Breaking News

ಕನ್ನಡ ಮಾಧ್ಯಮದವರಿಗೆ ಉದ್ಯೋಗ ಆದ್ಯತೆ ನೀಡಿ: ಆಶಾ ಕಡಪಟ್ಟಿ

Spread the love

ತೋಂಟದಾರ್ಯ ಮಹಾಸ್ವಾಮಿಗಳವರ ವೇದಿಕೆ (ಹಿರೇಬಾಗೇವಾಡಿ): ‘ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೇ ರಾಜ್ಯ ಸರ್ಕಾರದಲ್ಲಿ ಉದ್ಯೋಗ ಆದ್ಯತೆ ನೀಡಬೇಕು’ ಎಂದು ಬೆಳಗಾವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಆಶಾ ಕಡಪಟ್ಟಿ ಆಗ್ರಹಿಸಿದರು.

 

ಸಮೀಪದ ಅರಳಿಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದ ಬೆಳಗಾವಿ ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಆಶಯ ವ್ಯಕ್ತಪಡಿಸಿದ ಅವರು, ‘ಕನ್ನಡ ಭಾಷೆ, ಸಂಸ್ಕೃತಿ ಉಳಿಯಬೇಕು ಹಾಗೂ ಕನ್ನಡಿಗರು ಬದುಕಬೇಕು ಎನ್ನುವುದಾದರೆ ಅವಕಾಶಗಳು ಸೃಷ್ಟಿಯಾಗಬೇಕು. ಉದ್ಯೋಗ ಸಿಗುತ್ತದೆ ಎಂಬ ನೆಪಕ್ಕಾಗಿ ಹಲವರು ಇಂಗ್ಲಿಷ್‌ ಮಾಧ್ಯಮಕ್ಕೆ ವಾಲುತ್ತಿದ್ದಾರೆ. ಆಧುನಿಕ ಪ್ರಪಂಚದಲ್ಲಿ ಕನ್ನಡತನ ಉಳಿಯಬೇಕಾದರೆ ಸರ್ಕಾರಗಳು ದಿಟ್ಟ ನಿರ್ಧಾರ ಕೈಗೊಳ್ಳಬೇಕು’ ಎಂದೂ ಅವರು ಸಲಹೆ ನೀಡಿದರು.

‘ಕನ್ನಡ ನುಡಿ, ಗಡಿ, ಜಲ ಮೂಲಗಳಿಗೆ ಸಮಸ್ಯೆ ಬಂದಾಗ ಕನ್ನಡ ಹೋರಾಟಗಾರರೊಂದಿಗೆ ಸಾಹಿತಿಗಳು, ಮಠ- ಮಾನ್ಯಗಳು ನಿಲ್ಲಬೇಕು. ಸರ್ಕಾರವೂ ಸ್ಪಂದಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ‘ಜಗತ್ತಿಗೇ ಅಂಕಿಗಳನ್ನು ಮೊದಲಿಗೆ ತೋರಿಸಿ ಕೊಟ್ಟಿದ್ದು ಕನ್ನಡ ಭಾಷೆ. ನೇಪಾಳದಲ್ಲೂ ಕನ್ನಡದ ಶಿಲಾಶಾಸನಗಳು ಸಿಕ್ಕಿವೆ. ಅಲ್ಲಿಯವರೆಗೆ ಕನ್ನಡನಾಡು ವಿಸ್ತರಿಸಿತ್ತು. ಆದರೆ, ಈಗಿನ ದಿನಗಳಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಇತರ ರಾಜ್ಯಗಳು ಕರ್ನಾಟಕದ ಮೇಲೆ ಪ್ರಹಾರ ಮಾಡುತ್ತಿವೆ’ ಎಂದರು.

‘ಗಡಿಭಾಗಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ನಾವು ಒಗ್ಗಟ್ಟಾಗಬೇಕಿದೆ. ಸುಸಂಸ್ಕೃತ ನಾಗರಿಕತೆಯ ಪ್ರತೀಕವೇ ನಮ್ಮ ಕನ್ನಡ ಬಾವುಟ, ಕನ್ನಡ ಭಾಷೆ ಅನ್ನದ ಭಾಷೆ. ಅದನ್ನು ಮರೆಯಬೇಡಿ. ಒಂದು ಕಾಲಕ್ಕೆ ಇಡೀ ಮಹಾರಾಷ್ಟ್ರದ ಭೂಮಿ ಕನ್ನಡಿಗರ ಅಧೀನದಲ್ಲಿತ್ತು. ಶಿವಾಜಿ ಮಹಾರಾಜರ ಮೂಲ ನೆಲೆಯೂ ಸರ್ಕಾಟಕದ ಸೊರಟೂರು. ಕನ್ನಡ ನೆಲದಿಂದಲೇ ಮರಾಠಿ ಹುಟ್ಟಿದ್ದು ಎಂಬುದನ್ನು ನಾವೆಲ್ಲ ಅರಿಯಬೇಕಿದೆ’ ಎಂದು ಹೇಳಿದರು.

ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೇತೃತ್ವ, ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರವ್ವ ಕಟ್ಟಿಮನಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಹಂಜಿ, ಕಾರ್ಯದರ್ಶಿ ನಾಗಪ್ಪ ಕರವಿನಕೊಪ್ಪ, ಸ್ವಾಗತ ಸಮಿತಿಯ ಶಿವಾನಂದ ಹಲಕರ್ಣಿಮಠ, ಮಹಾಂತೇಶ ಮೆನಸಿನಕಾಯಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ, ಸಾದಪ್ಪ ದಾಸಪ್ಪನವರ, ಎಚ್.ಐ ತಿಮ್ಮಾಪೂರ ಹಾಗೂ ಲೇಖಕಿಯರು, ಸಾಹಿತಿಗಳು ಇದ್ದರು.

ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತ್ಯಾಸಕ್ತರಿಗೆ ಗೋಧಿ ಹುಗ್ಗಿ, ಜೋಳದ ರೊಟ್ಟಿ, ಬದನೆಕಾಯಿ, ಹೆಸರುಕಾಳಿನ ಪಲ್ಯ ಹಾಗೂ ಪಚಡಿ ಉಣ ಬಡಿಸಿದರು. ಇಲ್ಲಿನ ಅಕ್ಕನ ಬಳಗದವರು ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ನಿರ್ವಹಿಸಿದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ