ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಕೊರೊನಾ ನಿಯಂತ್ರಣ ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದು, ಇದೀಗ ಭಾನುವಾರ ಲಾಕ್‍ಡೌನ್ ದಿನ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ.
ರಾಜ್ಯಾದ್ಯಂತ ಕೊರೊನಾ ಸ್ಫೋಟವಾಗುತ್ತಿದೆ. ಪ್ರತಿ ದಿನ ಸಾವಿರದ ಲೆಕ್ಕದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇನ್ನೊಂದೆಡೆ ಸಿಲಿಕಾನ್ ಸಿಟಿ ಕೊರೊನಾ ಹಬ್ ಆಗಿ ಮಾರ್ಪಟ್ಟಿದ್ದು, ಪ್ರತಿ ದಿನ ನೂರಾರು ಪ್ರಕರಣಗಳು ಕಂಡು ಬರುತ್ತಿವೆ. ಸರ್ಕಾರಕ್ಕೆ ಕೊರೊನಾ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಭಾನುವಾರ ಲಾಕ್‍ಡೌನ್ ಮಾಡುವ ನಿಯಮ ಜಾರಿಗೆ ತಂದಿದೆ. ಮಾತ್ರವಲ್ಲದೆ ನೈಟ್ ಕರ್ಫ್ಯೂ ಅವಧಿಯನ್ನು ಸಹ ಹೆಚ್ಚಿಸಿದೆ. ಇದೀಗ ಭಾನುವಾರದ ಲಾಕ್‍ಡೌನ್ ದಿನ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಸಹ ನಿಷೇಧಿಸಿದೆ
ಲಾಕ್‍ಡೌನ್ ದಿನದಂದು ವಾಹನ ದಟ್ಟಣೆ, ಜನರ ಒಡಾಟ ಕಡಿಮೆ ಮಾಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಹೀಗಾಗಿ ಸಂಡೇ ಲಾಕ್‍ಡೌನ್ ದಿನ ಬಸ್ ಸಂಚಾರವಿರುವುದಿಲ್ಲ. ಜುಲೈ 5 ರಿಂದ ಆಗಸ್ಟ್ 2ರ ವರೆಗೆ ಭಾನುವಾರದಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ರದ್ದು ಮಾಡಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಚಾರ ಬಂದ್ ಮಾಡಲಾಗಿದ್ದು, ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ರಾತ್ರಿ ಕರ್ಫ್ಯೂ ಅವಧಿ ಅಂದರೆ, ರಾತ್ರಿ 8ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಅವಶ್ಯಕತೆಗೆ ತಕ್ಕಂತೆ ಬಸ್‍ಗಳ ಸಂಚಾರ ವಿರಳವಾಗಿರಲಿದೆ.