ಇಂಫಾಲ್: ಪಿತ್ತಜನಕಾಂಗದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಭಾರತೀಯ ಬಾಕ್ಸರ್ ಡಿಂಕೊ ಸಿಂಗ್ ಅವರನ್ನು ಸ್ಪೈಸ್ ಜೆಟ್ ಏರ್ ಅಂಬುಲೆಂನ್ಸ್ ಮೂಲಕ ದೆಹಲಿಯ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ.
ಡಿಂಕೊ ಸಿಂಗ್ ಭಾರತದ ಪರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಣಿಪುರದ ರಾಜಧಾನಿ ಇಂಫಾಲ್‍ನಲ್ಲಿ ವಾಸಿಸುತ್ತಿರುವ 41 ವರ್ಷದ ಡಿಂಕೊ ಅವರಿಗೆ ಲಾಕ್‍ಡೌನ್‍ನಿಂದಾಗಿ ವಿಕಿರಣ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆಗಾಗಿ ಅವರನ್ನು ಸ್ಪೈಸ್ ಜೆಟ್‍ನ ಏರ್ ಅಂಬುಲೆನ್ಸ್ ಮೂಲಕ ಇಂಫಾಲ್‍ನಿಂದ ದೆಹಲಿಗೆ ಕರೆತರಲು ಸಿದ್ಧತೆ ನಡೆದಿದೆ.
ಬಾಕ್ಸರ್ ಡಿಂಕೊ ಸಿಂಗ್ ಅವರಿಗೆ ಸ್ಪೈಸ್ ಜೆಟ್ ಸಂಸ್ಥೆಯು ಉಚಿತವಾಗಿ ಏರ್ ಅಂಬುಲೆನ್ಸ್ ಸೇವೆ ನೀಡಲು ಮುಂದೆ ಬಂದಿದೆ. ಈ ನಿರ್ಧಾರವನ್ನು ಸ್ಪೈಸ್‍ಜೆಟ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಪ್ರಕಟಿಸಿದ್ದಾರೆ. ಅಜಯ್ ಸಿಂಗ್ ಅವರು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ (ಬಿಎಫ್‍ಐ) ಅಧ್ಯಕ್ಷರೂ ಆಗಿದ್ದಾರೆ.
ಹಿರಿಯ ಬಾಕ್ಸರ್ ಗಳಾದ ವಿಜೇಂದರ್ ಸಿಂಗ್ ಮತ್ತು ಭಾರತದ ಮನೋಜ್ ಕುಮಾರ್ ಕೂಡ ಅರ್ಜುನ್ ಮತ್ತು ಪದ್ಮಾ ಪ್ರಶಸ್ತಿ ಪುರಸ್ಕೃತ ಡಿಂಕೊ ಸಿಂಗ್ ಅವರಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸುತ್ತಿದ್ದಾರೆ. ”ನಾವು ವಾಟ್ಸಾಪ್ ಗ್ರೂಪ್ ‘ಹಮ್ ಮೇನ್ ಹೈ ದಮ್’ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದೇವೆ. ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಸಂಗ್ರಹಿಸಿದ್ದೇವೆ. ಅದು ನೇರವಾಗಿ ಡಿಂಕೊ ಅವರ ಖಾತೆಗೆ ಹೋಗುತ್ತದೆ” ಎಂದು ವಿಜೇಂದರ್ ಹೇಳಿದ್ದಾರೆ.
ಡಿಂಕೊ ಸಿಂಗ್ ಅವರನ್ನು ಏಪ್ರಿಲ್ 25ರಂದು ದೆಹಲಿಗೆ ಕರೆತರಲಾಗುವುದು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಜಯ್ ಸಿಂಗ್, ”ಲಾಕ್‍ಡೌನ್‍ನಿಂದಾಗಿ ಡಿಂಕೊ ಸಿಂಗ್ ಅವರ ಚಿಕಿತ್ಸೆ ಮಧ್ಯದಲ್ಲಿ ನಿಂತುಹೋಯಿತು. ಇದು ನಿಜವಾಗಿಯೂ ದುರದೃಷ್ಟಕರ. ನಮ್ಮ ದೇಶದ ವೀರನಿಗೆ ಏರ್ ಅಂಬುಲೆನ್ಸ್ ಸೇವೆಯನ್ನು ಒದಗಿಸುವುದು ಮತ್ತು ಅವರನ್ನು ದೆಹಲಿಗೆ ಕರೆತರುವುದು ಸ್ಪೈಸ್‍ಜೆಟ್‍ಗೆ ಒಂದು ಭಾಗ್ಯವಾಗಿದೆ. ಭಾರತೀಯ ಬಾಕ್ಸರ್ ಡಿಂಕೊ ಅನೇಕ ದೊಡ್ಡಮಟ್ಟದ ಪಂದ್ಯಗಳನ್ನು ಗೆದ್ದಿದ್ದಾರೆ. ಈ ಯುದ್ಧದಲ್ಲಿಯೂ ಅವರು ಗೆಲ್ಲಬೇಕು ಎಂಬುದು ನಮ್ಮ ಪ್ರಾರ್ಥನೆ” ಎಂದು ತಿಳಿಸಿದ್ದಾರೆ.
ಈ ಹಿಂದೆ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಮಣಿಪುರ ಸರ್ಕಾರದೊಂದಿಗೆ ಮಾತನಾಡಿ ಡಿಂಕೊ ಸಿಂಗ್ ಅವರ ಚಿಕಿತ್ಸೆಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಿದ್ದರು. 1998ರಲ್ಲಿ ಬ್ಯಾಂಕಾಕ್‍ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಬಾಂಟಮ್‍ವೈಟ್ ಬಾಕ್ಸರ್ ಡಿಂಕೊ ಸಿಂಗ್ ಚಿನ್ನದ ಪದಕ ಗೆದ್ದರು.