ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿದರು. ನಂತರ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.
ಭಾಷಣದ ವೇಳೆ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಭಾಷಣದ ಪ್ರಮುಖಾಂಶಗಳು ಇಲ್ಲಿವೆ
-ದೇಶದ ಎಲ್ಲ ಯೋಜನೆಗಳು ಶೇ 100ರಷ್ಟು ಜನರಿಗೆ ಸಂಪೂರ್ಣ ತಲುಪಬೇಕು.
-ಕಠಿಣ ಸಮಯದಲ್ಲಿ ದೇಶದ ಅಸಾಮಾನ್ಯ ಹೋರಾಟ ನಡೆಸಿದೆ. ಕರ್ತವ್ಯದ ಮೂಲಕ ಕೋವಿಡ್ ಎದುರು ಸಮರವನ್ನು ನಡೆಸಿದೆ. ಸಾಕಷ್ಟು ತಾಳ್ಮೆಯಿಂದ ಕೋವಿಡ್ ವಿರುದ್ಧ ಹೋರಾಟ ನಡೆಸಿದೆ.
-ಈವರೆಗೂ ದೇಶದ 54 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ತಲುಪಿದೆ.
-‘ಸಬ್‌ಕಾ ಸಾತ್ ಸಬ್‌ಕಾ ವಿಕಾಸ್- ಸಬ್‌ಕಾ ವಿಶ್ವಾಸ್’ನಲ್ಲಿ ನಾವೆಲ್ಲರೂ ನಂಬಿಕೆ ಇಟ್ಟಿದ್ದೇವೆ. ನಮ್ಮ ಎಲ್ಲರ ಗುರಿಯನ್ನು ಸಾಧಿಸಲು ‘ಸಬ್‌ಕಾ ಸಾತ್ ಸಬ್‌ಕಾ ವಿಕಾಸ್-ಸಬ್‌ಕಾ ವಿಶ್ವಾಸ್ ಮತ್ತು ಸಬ್‌ಕಾ ಪ್ರಯಾಸ್ – ಎಲ್ಲರ ಜೊತೆ, ಎಲ್ಲರ ಏಳ್ಗೆ- ಎಲ್ಲರ ಪ್ರಯತ್ನ’ ಅತ್ಯಗತ್ಯವಾಗಿದೆ ಎಂದು ನಾನು ಈಗ ಘೋಷಣೆ ಮಾಡುತ್ತಿದ್ದೇನೆ.
-ಲಡಾಖ್‌ನಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಲಡಾಖ್‌ನ ‘ಇಂಡಸ್ ಸೆಂಟ್ರಲ್ ಯೂನಿವರ್ಸಿಟಿ’ ದೇಶದ ಉನ್ನತ ಶಿಕ್ಷಣ ಕೇಂದ್ರವಾಗಲಿದೆ.
-ಆಧುನಿಕ ಜಗತ್ತಿನಲ್ಲಿ ಎಲ್ಲ ರೀತಿಯ ತಂತ್ರಜ್ಞಾನ, ಮೂಲಸೌಕರ್ಯಗಳ ಅಭಿವೃದ್ಧಿಗೆ, ಅಳವಡಿಕೆಗೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕಿದೆ.
-ಭಾರತ ಸರ್ಕಾರವು ಇ-ಕಾಮರ್ಸ್ ವೇದಿಕೆ ಶುರು ಮಾಡಲಿದ್ದು, ಹಳ್ಳಿಯ ಕರಕುಶಲಕರ್ಮಿಗಳಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ಹಳ್ಳಿಯ ಅಭಿವೃದ್ಧಿ ಪಥವು ಹೊಸ ಆಯಾಮವನ್ನು ಪಡೆಯುತ್ತಿದೆ. ಹಳ್ಳಿಗಳಲ್ಲಿ ಡಿಜಿಟಲ್ ಉದ್ಯಮಿಗಳೂ ರೂಪುಗೊಳ್ಳುತ್ತಿದ್ದಾರೆ.
-ಸ್ವಾಮಿತ್ವ ಯೋಜನೆಯು ಗ್ರಾಮೀಣ ಭಾರತದ ಬದುಕನ್ನು ಬದಲಿಸುತ್ತಿದೆ. ಗ್ರಾಮೀಣ ಜನರ ಭೂಮಿ ನಕ್ಷೆ ರೂಪಿಸಲು ಡ್ರೋನ್‌ಗಳು ಸಹಕಾರಿಯಾಗಿವೆ .
-‘ಸಣ್ಣ ಇಳುವರಿದಾರರ ಮೇಲೆ ಸರ್ಕಾರ ಗಮನಹರಿಸಿದೆ. 10 ಕೋಟಿ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹1.5 ಲಕ್ಷ ಕೋಟಿ ಸಂದಾಯವಾಗಿದೆ’.
-ದೇಶದ 75ನೇ ಸ್ವಾತಂತ್ರೋತ್ಸವದ 75 ವಾರಗಳ ಆಚರಣೆಗೆ ಪಣತೊಟ್ಟಿದ್ದೇವೆ. 2021ರ ಮಾರ್ಚ್ 12ರಿಂದ 2023ರ ಆಗಸ್ಟ್ 15ರವರೆಗೂ ‘ಅಮೃತ ಮಹೋತ್ಸವ’ ನಡೆಯಲಿದೆ. ಭಾರತೀಯ ರೈಲ್ವೆ ಸಹ ದೇಶದ ಜೊತೆಗೆ ಮಹತ್ತರ ಪರಿವರ್ತನೆಯನ್ನು ಕಂಡಿದೆ.
-ಭಾರತದಲ್ಲಿರುವ ಎಲ್ಲ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ಸಿಗಲಿದ್ದು, ಅಲ್ಲಿ ಶಿಕ್ಷಣ ಪಡೆಯಬಹುದಾಗಿದೆ.
-ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಣೆ. ನಾವು ಭಾರತವನ್ನು ಹಸಿರು ಜಲಜನಕದ ಉತ್ಪಾದನೆ ಮತ್ತು ರಫ್ತು ಮಾಡುವ ಕೇಂದ್ರವನ್ನಾಗಿಸಬೇಕು.
-ಜನ ಔಷಧಿ ಯೋಜನೆಯಿಂದಾಗಿ ಬಡವರು, ಅಗತ್ಯವಿರುವವರಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಸಿಗುತ್ತಿವೆ. 75,000 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬ್ಲಾಕ್ ಮಟ್ಟದಲ್ಲಿ ಆಸ್ಪತ್ರೆಗಳ ಸಂಪರ್ಕದ ಕುರಿತು ಕಾರ್ಯಾಚರಿಸುತ್ತಿದ್ದೇವೆ.
-ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಿದೆ. ವಿದ್ಯಾರ್ಥಿಗಳು ತಮ್ಮ ಮನಸ್ಸಿಗೆ ಆಪ್ತವಾಗಿರುವ ಭಾಷೆಯಲ್ಲಿ ಪಾಠವನ್ನು ಕಲಿಯಲು ಅವಕಾಶವಾದರೆ, ಖಂಡಿತವಾಗಿಯು ಅದು ದೊಡ್ಡ ವಿಶ್ವಾಸವನ್ನು ಮೂಡಿಸಲಿದೆ ಎಂದು ಪ್ರಧಾನಿ ಹೇಳಿದರು.