ಗದಗ: ಅವರು ಅತಿಥಿ ಉಪನ್ಯಾಸಕ ವೃತ್ತಿ ಮಾಡುತ್ತಿದ್ದರು. ಆದರೆ ಈ ಉಪನ್ಯಾಸಕ ವೃತ್ತಿಯಿಂದ ಅವರ ಹೊಟ್ಟೆ ತುಂಬುತ್ತಿರಲಿಲ್ಲ. ಹೀಗಾಗಿ ಬದುಕು ಸಾಗಿಸಲು ಏನಾದರು ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಮೊಬೈಲ್ನಲ್ಲಿ ಅವರಿಗೆ ಮುಂದಿನ ಜೀವನದ ದಾರಿ ಸಿಕ್ಕಿದೆ. ಅಂದು ಯೂಟ್ಯೂಬ್ನಲ್ಲಿ ಗುಲಾಬಿ ಕೃಷಿ ( Agriculture) ಹೇಗೆ ಮಾಡುತ್ತಾರೆ ಎಂದು ಮಾಹಿತಿ ಪಡೆದಿದ್ದ ಅತಿಥಿ ಉಪನ್ಯಾಸಕ, ತಮ್ಮ ಜೀವನದಲ್ಲಿ ಅದೇ ಮಾರ್ಗ ಅನುಸರಿಸಿ, ಭರ್ಜರಿ ಗುಲಾಬಿ ಹೂ (Rose) ಬೆಳೆದು, ಹೂವಿನಂತ ಬದುಕು ಕಟ್ಟಿಕೊಂಡಿದ್ದಾರೆ.
ಪಾಠ ಹೋಳೋದನ್ನು ಬಿಟ್ಟು ಕೃಷಿ ಕೆಲಸದಲ್ಲಿ ಮಗ್ನರಾದ ಅತಿಥಿ ಉಪನ್ಯಾಸಕ ಈರಪ್ಪ ಕಟಗಿ, ಗದಗ ತಾಲೂಕಿನ ಶಿರುಂಜ ಗ್ರಾಮದ ನಿವಾಸಿ. ಎಂಎ ಮುಗಿಸಿಕೊಂಡು ಗದಗ, ಮುಳಗುಂದ ಸೇರಿದಂತೆ ನಾನಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಇಲ್ಲಿ ಕೊಡುವ ಮೂರ್ನಾಲ್ಕು ಸಾವಿರ ರೂಪಾಯಿಯಲ್ಲಿ ಇವರಿಗೆ ಬದುಕು ಸಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ ಏನಾದರೂ ಮಾಡಬೇಕು ಎನ್ನುವ ಚಿಂತೆ ಕಾಡುತ್ತಿತ್ತು.
ಬಳಿಕ ಯೂಟ್ಯೂಬ್ ನೋಡುವಾಗ ಗುಲಾಬಿ ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ತಡಮಾಡದೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ, ತಮ್ಮ ಪಿತ್ರಾರ್ಜಿತ ಎರಡುವರೆ ಎಕರೆ ಜಮೀನಿನಲ್ಲಿ ಗುಲಾಬಿ ಕೃಷಿ ಮಾಡಲು ಆರಂಭ ಮಾಡಿದ್ದಾರೆ. ಈ ಹಿಂದೆ ತಿಂಗಳಿಗೆ ಮೂರ್ನಾಲ್ಕು ಸಾವಿರ ರೂಪಾಯಿ ಪಡೆಯುತ್ತಿದ್ದ, ಶಿಕ್ಷಕ ತಮ್ಮ ಜಮೀನಿನಲ್ಲಿ ಗುಲಾಬಿ ಬೆಳೆದು ತಿಂಗಳಿಗೆ 30 ಸಾವಿರ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಅಲ್ಲದೆ ವರ್ಷಕ್ಕೆ ಈ ಹೂವಿನಿಂದ 3 ರಿಂದ ನಾಲ್ಕು 4 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.
ಶಿಕ್ಷಕ ವೃತ್ತಿಗೆ ಗುಡ್ಬೈ ಹೇಳಿ ಕೃಷಿಯಲ್ಲಿ ಪ್ರಯೋಗ!
ಗದಗ ಜಿಲ್ಲೆಯಲ್ಲಿ ಗುಲಾಬಿ ಹೂವಿನ ಕೃಷಿ ಮಾಡುವವರ ಸಂಖ್ಯೆ ಬಹಳ ಕಡಿಮೆ. ಆದರೂ ಹೊಸ ಬೆಳೆಯನ್ನು ಬೆಳೆದು ಉಪನ್ಯಾಸಕ ಸೈ ಎನಿಸಿಕೊಂಡಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ ಗಿಡದಿಂದ ಗಿಡಕ್ಕೆ 4 ಅಡಿ ಅಂತರದಲ್ಲಿ 6 ಸಾವಿರ ಗಿಡಗಳನ್ನು ನಾಟಿ ಮಾಡಿದ್ದಾರೆ. ಬೆಂಗಳೂರು ಬಳಿಯ ಸರ್ಜಾಪುರ ನರ್ಸರಿಯಿಂದ ಗ್ಲ್ಯಾಡಿಯೇಟರ್, ಬ್ಲ್ಯಾಕ್ ಮ್ಯಾಜಿಕ್, ಮೋದಿ ರೆಡ್, ಮ್ಯಾಂಗೋ ಯಲೋ, ಎನ್ನುವ ತಳಿಗಳ ಗುಲಾಬಿ ಗಿಡಗಳನ್ನು ನಾಟಿ ಮಾಡಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ ಭರ್ಜರಿ ಗುಲಾಬಿ ಹೂವು ಬೆಳೆದ ಉಪನ್ಯಾಸಕ
ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಗುಲಾಬಿ ಕೃಷಿ ಮಾಡುತ್ತಿದ್ದು, ಸ್ಥಳೀಯವಾಗಿಯೇ ಉತ್ತಮವಾದ ಮಾರುಕಟ್ಟೆ ಇರುವುದರಿಂದ ಗದಗ-ಹುಬ್ಬಳ್ಳಿಯಲ್ಲಿಯೇ ಗುಲಾಬಿ ಹೂಗಳನ್ನು ಮಾರಾಟ ಮಾಡಬಹುದು. ಇನ್ನೂ ಸಾವಯವ ಕೃಷಿ ಪದ್ಧತಿ ಹಾಗೂ ರಾಸಾಯನಿಕ ಪದ್ಧತಿ ಮೂಲಕ ಕೃಷಿ ಮಾಡುತ್ತಿದ್ದು, ಇದರಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ ಎಂದು ಮಾದರಿ ಕೃಷಿಕ ಈರಪ್ಪ ಕಟಗಿ ಹೇಳಿದ್ದಾರೆ.
ಅಂದು ಉಪನ್ಯಾಸಕ ವೃತ್ತಿಯಿಂದ ಬದುಕು ಸಾಗಿಸಲು ಪರದಾಟ ನಡೆಸಿದ್ದ ಶಿಕ್ಷಕ. ಇಂದು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ನೋಡಿ ಕಾಲ ಹರಣ ಮಾಡುವವರ ಸಂಖ್ಯೆಯೇ ಹೆಚ್ಚಳ. ಹೀಗಿರುವಾಗ ಈ ಅತಿಥಿ ಉಪನ್ಯಾಸಕ ಬದುಕನ್ನೇ ಬಂಗಾರವನ್ನಾಗಿಸುವಂತೆ ಗುಲಾಬಿ ಹೂವು ಬೆಳೆಸಿದ್ದಾರೆ. ಒಟ್ಟಾರೆ ಮನಸ್ಸು ಮಾಡಿದರೆ ಏನಾದರೂ ಮಾಡಿ ಬದುಕು ಕಟ್ಟಿಕೊಳ್ಳಬಹುದು ಎನ್ನುವುದಕ್ಕೆ ಈ ಉಪನ್ಯಾಸಕ ಉತ್ತಮ ಉದಾಹರಣೆಯಾಗಿದ್ದಾರೆ.