Breaking News
Home / ಜಿಲ್ಲೆ / ಬಿಜೆಪಿ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್‍ಗೆ ಠಕ್ಕರ್ ಕೊಡಲು ಮುಂದಾಗಿದೆ.

ಬಿಜೆಪಿ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್‍ಗೆ ಠಕ್ಕರ್ ಕೊಡಲು ಮುಂದಾಗಿದೆ.

Spread the love

  • ಬೆಂಗಳೂರು,ಜೂ.6- ಕೊನೆ ಕ್ಷಣದಲ್ಲಿ ಏನಾದರೂ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯಸಬಾ ಚುನಾವಣಾ ಕಣದಿಂದ ಸ್ಪರ್ಧಿಸಲು ಹಿಂದೇಟು ಹಾಕಿದರೆ ಬಿಜೆಪಿ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್‍ಗೆ ಠಕ್ಕರ್ ಕೊಡಲು ಮುಂದಾಗಿದೆ. ಆದರೆ ಶಾಸಕರು ಮತ್ತು ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ದೇವೇಗೌಡರು ಸ್ಪರ್ಧಿಸಿದರೆ 3ನೇ ಅಭ್ಯರ್ಥಿ ಕಣಕ್ಕಿಳಿಸುವುದರಿಂದ ಲೆಕ್ಕಾಚಾರದಿಂದ ಹಿಂದೆ ಸರಿಯುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

    ಈ ಕ್ಷಣದವರೆಗೂ ರಾಜ್ಯಸಭೆ ಸ್ಪರ್ಧಿಸಲು ದೇವೇಗೌಡರು ಒಪ್ಪಿಕೊಂಡಿಲ್ಲ. ಆದರೆ ಪಕ್ಷದಲ್ಲಿರುವ ಬಹುತೇಕ ಶಾಸಕರು ಅವರನ್ನು ಮತ್ತೊಮ್ಮೆ ದೆಹಲಿಗೆ ಕಳುಹಿಸಿಕೊಡಲು ಒತ್ತಡ ಹಾಕುತ್ತಿದ್ದಾರೆ. ದೇವೇಗೌಡರು ಸ್ಪರ್ಧಿಸದಿದ್ದರೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಬಿಜೆಪಿ ಕೊನೆ ಕ್ಷಣದಲ್ಲಿ ಅಚ್ಚರಿ ಎಂಬಂತೆ ಮೂರನೇ ಅಭ್ಯರ್ಥಿಯನ್ನು ಅಖಾಡಕ್ಕಿಳಿಸುವುದು ಖಚಿತ.

    ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಜೆಡಿಎಸ್ ಪಕ್ಷದಲ್ಲಿದ್ದ ಅಸಮಾಧಾನವನ್ನೇ ಬಳಸಿಕೊಂಡು ರಾಜ್ಯಸಭೆಗೆ ಕಾಂಗ್ರೆಸ್‍ನಿಂದ ಮೂವರನ್ನು ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಅಂದು ಜೆಡಿಎಸ್‍ನ ಎಂಟು ಶಾಸಕರು ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಈಗ ಬಿಜೆಪಿ ಕೂಡ ಇದೇ ತಂತ್ರವನ್ನು ಅನುಸರಿಸಲು ಮುಂದಾಗಿದೆ.

    # ಲೆಕ್ಕಾಚಾರವೇನು:
    ಬಿಜೆಪಿ ಪಕ್ಷೇತರರು ಹಾಗೂ ಬಿಎಸ್ಪಿ ಶಾಸಕನ ಬೆಂಬಲದೊಂದಿಗೆ 119 ಸಂಖ್ಯಾಬಲ ಹೊಂದಿದ್ದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ಮತ ಹಂಚಿಕೆಯಾದರೂ 29 ಮತ ಉಳಿಯುತ್ತದೆ. ಮೂರನೇ ಅಭ್ಯರ್ಥಿ ಗೆಲುವಿಗೆ 16 ಮತಗಳ ಕೊರತೆ ಬೀಳಲಿದೆ. ಕಾಂಗ್ರೆಸ್ 68 ಸದಸ್ಯರನ್ನು ಹೊಂದಿದ್ದು, ಓರ್ವ ಅಭ್ಯರ್ಥಿ ಗೆಲ್ಲಲು ಅಗತ್ಯವಾದ 45 ಮತಗಳ ಅನಂತರ ಹದಿಮೂರು ಹೆಚ್ಚುವರಿ ಮತ ಹೊಂದಿರಲಿದೆ. ಜೆಡಿಎಸ್ 34 ಮತ ಹೊಂದಿದ್ದು, ಓರ್ವ ಅಭ್ಯರ್ಥಿ ಗೆಲ್ಲಲು 14 ಮತಗಳ ಕೊರತೆ ಎದುರಿಸುತ್ತಿದೆ.

    ನಾಲ್ಕು ಸ್ಥಾನಗಳಿಗೆ ಐವರು ಹಾಗೂ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದರೆ ರಾಜಕೀಯ ಚಿತ್ರಣ ಬದಲಾಗಲಿದೆ. ಕಳೆದ ಬಾರಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಸಿದ್ಧವಾಗಿ ಮಿಸ್ ಮಾಡಿಕೊಂಡ ಕಾಂಗ್ರೆಸ್-ಜೆಡಿಎಸ್ ಶಾಸಕರ ಜತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದರೆ ಚುನಾವಣೆಯ ಸ್ವರೂಪವೇ ಬದಲಾಗಲಿದೆ. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಹ ಹಿಂದೇಟು ಹಾಕಿ ನಾನು ರಾಜ್ಯಸಭೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಲಾಗಿದೆ.

    ಕಾಂಗ್ರೆಸ್‍ನ ಇನ್ನೊಬ್ಬ ಅಭ್ಯರ್ಥಿ ಗೆಲ್ಲಬೇಕಾದರೆ ಜೆಡಿಎಸ್ ನೆರವು ಬೇಕು. ಜೆಡಿಎಸ್‍ನಿಂದ ಅಭ್ಯರ್ಥಿ ಹಾಕಿದರೂ ಕಾಂಗ್ರೆಸ್ ಬೆಂಬಲ ಬೇಕು. ಬಿಜೆಪಿಯ ಬಳಿ 2 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡ ಅನಂತರವೂ 29 ಮತಗಳು ಉಳಿಯಲಿವೆ. 2ನೇ ಪ್ರಾಶಸ್ತ್ಯದ ಮತದ ಲೆಕ್ಕಾಚಾರ ದಲ್ಲಿ 15-16 ಮತ ಕ್ರೋಡೀಕರಿಸಿದರೆ 3ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು.

    ಈ ಮಧ್ಯೆ, ಆಪರೇಷನ್ ಕಮಲದಡಿ ಬಿಜೆಪಿಗೆ ಸೇರ್ಪಡೆಗೊಂಡು ಉಪ ಚುನಾವಣೆಯಲ್ಲಿ ಸೋತು ಈಗ ವಿಧಾನ ಪರಿಷತ್‍ಗೆ ಆಯ್ಕೆಯಾಗಿ ಸಚಿವರಾಗಲು ಬಯಸಿರುವ ಹಿರಿಯ ರಾಜಕಾರಣಿಯೊಬ್ಬರು ಅದು ಸಾಧ್ಯವಾಗದಿದ್ದರೆ ರಾಜ್ಯಸಭೆಗಾದರೂ ಕಳುಹಿಸಿ ಎಂದು ಬಿಜೆಪಿ ಬಳಿ ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಾನು ಸೆಳೆಯುತ್ತೇನೆ ಎಂಬ ಭರವಸೆ ಸಹ ನೀಡಿದ್ದಾರೆ ಎಂದು ಗೊತ್ತಾಗಿದೆ.

    ರಾಜಸಭೆಯಲ್ಲಿ ಬಹುಮತ ಬೇಕೇಬೇಕು:
    ಲೋಕಸಭೆಯಲ್ಲಿ ಪ್ರಚಂಡ ಬಹುಮತ ಪಡೆದಿರುವ ಬಿಜೆಪಿ ರಾಜ್ಯಸಭೆಯಲ್ಲಿ ಇನ್ನೂ ಬಹುಮತ ಪಡೆದಿಲ್ಲ. ರಾಜ್ಯಸಭೆಯ ಒಟ್ಟು 245 ಸದಸ್ಯರ ಪೈಕಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 111 ಸದಸ್ಯರನ್ನು ಹೊಂದಿದೆ.  ಸರಳ ಬಹುಮತಕ್ಕೆ 123 ಸದಸ್ಯರ ಅಗತ್ಯವಿದೆ.

    ಉತ್ತರಪ್ರದೇಶದಲ್ಲಿ 2021ಕ್ಕೆ ಬಿಜೆಪಿ 9 ಸ್ಥಾನವನ್ನು ಗೆಲ್ಲಲಿದೆ. ಆಗ ಎನ್‍ಡಿಎ ಮೈತ್ರಿಕೂಟಕ್ಕೆ ಎರಡೂ ಸದನಗಳಲ್ಲಿ ಬಹುಮತ ಸಿಗಲಿದೆ. ಅಲ್ಲಿಯವರೆಗೂ ಕಾಯಲು ಸಿದ್ದವಿಲ್ಲದ ಬಿಜೆಪಿ ನಾಯಕರು ಎಲ್ಲೆಲ್ಲಿ ಸಾಧ್ಯವಿದೆಯೋ ಅಂತಹ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ.

    ರಾಜ್ಯಸಭೆಯಲ್ಲಿ ಕೆಲವು ಮಸೂದೆಗಳಿಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿರುವುದರಿಂದ ಮೇಲ್ಮನೆಯಲ್ಲೂ ಬಹುಮತ ಪಡೆದರೆ ಕೆಲವು ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳಲು ಸುಲಭವಾಗುತ್ತದೆ ಎಂಬುದು ಮೋದಿ ಮತ್ತು ಅಮಿತ್ ಷಾ ಅವರ ಆಲೋಚನೆ. ಹೀಗಾಗಿ ಒಂದೊಂದು ಸ್ಥಾನಗಳು ಕೂಡ ಮುಖ್ಯವಾಗಿರುವುದರಿಂದ ಎಲ್ಲಿಯೂ ಕೂಡ ಅವಕಾಶವನ್ನು ಕಳೆದುಕೊಳ್ಳದಿರಲು ತೀರ್ಮಾನಿಸಿದೆ.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ