Breaking News

ಲಂಚ ಪ್ರಕರಣ: ಪ್ರಶಾಂತ್‌ ಮಾಡಾಳ್‌ ವಿರುದ್ಧ ಮತ್ತೆರಡು ಎಫ್‌ಐಆರ್‌

Spread the love

ಬೆಂಗಳೂರು: ಖಾಸಗಿ ಕಚೇರಿಯಲ್ಲಿ ₹ 1.62 ಕೋಟಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಬುಧವಾರ ಎರಡು ಎಫ್‌ಐಆರ್‌ ದಾಖಲಿಸಿದ್ದಾರೆ.

 

ಕೆಎಸ್‌ಡಿಎಲ್‌ ಕಚ್ಚಾವಸ್ತು ಖರೀದಿ ಟೆಂಡರ್‌ ಅಂತಿಮಗೊಳಿಸುವ ಸಂಬಂಧ ₹ 40 ಲಕ್ಷ ಲಂಚ ಪಡೆಯುತ್ತಿದ್ದಾಗ ಮಾರ್ಚ್‌ 2ರಂದು ಪ್ರಶಾಂತ್‌ ಮಾಡಾಳ್‌ ಅವರನ್ನು ಬಂಧಿಸಲಾಗಿತ್ತು. ಕೆಎಸ್‌ಡಿಎಲ್‌ ಅಧ್ಯಕ್ಷರೂ ಆಗಿದ್ದ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.

ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ ಸಮಯದಲ್ಲೇ ಪ್ರಶಾಂತ್‌ ಅವರ ಖಾಸಗಿ ಕಚೇರಿಯಲ್ಲಿ ₹ 1.62 ಕೋಟಿ ನಗದು ಪತ್ತೆಯಾಗಿತ್ತು. ₹ 90 ಲಕ್ಷವನ್ನು ಕರ್ನಾಟಕ ಅರೋಮಾಸ್‌ ಕಂಪನಿಯ ನೌಕರರಾದ ಆಲ್ಬರ್ಟ್‌ ನಿಕೋಲಸ್‌ ಮತ್ತು ಗಂಗಾಧರ್‌ ತಂದಿದ್ದರು. ₹ 60 ಲಕ್ಷವನ್ನು ಪ್ರಶಾಂತ್‌ ಅವರ ಸಂಬಂಧಿಯೂ ಆಗಿರುವ ಮಧ್ಯವರ್ತಿ ಸಿದ್ದೇಶ್‌ ತಂದಿದ್ದರು. ₹ 12 ಲಕ್ಷ ಕಚೇರಿಯ ಅಕೌಂಟೆಂಟ್‌ ಸುರೇಂದ್ರ ಬಳಿ ಸಿಕ್ಕಿತ್ತು.

ಕರ್ನಾಟಕ ಅರೋಮಾಸ್‌ ಕಂಪನಿ ನೌಕರರು ತಂದಿದ್ದ ₹ 90 ಲಕ್ಷ ಹಾಗೂ ಸಿದ್ದೇಶ್‌ ತಂದಿದ್ದ ₹ 60 ಲಕ್ಷ ಲಂಚದ ಹಣ ಎಂದು ಆರೋಪಿಸಿ ಎಫ್‌ಐಆರ್‌ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರತ್ಯೇಕವಾಗಿ ಈ ಪ್ರಕರಣಗಳ ತನಿಖೆ ನಡೆಯಲಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ವಿರೂಪಾಕ್ಷಪ್ಪ ಅವರ ಮನೆಯಲ್ಲಿ ₹ 6.10 ಕೋಟಿ ನಗದು ವಶಕ್ಕೆ ಪಡೆದಿರುವ ಸಂಬಂಧ ಹೊಸ ಪ್ರಕರಣ ದಾಖಲಿಸುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ‍ಪಡೆಯಲಾಗುತ್ತಿದೆ. ಶಾಸಕರಿಂದ ಹೇಳಿಕೆ ದಾಖಲಿಸಿಕೊಂಡ ಬಳಿಕವೇ ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿವಿಆರ್‌ ವಶಕ್ಕೆ: ಸಂಜಯನಗರದಲ್ಲಿರುವ ವಿರೂಪಾಕ್ಷಪ್ಪ ನಿವಾಸದಲ್ಲಿ ಬುಧವಾರ ಸಂಜೆ ತಪಾಸಣೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್‌ ಇರುವ ಡಿವಿಆರ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ಲೋಕಾಯುಕ್ತರಿಂದಲೂ ವಿಚಾರಣೆ ಆರಂಭ
ಕೆ. ಮಾಡಾಳ್‌ ವಿರೂಪಾಕ್ಷಪ್ಪ ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬೃಹತ್‌ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಂಸ್ಥೆಯ ನೌಕರರ ಸಂಘದ ಅಧ್ಯಕ್ಷ ಜಿ.ಆರ್‌. ಶಿವಶಂಕರ್‌ ಸಲ್ಲಿಸಿರುವ ದೂರನ್ನು ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಪ್ರತ್ಯೇಕ ವಿಚಾರಣೆ ಆರಂಭಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ