ಬೆಳಗಾವಿ : ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ವಿರುದ್ಧ ಸುಮಾರು 25,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ರಮೇಶ್ ಜಾರಕಿಹೊಳಿ 1,05,313 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಅವರು 79,901 ಮತಗಳನ್ನು ಪಡೆದಿದ್ದಾರೆ.
ಒಂದು ಸರ್ಕಾರ ಪತನಗೊಳಿಸಿ ಮತ್ತೊಂದು ಸರ್ಕಾರ ರಚಿಸುವಷ್ಟು ಸಾಮರ್ಥ್ಯ ಹೊಂದಿರುವ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಹಠಕ್ಕೆ ಬಿದ್ದರೆ ಛಲದಂಕ ಮಲ್ಲನಂತೆ ವಿರೋಧಿಗಳ ವಿರುದ್ಧ ಜಿದ್ದು ಸಾಧಿಸುವ ವ್ಯಕ್ತಿತ್ವ ಇವರದ್ದು. ಜಾರಕಿಹೊಳಿ ಕುಟುಂಬದ ಹಿರಿಯ ಸಹೋದರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿಯ ಪ್ರಭಾವ ಹೊಂದಿದ್ದರೋ ಅದೇ ರೀತಿ ಬಿಜೆಪಿಯಲ್ಲೂ ತಮ್ಮ ಪ್ರಭಾವ ಹೊಂದಿದ್ದಾರೆ. ಗೋಕಾಕ್ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದಿರುವ ರಮೇಶ್ ಜಾರಕಿಹೊಳಿ ಸೋಲಿಲ್ಲದ ಸರದಾರನಾಗಿದ್ದಾರೆ.
1960ರ ಮೇ 1ರಂದು ಗೋಕಾಕ್ ಪಟ್ಟಣದಲ್ಲಿ ಲಕ್ಷ್ಮಣರಾವ್ ಮತ್ತು ಭೀಮವ್ವ ದಂಪತಿಗಳ ಮಗನಾಗಿ ರಮೇಶ ಜಾರಕಿಹೊಳಿ ಜನಿಸಿದರು. ಗೋಕಾಕ್ ನಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ, ಪದವಿ ಪೂರ್ವ ಶಿಕ್ಷಣ ಪಡೆದರು. ಅಲ್ಲದೇ ಬಿಎ ಮೊದಲ ವರ್ಷದವರೆಗೂ ಕಾಲೇಜಿಗೆ ಹೋದ ರಮೇಶ್ ಬಳಿಕ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಉದ್ಯಮಕ್ಕೆ ಕಾಲಿಟ್ಟರು. ಬಳಿಕ ರಾಜಕಾರಣದ ಕಡೆ ಮುಖ ಮಾಡಿದರು.
ರಮೇಶ್ ಜಾರಕಿಹೊಳಿ ಮತ್ತು ಜಯಶ್ರೀ ದಂಪತಿಗೆ ಸಂತೋಷ್, ಅಮರನಾಥ ಎಂಬ ಪುತ್ರರಿದ್ದು, ಓರ್ವ ಪುತ್ರಿ ಇದ್ದಾರೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ರಮೇಶ್ ಜಾರಕಿಹೊಳಿ, ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ಬಳಿಕ ರಾಜ್ಯದಲ್ಲಿ ಮತ್ತಷ್ಟು ಪ್ರಭಾವಿಯಾಗಿ ಬೆಳೆದರು.
1985ರಲ್ಲಿ ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮೇಶ್ ಜಾರಕಿಹೊಳಿ ಮೊದಲ ಚುನಾವಣೆಯಲ್ಲೇ ಪರಾಭವಗೊಂಡಿದ್ದರು. ಬಳಿಕ 15 ವರ್ಷಗಳ ನಂತರ 1999ರಲ್ಲಿ ಮತ್ತೆ ಗೋಕಾಕ್ನಿಂದಲೇ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ ರಮೇಶ್ ತಿರುಗಿ ನೋಡಿದ್ದೇ ಇಲ್ಲ. ಬಳಿಕ 2004, 2008, 2013, 2018 ಮತ್ತು 2019ರ ಉಪ ಚುನಾವಣೆಯಲ್ಲಿಯೂ ಸತತವಾಗಿ ಗೆಲ್ಲುವ ಮೂಲಕ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
2015-18ರವರೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದ ರಮೇಶ್ ಜಾರಕಿಹೊಳಿ, ಬಳಿಕ ಹೆಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಪೌರಾಡಳಿತ ಖಾತೆ ಸಚಿವರಾಗಿದ್ದರು. ನಂತರ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದರು. ಈ ವೇಳೆ ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು.
ಸಿಡಿ ಪ್ರಕರಣ ಕಪ್ಪು ಚುಕ್ಕೆ : ಸಿಡಿ ಪ್ರಕರಣ ರಮೇಶ್ ಜಾರಕಿಹೊಳಿ ರಾಜಕೀಯ ಜೀವನಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಅಲ್ಲದೇ ಈ ಪ್ರಕರಣದಿಂದ ಸಚಿವ ಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು. ಬಳಿಕ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಖುಲಾಸೆಗೊಂಡಿದ್ದಾರೆ.
ಬೆಳಗಾವಿ : ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಿಂದ ಭರ್ಜರಿ ಗೆಲವು ದಾಖಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಸವರಾಜ ಹೊಂಡ್ರಿ ವಿರುದ್ಧ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಈ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇವರ ವಿರುದ್ಧ ಬಿಜೆಪಿಯ ಬಸವರಾಜ ಹೊಂಡ್ರಿ ಹಾಗೂ ಜೆಡಿಎಸ್ನಿಂದ ಮಾರುತಿ ಮಲ್ಲಪ್ಪ ಅಷ್ಟಗಿ ಸರ್ಧಿಸಿದ್ದರು. ಜಾರಕಿಹೊಳಿ ಈ ಬಾರಿ 97863 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಹೊಂಡ್ರಿ 41810 ಮತಗಳನ್ನು ಪಡೆದರೆ ಜೆಡಿಎಸ್ ಅಭ್ಯರ್ಥಿ ಮಲ್ಲಪ್ಪ 18912 ಮತಗಳನ್ನು ಪಡೆದಿದ್ದಾರೆ. ಯಮಕನಮರಡಿ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗಳಿದಿದ್ದ ಸತೀಶ ಜಾರಕಿಹೊಳಿ ಐದನೇ ಬಾರಿ ಗೆದ್ದು ದಾಖಲೆ ಬರೆದಿದ್ದಾರೆ.
ಸರಳ ಸಜ್ಜನಿಕೆ ರಾಜಕಾರಣಿ ಸತೀಶ ಜಾರಕಿಹೊಳಿ : ಜಿಲ್ಲೆಯ ಪ್ರಭಾವಿ ರಾಜಕಾರಣಿ, ಮೌಢ್ಯದ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುತ್ತಾ ರಾಜ್ಯದಲ್ಲೆ ವಿಶಿಷ್ಟ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸದ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಸತೀಶ ಜಾರಕಿಹೊಳಿ ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯಾದ್ಯಂತ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿದ್ದಾರೆ. ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
1962 ಜೂನ್ 1ರಂದು ಕರದಂಟು ನಾಡು ಗೋಕಾಕ್ನಲ್ಲಿ ಲಕ್ಷ್ಮಣರಾವ್ ಮತ್ತು ಭೀಮವ್ವ ದಂಪತಿಗೆ ಜನಿಸಿದ ಸತೀಶ ಜಾರಕಿಹೊಳಿ, ಗೋಕಾಕ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡಿದರು. ಬಳಿಕ ಜೆಎಸ್‌ಎಸ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಸತೀಶ್ ಮತ್ತು ಶಕುಂತಲಾ ದಂಪತಿ, ಪ್ರಿಯಾಂಕಾ ಮತ್ತು ರಾಹುಲ್ ಎಂಬ ಮಕ್ಕಳನ್ನು ಹೊಂದಿದ್ದಾರೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಸತೀಶ ಜಾರಕಿಹೊಳಿ ಅವರು ಹಿಂದುಳಿದ ವರ್ಗದ ಭರವಸೆಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಸ್ವಂತ ಬಲದ ಮೇಲೆ ರಾಜಕಾರಣಕ್ಕೆ ಬಂದ ಸತೀಶ ಜಾರಕಿಹೊಳಿ, ಜನತಾ ದಳದಿಂದ 1998-2004ರವರೆಗೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಬಳಿಕ 2004-08ರವರೆಗೆ ಎರಡನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದರು. 2008ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಜೆಡಿಎಸ್ ತೊರೆದ ಸತೀಶ ಜಾರಕಿಹೊಳಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬಳಿಕ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಹೊಸದಾಗಿ ರಚನೆಯಾದ ಯಮಕನಮರಡಿ ಎಸ್ಟಿ ಮೀಸಲು ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿ ಗೆದ್ದರು. ನಂತರ 2013 ಮತ್ತು 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಯಮಕನಮರಡಿ ಕ್ಷೇತ್ರದಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್ ವಿಜಯ ಸಾಧಿಸಿದ್ದರು.
2004-05ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಧರಂ ಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಅಲ್ಲದೇ 2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವರಾಗಿದ್ದರು. ನಂತರ 2018ರ ಡಿ.26ರಿಂದ ಜುಲೈ 23, 2019ರವರೆಗೆ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. 2021ರಿಂದ ಈವರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟಿಸುತ್ತಿರುವ ಸತೀಶ ಜಾರಕಿಹೊಳಿ, ಕಾಂಗ್ರೆಸ್ನ ಮಾಸ್ಟರ್ ಮೈಂಡ್ ಎಂದೇ ಜನಪ್ರಿಯರಾಗಿದ್ದಾರೆ.
ಸ್ವತಃ ಉದ್ಯಮಿಯಾಗಿರುವ ಸತೀಶ ಜಾರಕಿಹೊಳಿ, ಬೆಳಗಾಂ ಶುಗರ್ಸ್, ಸತೀಶ್ ಶುಗರ್ಸ್ ಎಂಬ ಎರಡು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ. ಪ್ರತಿ ವರ್ಷ ಸತೀಶ್ ಶುಗರ್ಸ್ ಅವಾರ್ಡ್ ನಡೆಸುವ ಮೂಲಕ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚುವ ಕೆಲಸವನ್ನೂ ಮಾಡುತ್ತಿದ್ದಾರೆ.