Breaking News

ಕೃಷ್ಣಾ ಐತೀರ್ಪು ಅಧಿಸೂಚನೆ ಜಾರಿಗೆ ಯತ್ನ: ಸಚಿವರು ರಮೇಶ ಜಾರಕಿಹೊಳಿ

Spread the love

ಆಲಮಟ್ಟಿ(ಜು.23): ನ್ಯಾಯಮೂರ್ತಿ ಬ್ರಿಜೇಷ ಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣ ಪ್ರಾಧಿಕಾರ ತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಶೀಘ್ರ ಹೊರಡಿಸಲು ರಾಜ್ಯ ಸರ್ಕಾರ ಸತತ ಪ್ರಯತ್ನಿಸು​ತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಇಲ್ಲಿನ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಬುಧವಾರ ನೆರೆ ಹಾವಳಿ ಪೀಡಿತ ಐದು ಜಿಲ್ಲೆಗಳ (ವಿಜಯಪುರ, ಬಾಗಲಕೋಟೆ, ಬೆಳಗಾವಿ, ಯಾದಗಿ​ರಿ, ರಾಯಚೂರು) ಜಿಲ್ಲಾಡಳಿತದೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಗೆಜೆಟ್‌ ನೋಟಿಫಿಕೇಶನ್‌ಗೆ ಕೃಷ್ಣಾ ನದಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ಪ್ರಕರಣ ದಾಖಲಾಗಿದ್ದು, ಅದು ಅಡ್ಡವಾಗಿದೆ. ಕೊರೋನಾ ಸಂಬಂಧ ನ್ಯಾಯಾಲಯಗಳು ಕಲಾಪ ನಡೆಸುತ್ತಿಲ್ಲ.

ಹೀಗಾಗಿ ಆ ಪ್ರಕರಣಗಳ ಇತ್ಯರ್ಥ ತಡವಾಗಿದೆ. ಶೀಘ್ರವೇ ಕೇಂದ್ರ ಸರ್ಕಾರ ನೋಟಿಫಿಕೇಶನ್‌ ಹೊರಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀರಾವರಿ ವಿಷಯದಲ್ಲಿ ನಿರಂತರ ಮೋಸ: ಸಚಿವ ರಮೇಶ್‌ ಜಾರಕಿಹೊಳಿ

ನೆರೆ ಹಾವಳಿ ತಡೆಗೆ ಶೀಘ್ರ ಸಭೆ:

2019ರಲ್ಲಿ ಸಂಭವಿಸಿದ ಕೃಷ್ಣೆಯ ಪ್ರವಾಹ ಪ್ರತಿ 100 ವರ್ಷಕ್ಕೊಮ್ಮೆ ಸಂಭವಿಸುವ ಪ್ರವಾಹ. 1904ರಲ್ಲಿ ಈ ರೀತಿಯ ಪ್ರವಾಹ ಸ್ಥಿತಿ ಉಂಟಾಗಿತ್ತು. ಪ್ರವಾಹ ನಿಯಂತ್ರಣಕ್ಕೆ ಏನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಈ ಬಾರಿ ಸಾಕಷ್ಟುಮುಂಜಾಗ್ರತೆ ಕ್ರಮ ಅನುಸರಿಸಲಾಗುತ್ತಿದೆ. ಪ್ರವಾಹ ನಿಯಂತ್ರಣಕ್ಕಾಗಿ ಈ ವರ್ಷ ಸದ್ಯ ಆಲಮಟ್ಟಿಜಲಾಶಯದ ಮಟ್ಟವನ್ನು ಎರಡು ಮೀಟರ್‌ ಕಡಿಮೆ ನೀರು ಸಂಗ್ರಹಿಸಲಾಗಿದೆ ಎಂದರು.ಪ್ರವಾಹ ನಿಯಂತ್ರಣಕ್ಕಾಗಿ ಸಮನ್ವಯ ಸಾಧಿಸಲು ಕೊರೋನಾ ಹಾವಳಿಯ ಮಧ್ಯೆಯೂ ಮುಂಬೈಗೆ ಹೋಗಿ ಅಲ್ಲಿನ ನೀರಾವರಿ ಸಚಿವರ ಜತೆ ಮಾತುಕತೆ ಮಾಡಿದ್ದೇನೆ. ಜತೆಗೆ ಸಾಂಗ್ಲಿ ಜಿಲ್ಲಾಡಳಿತದ ಜತೆಯೂ ಮಾತುಕತೆ ನಡೆಸಿದ್ದೇನೆ ಎಂದರು. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಸಾಂಗ್ಲಿ, ಮಿರಜ ಜಿಲ್ಲಾಡಳಿತ ಸೇರಿ ಕೊಲ್ಹಾಪುರದಲ್ಲಿ ಶೀಘ್ರವೇ ಸಭೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಂತಿಮಗೊಳಿಸಲಾಗುವುದು ಎಂದರು.

ಕಲ್ಲೋಲ ಬ್ಯಾರೇಜ್‌:

ರಾಜಾಪುರ ಬ್ಯಾರೇಜ್‌ನಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಲ ಬ್ಯಾರೇಜ್‌ನಲ್ಲಿ ನೀರಿನ ಹರಿವು ಗಮನಿಸಿ ಆಲಮಟ್ಟಿಹೊರಹರಿವನ್ನು ನಿರ್ಧರಿಸಲಾಗುವುದು. ಅಲ್ಲಿಂದ ಆಲಮಟ್ಟಿಗೆ ನೀರು ಬರಲು ಕನಿಷ್ಠ ಒಂದೂವರೇ ದಿನ ಬೇಕಾಗುತ್ತದೆ ಎಂದರು.

ಅನುದಾನ:

ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು . 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಹೇಳಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಅನುದಾನ ಅಷ್ಟುಪ್ರಮಾಣದಲ್ಲಿ ಬರದಿದ್ದರೂ, ಈ ವರ್ಷ ಕೈಗೊಳ್ಳಬೇಕಾದ ಯಾವುದೇ ನೀರಾವರಿ ಯೋಜನೆಗಳಲ್ಲಿ ಕಡತ ಉಂಟಾಗುವುದಿಲ್ಲ ಎಂದರು.

ಮಹಾರಾಷ್ಟ್ರದಿಂದ ನೀರು:

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕರ್ನಾಟಕದ ಕೃಷ್ಣಾ ಕಣಿವೆಯಲ್ಲಿ ಉಂಟಾಗುತ್ತಿದೆ. ಹೀಗಾಗಿ ಬೇಸಿಗೆಯಲ್ಲಿ ನಾಲ್ಕರಿಂದ ಐದು ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರದಿಂದ ಪಡೆಯುವ ಚರ್ಚೆ ನಡೆದಿದೆ. ಅವರಿಗೆ ಕರ್ನಾಟಕದಿಂದ ತುಬಚಿ-ಬಬಲೇಶ್ವರ ಕಾಲುವೆಯ ಮೂಲಕ ಮಹಾರಾಷ್ಟ್ರದ ಜತ್ತ ತಾಲೂಕಿಗೆ ಎರಡು ಟಿಎಂಸಿ ಅಡಿ ನೀರು ಕೊಡಬೇಕೆನ್ನುವ ಪ್ರಸ್ತಾಪವಿದೆ. ಈ ಬಗ್ಗೆ ಎರಡು ರಾಜ್ಯಗಳ ಮಧ್ಯೆ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಿದ್ಧ:

ಸಂತ್ರಸ್ತರ ತ್ಯಾಗದಿಂದ ಈ ಭಾಗ ನೀರಾವರಿಗೆ ಒಳಪಟ್ಟಿದೆ. ಅವರ ಸಮಸ್ಯೆಗಳಾದ ಉದ್ಯೋಗದಲ್ಲಿ ಮೀಸಲಾತಿ, ಪುನರ್ವಸತಿ ಕೇಂದ್ರಗಳ ಮೂಲಭೂತ ಸೌಲಭ್ಯ ಕಲ್ಪಿಸುವಿಕೆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಶಾಸಕರಾದ ಎ.ಎಸ್‌. ಪಾಟೀಲ ನಡಹಳ್ಳಿ, ಮಹೇಶ ಕುಮಟಗಿ, ಕೆಬಿಜೆಎನ್‌ಎಲ್‌ ಅಧಿಕಾರಿಗಳಾದ ಬಿ.ಎಸ್‌. ಪಾಟೀಲ, ಕೆ. ಹನುಮಂತಪ್ಪ, ವಿ.ಜಿ. ಕುಲಕರ್ಣಿ ಇನ್ನಿತರರು ಇದ್ದರು

ನೀರಿನ ಹರಿವು ನೋಡಲು ಅಧಿಕಾರಿ ನೇಮಕ

ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ನೀರಿನ ಹರಿವನ್ನು ನೋಡಲು ಕರ್ನಾಟಕದ ನೀರಾವರಿ ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು. ಪ್ರತಿ ವರ್ಷ ಮಹಾರಾಷ್ಟ್ರದ ಅಧಿಕಾರಿಯೂ ಆಲಮಟ್ಟಿಗೆ ಬರುತ್ತಾರೆ. ಹೀಗಾಗಿ ನಮ್ಮೊಬ್ಬ ಅಧಿಕಾರಿಯನ್ನು ಅಲ್ಲಿ ನೆರೆ ಸಂದರ್ಭದಲ್ಲಿ ನಿಯೋಜಿಸಿ ನೀರಿನ ಹರಿವಿನ ಮಾಹಿತಿ ಸಂಗ್ರಹಿಸಲಾಗುವುದು ಎಂದರು. ಪ್ರವಾಹ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಸಮಿತಿ ರಚಿಸಲಾಗಿದ್ದು, ಕಂದಾಯ, ಕೆಬಿಜೆಎನ್‌ಎಲ್‌ ಅಧಿಕಾರಿಗಳು ಸೇರಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಜಾರ​ಕಿ​ಹೊಳಿ ವಿವರಿಸಿದರು.

ಹಂತ ಹಂತವಾಗಿ ಆಲ​ಮಟ್ಟಿ ಎತ್ತರ

ಆಲಮಟ್ಟಿ ಜಲಾಶಯವನ್ನು ಹಂತ ಹಂತವಾಗಿ ಎತ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಬೇಕು. ಮೊದಲು 522 ಮೀ, ನಂತರ 523 ಮೀ, ಕೊನೆ ಹಂತದಲ್ಲಿ 524.256 ಮೀ.ಗೆ ಎತ್ತರಿಸಬೇಕಿದೆ ಎಂಬ ಬಗ್ಗೆ ಚಿಂತನೆ ನಡೆದಿದೆ. ಆದರೆ ಅದು ಅಂತಿಮಗೊಂಡಿಲ್ಲ. ಹಂತ ಹಂತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು ಎಂದು ಸಚಿವ ಜಾರ​ಕಿ​ಹೊಳಿ ಹೇಳಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ