ತುಮಕೂರು: ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಹೋಂಗಾರ್ಡ್ವೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯ ಹನುಮಂತು ಮೃತರು.ಅನಾರೋಗ್ಯದ ನಡುವೆಯೂ ಗೃಹರಕ್ಷಕ ಸಿಬ್ಬಂದಿ ಹನುಮಂತು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರೊನಾ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಡುವಿಲ್ಲದ ಕೆಲಸದಿಂದ ನಿನ್ನೆ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರು ಮಧುಮೇಹದಿಂದ ಬಳಲುತಿದ್ದರು ಎಂದು ತಿಳಿದುಬಂದಿದೆ.ತೀರ ಬಡಕುಟುಂಬದಿಂದ ಬಂದಿರೋ ಹನುಮಂತು ಅವರ ಕುಟುಂಬಕ್ಕೆ ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸದ್ಯ ಮೃತ ಹನುಮಂತು ಅವರ ಗಂಟಲು ಮಾದರಿಯನ್ನ ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ತುಮಕೂರು ಆರೋಗ್ಯ ಇಲಾಖೆ, ಹನುಮಂತು ವರದಿ ಬರೋವರೆಗೂ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡದಿರಲು ನಿರ್ಧರಿಸಿದೆ.