮಾರಾಟಕ್ಕೆ ಅವಕಾಶ ಇತ್ತಾದರೂ ಮಾರಾಟದ ಪ್ರಮಾಣ ತುಂಬಾ ಕಡಿಮೆ ಅಂದರೆ ಶೇ.5ರಷ್ಟು ಮಾತ್ರ ಇತ್ತು. ಹೀಗಾಗಿ ಪುಸ್ತಕ ಮಳಿಗೆಗಳು ಬಂದ್ ಆದ ಕಾರಣ ಮಾರಾಟದ ಮೇಲೂ ಪರಿಣಾಮ ಬೀರಿತ್ತು. ಎಲ್ಲ ಓದುಗರಿಗೂ ಆನ್‌ಲೈನ್‌ನಲ್ಲಿ ಪ್ರಕ್ರಿಯೆ ಬಗ್ಗೆ ಪೂರ್ಣ ಮಾಹಿತಿಯಿಲ್ಲದ ಕಾರಣ ಹೆಸರಾಂತ ಲೇಖಕರ ಕೆಲವು ಪುಸ್ತಕಗಳು ಮಾರಾಟವಾಗಿದ್ದು ಆನ್‌ಲೈನ್ ವಹಿವಾಟು 5 ಲಕ್ಷ ರೂ.ನಡೆದಿದೆ.
ಅರ್ಧದಷ್ಟು ನಷ್ಟ: ಕನ್ನಡ ಪುಸ್ತಕೋದ್ಯಮದಲ್ಲಿ ಪ್ರತೀ ವರ್ಷ ಸುಮಾರು 100 ಕೋಟಿ ರೂ. ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ದಿಢೀರ್ ಎಂದು ಖರೀದಿ ಪ್ರಕ್ರಿಯೆ ಜತೆಗೆ ಓದುಗರ ಸಂಖ್ಯೆ ಕುಸಿಯಿತು. ಒಟ್ಟಾರೆ ವ್ಯಾಪಾರ ವಹಿವಾಟು 50 ಕೋಟಿ ರೂ.ದಿಂದ 60 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ನವ ಕರ್ನಾಟಕ ಪುಸ್ತಕ ಪ್ರಕಾಶನದ ಕಾರ್ಯ ನಿರ್ವಾಹಕ ನಿರ್ದೇಶಕ ಎ.ರಮೇಶ್ ಉಡುಪ ಮಾಹಿತಿ ನೀಡುತ್ತಾರೆ.
ಶಾಲಾ ಕಾಲೇಜುಗಳು ಆರಂಭವಾದರೆ ಅಧಿಕ ಸಂಖ್ಯೆಯಲ್ಲಿ ಪುಸ್ತಕಗಳ ಖರೀದಿ ಪ್ರಕ್ರಿಯೆ ನಡೆಯುತ್ತಿತ್ತು. ಸುಮಾರು 10ರಿಂದ 20 ಕೋಟಿ ರೂ.ಗಳಿಕೆ ಆಗುತ್ತಿತ್ತು. ಆದರೆ ಕೋವಿಡ್ ಅವಾಂತರದಿಂದಾಗಿ ಕಳೆದ 2 ವರ್ಷಗಳಿಂದ ಸಮ ಪ್ರಮಾಣದಲ್ಲಿ ಶಾಲೆಗಳು ತೆರೆದಿರಲಿಲ್ಲ. ಇದು ಕನ್ನಡ ಪುಸ್ತಕೋದ್ಯಮಕ್ಕೆ ಪೆಟ್ಟು ನೀಡಿದೆ ಎನ್ನುತ್ತಾರೆ.