ಕೊರೋನಾ ವೈರಸ್ ಇನ್ನೂ ತನ್ನ ಕಬಂದಬಾಹುವನ್ನ ಚಾಚುತ್ತಲೇ ಇದೆ. ಮಾರ್ಚ್ ತಿಂಗಳ ಕೊನೆಯಲ್ಲಿ ಪ್ರಾರಂಭವಾದ ವೈರಸ್ ಅಕ್ಟೋಬರ್ ಬಂದರೂ ಕಡಿಮೆಯಾಗದೆ, ಇನ್ನೂ ಹೆಚ್ಚುತ್ತಲೆ ಇದೆ. ಮಾರ್ಚ್ ತಿಂಗಳಲ್ಲಿ ಕೊರೋನಾ ಹರಡುವಿಕೆಯ ಸರಪಳಿ ತುಂಡರಿಸಲು ಕೇಂದ್ರ ಸರ್ಕಾರ ಲಾಕ್‌ಡೌನ್ ನಿಯಮಾವಳಿಯನ್ನ ಜಾರಿಗೆ ತಂದಿತ್ತು. ಜನರು ಯಾರೂ ಅನಗತ್ಯವಾಗಿ ಓಡಾಡಬಾರದು, ಊರಿನಿಂದ ಊರಿಗೆ ಅಷ್ಟೆ ಅಲ್ಲ ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ ಹೋಗುವುದನ್ನು ಸಹ ನಿಷೇಧಿಸಿತ್ತು.
ಅನಗತ್ಯ ಓಡಾಡಿದವರ ವಾಹನಗಳನ್ನ ಸಹ ಪೊಲೀಸ್ ಇಲಾಖೆ ಸೀಜ್ ಮಾಡಿತ್ತು.
ಅನಗತ್ಯ ಸಂಚಾರ ಮಾಡುತ್ತಿದ್ದವರ ವಾಹನಗಳನ್ನು ಸೀಜ್ ಮಾಡಿರುವುದು ಹಾಗೂ ಲಾಕ್‌ಡೌನ್ ನಿಂದ ಜನರು ಬೆಂಗಳೂರು ಬಿಟ್ಟು ಹಳ್ಳಿ ಸೇರಿಕೊಂಡಿರುವುದು ಪೊಲೀಸರಿಗೆ ತಲೆಬಿಸಿಯಾಗಿದೆ. ಹೌದು ಲಾಕ್‌ಡೌನ್‌ಗು ಮೊದಲು ವಿವಿಧ ಪ್ರಕರಣಗಳಲ್ಲಿ ಪೊಲೀಸರು ಅನೇಕ ಬೈಕ್, ಆಟೋ, ಕಾರುಗಳನ್ನ ಸೀಜ್ ಮಾಡಿದ್ರು. ಲಾಕ್ ಡೌನ್ ವೇಳೆಯೂ ಅನಗತ್ಯ ಸಂಚಾರ ಮಾಡುತ್ತಿದ್ದ ನೂರಾರು ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದರು.
ಆದ್ರೆ ಲಾಕ್‌ಡೌನ್‌ನಿಂದಾಗಿ ವಶಕ್ಕೆ ಪಡೆದ ವಾಹನಗಳು ಪೊಲೀಸರಿಗೆ ಹೊರೆಯಾಗಿವೆ. ಅನ್ಲಾಕ್ 1.0 ವೇಳೆ ಕೆಲವರು ದಂಡ ಕಟ್ಟಿ ತಮ್ನ ವಾಹನಗಳನ್ನ ಬಿಡಿಸಿಕೊಂಡು ಹೋಗಿದ್ದರೆ.. ಇನ್ನು ಹಲವರು ತಮ್ಮ ಗಾಡಿಯ ಪರಿಸ್ಥಿತಿ ಏನಾಗಿದೆ ಎನ್ನುವುನ್ನು ಕಣ್ಣೆತ್ತಿ ಸಹ ನೋಡಿಲ್ಲ!
ಲಾಕ್‌ಡೌನ್ ಆದ ನಂತರ ಜನ ಅನ್ನ ಆಹಾರವಿಲ್ಲದೆ ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು. ಈ ವೇಳೆ ಪೊಲೀಸ್ ಠಾಣೆಯಲ್ಲಿನ ತಮ್ಮ ವಾಹನಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ವಾಹನಗಳ ಮೇಲೆ ಪ್ರಕರಣಗಳು ಇದ್ದ ಕಾರಣ ಈ ವಾಹನಗಳು ನಮಗೆ ಬೇಡವೇ ಬೇಡ ಎಂದು ತಮ್ಮ ಊರುಗಳತ್ತ ಹೊರಟುಹೋಗಿದ್ದಾರೆ.
ಇನ್ನು ಕೆಲವು ವಾಹನಗಳಿಗೆ ಮಾಲೀಕರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಲಾಕ್ ಡೌನ್ ವೇಳೆ ಸೀಜ್ ಆದ ವಾಹನಗಳಿಗೂ ಸಹ ಇದೇ ಗತಿ. ನಮಗೆ ಈ ಗಾಡಿಗಳೇ ಬೇಡ ಎಂದು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಹೀಗಾಗಿ ಜನನಿಬಿಡ ಪ್ರದೇಶದಲ್ಲಿ ಇರುವ ಮಾದನಾಯಕನಹಳ್ಳಿ ಪೊಲೀಸ್ ಠಾಣ ಆವರಣದಲ್ಲಿ 500ಕ್ಕೂ ಹೆಚ್ಚು ವಾಹನಗಳು ಬಿಸಿಲಿನ ಬೇಗೆಯಲ್ಲಿ ಒಣಗುತ್ತಿವೆ. ಒಂದು ವೇಳೆ ಸಣ್ಣ ಪ್ರಮಾಣದ ಅಗ್ನಿ ಸ್ಪರ್ಶವಾದರೂ ಭಾರಿ ಅವಘಡ ಸಂಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಆತಂಕವೂ ವ್ಯಕ್ತವಾಗಿದೆ.
ಕೇವಲ ಪೊಲೀಸ್ ಠಾಣೆಗೆ ಮಾತ್ರವಲ್ಲದೆ ಈ ವಾಹನಗಳ ರಾಶಿಯಿಂದ ಮಾದನಾಯಕನಹಳ್ಳಿ ಪುರಸಭೆ ಸಹ ಕಿರಿಕಿರಿ ಅನುಭವಿಸುವ ಸಂಧರ್ಭ ಎದುರಾಗಿದೆ. ವಾಹನಗಳ ರಾಶಿಯಿಂದ ಪುರಸಭೆ, ಬಿಎಸ್‌ಎನ್‌ಎಲ್ ಕಚೇರಿ, ನಾಡಕಚೇರಿಗೆ ಬರುವ ವಾಹನಗಳಿಗೆ ಪಾರ್ಕಿಂಗ್ ಜಾಗವಿಲ್ಲದೆ ರಸ್ತೆಯಲ್ಲಿಯೇ ವಾಹನಗಳನ್ನ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಅಷ್ಟೆ ಅಲ್ಲದೆ ವಾಹನಗಳ ರಾಶಿಯಲ್ಲಿ ಹಾವು ಚೇಳಿನಂತಹ ವಿಷಕಾರಿ ಸರಿಸೃಪಗಳು ಸೇರಿಕೊಂಡು ಜನರಿಗೆ ಅಪಾಯ ಎದುರಾಗಬಹುದು ಅನ್ನೋ ಆತಂಕವನ್ನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.