ಹೊಸಪೇಟೆ : ಹುಲಿ-ಸಿಂಹಗಳ ಸಫಾರಿಯಂತೆ ಇನ್ಮುಂದೆ ಕರಡಿ ಸಫಾರಿ ಮಾಡುವ ಮೂಲಕ ಪ್ರವಾಸಿಗರು ಕರಡಿಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.
ಹೌದು! ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡುವ ದೇಶ-ವಿದೇಶಿ ಪ್ರವಾಸಿಗರು, ತಾಲ್ಲೂಕಿನ ಕಮಲಾಪುರ ಸಮೀಪದ ದರೋಜಿ ಕರಡಿಧಾಮಕ್ಕೆ ಭೇಟಿ ನೀಡಿ, ಸಫಾರಿ ಮೂಲಕ ಕರಡಿಗಳ ಚಲನವಲನವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.
ಏಷ್ಯಾ ಖಂಡದ ಮೊಟ್ಟಮೊದಲ ಕರಡಿಧಾಮದತ್ತ ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ಹೊಸ ಪ್ರಯತ್ನ ನಡೆಸಿ. ಕರಡಿ ಸಫಾರಿ ಯೋಜನೆ ತಯಾರು ಮಾಡಿದೆ.
ಹಂಪಿ ಪ್ರವಾಸೋದ್ಯಮದ ಜೊತೆ “ಪರಸರ ಸ್ನೇಹಿ ಪ್ರವಾಸೋದ್ಯಮ”ವನ್ನು ಬೆಳೆಸುವ ಕಾರಣದಿಂದ ಇದೀಗ ಆರಂಭವಾದ ಕರಡಿ ಸಫಾರಿ ಸಹಕಾರಿಯಾಗಲಿದೆ.
ಈ ಹಿಂದೆ ತಮ್ಮ ಸ್ವಂತ ವಾಹನಗಳಲ್ಲಿ ಕರಡಿಧಾಮ ಭೇಟಿಗೆ ಪ್ರವಾಸಿಗರಿಗೆ ಅವಕಾಶವಿತ್ತಾದರೂ ಸಫಾರಿ ವ್ಯವಸ್ಥೆ ಇರಲ್ಲಿಲ್ಲ. ಆದರೆ ಇದೀಗ ಅರಣ್ಯ ಇಲಾಖೆ ಸಫಾರಿ ವಾಹನ ವ್ಯವಸ್ಥೆಯನ್ನು ಮಾಡಿದೆ.
ಈ ಮೂಲಕ ಕರಡಿಧಾಮದ ಒಟ್ಟು ವಾತಾವರಣವನ್ನು ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯಗೈಯಲು ಅರಣ್ಯ ಇಲಾಖೆ ಮುಂದಾಗಿದೆ.
ನೈಸರ್ಗಿಕ ಪರಿಸರವನ್ನು ಉಳಿಸಿ, ಬೆಳೆಸುವ ಮಹತ್ವ, ನೈಸರ್ಗಿಕವಾಗಿ ಲಭ್ಯವಾಗುವ ಹಣ್ಣು ಹಂಪಲಗಳಿಂದ ಆಹಾರ ಪೂರೈಕೆ ಸೇರಿದಂತೆ ಜೀವವೈವಿಧ್ಯತೆಯನ್ನು ಪರಿಚಯಿಸುವ ಕಾರ್ಯ ಈ ಕರಡಿಧಾಮದ ಸಫಾರಿಯಲ್ಲಿ ನಡೆಯಲಿದೆ. ಸುಮಾರು 82 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ದರೋಜಿ ಕರಡಿ ಧಾಮದಲ್ಲಿ ಸುಮಾರು 120 ಕ್ಕೂ ಹೆಚ್ಚು ಕರಡಿಗಳು ವಾಸವಾಗಿವೆ.
ಸಂಪೂರ್ಣ ದರೋಜಿ ಕರಡಿಧಾಮ, ಕಲ್ಲು-ಬಂಡೆಗಳಿಂದ ಆವೃತ್ತವಾದ ಬೆಟ್ಟ-ಗುಡ್ಡಗಳ ಮಧ್ಯ ಗುಹೆಗಳು ಕರಡಿ, ಚಿರತೆ, ಕತ್ತೆ ಕಿರುಬ, ಕಾಡು ಹಂದಿ, ಮುಳ್ಳಹಂದಿ, ನರಿ, ಗುಳ್ಳೆನರಿ, ತೊಳ ಚುಕ್ಕೆ ಪುನಗು, ಮುಂಗುಸಿ, ಮೊಲ, ಬಾವಲಿಗಳು ಸೇರಿದಂತೆ ನಾನಾ ಪ್ರಬೇಧಗಳ ಆವಾಸ ಸ್ಥಾನವಾಗಿದೆ.
ಇನ್ನು ಉತ್ತರ ಕರ್ನಾಟಕದ ವಿಶಿಷ್ಠ ಮರ-ಗಿಡ ಪೊದೆ, ಮೂಲಿಕೆ, ನವಿಲು, ಕಲ್ಲುಕೋಳಿ, ಬುರ್ಲ, ಹದ್ದು, ಪಾರಿವಾಳ, ಗಿಳಿ, ಬೆಳ್ಳಕ್ಕಿ, ಗೂಬೆ ಉಡಾ, ಆಮೇ, ಚಿಟ್ಟೆಗಳು 150 ಹೆಚ್ಚು ವಿವಿಧ ಪ್ರಕಾರದ ಹಕ್ಕಿಗಳ ಆವಾಸಕ್ಕೆ ಯೋಗ್ಯಸ್ಥಾನವಾಗಿದೆ.
ಈ ಎಲ್ಲವನ್ನು ಪರಿಚಯಿಸುವ ಕಾರ್ಯವನ್ನು ದರೋಜಿ ಕರಡಿಧಾಮದ ಸಿಬ್ಬಂದಿಗಳು ತಮ್ಮ ತಜ್ಞರೊಂದಿಗೆ ಸಫಾರಿಯಲ್ಲಿ ಬರುವ ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯ ಮಾಡಲಿದ್ದಾರೆ.