ಬೆಂಗಳೂರು: ಪದೇಪದೆ ಗಡಿ ವಿವಾದವನ್ನು ಕೆಣಕುತ್ತಿರುವ ಮಹಾರಾಷ್ಟ್ರವನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಆ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದುರುಳಿಸುವ ಕಡೆ ಗಮನ ಹರಿಸಿದೆ.
ಮಹಾಜನ ವರದಿ ಸಂಸತ್ತಿನಲ್ಲಿ 1970ರಲ್ಲಿ ಮಂಡನೆಯಾಗಿದೆ ಹೊರತು ಇನ್ನೂ ಅಂಗೀಕಾರವಾಗಿಲ್ಲ. ಆದರೆ, ಮಹಾರಾಷ್ಟ್ರ ಮಾತ್ರ ಆಗಾಗ ಗಡಿ ವಿಚಾರವನ್ನು ಕೆದಕುತ್ತಲೇ ಇರುತ್ತದೆ. ಆದ್ದರಿಂದಲೇ ಮತ್ತೆ ಚಕಾರ ಎತ್ತದಂತೆ ಮಾಡಲುಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ.
ಜತ್ತ ತಾಲೂಕಿಗೆ ರಾಜ್ಯದಿಂದ ನೀರು: ಮಹಾರಾಷ್ಟ್ರದ ಜತ್ತ ತಾಲೂಕು ಮಹಾಜನ್ ವರದಿಯಂತೆ ಕರ್ನಾಟಕಕ್ಕೆ ಸೇರಬೇಕಾಗಿರುವ ಪ್ರದೇಶ. ಕನ್ನಡಿಗರೇ ವಾಸವಾಗಿರುವ 42 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ರಣ ಭಯಂಕರವಾಗಿದೆ. ಮಹಾಜನ ವರದಿ ಜಾರಿಗೆ ಬಂದರೆ ಈ ಹಳ್ಳಿಗಳು ಕರ್ನಾಟಕಕ್ಕೆ ಸೇರುತ್ತವೆ ಎಂಬ ಕಾರಣಕ್ಕೋ ಏನೋ ಮಹಾರಾಷ್ಟ್ರ ಈ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿನ ಕನ್ನಡಿಗರ ಬಗ್ಗೆ ಮಹಾರಾಷ್ಟ್ರ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿಸಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಕರ್ನಾಟಕಕ್ಕೆ ಸೇರಲು ಆಸಕ್ತಿ ತೋರಿದ್ದಾರೆ. ಮಹಾಜನ ವರದಿ ಸಂಸತ್ತಿನಲ್ಲಿ ಅಂಗೀಕಾರವಾಗುವ ತನಕ ಯಾವುದೇ ಭೂಭಾಗ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸೇರಲು ಸಾಧ್ಯವಿಲ್ಲ. ಆದರೆ, ಅಲ್ಲಿರುವ ಕನ್ನಡಿಗರ ದಾಹ ತಣಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ಮಾಡುತ್ತಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ಜತ್ತದ 42 ಹಳ್ಳಿಗಳಿಗೆ ರಾಜ್ಯ ಸರ್ಕಾರದಿಂದಲೇ ಕುಡಿಯುವ ನೀರಿನ ಯೋಜನೆಯೊಂದನ್ನು ಕೃಷ್ಣಾ ನದಿಯಿಂದ ಏತ ನೀರಾವರಿ ಮೂಲಕ ಮಾಡಿಕೊಡಲು ಸಾಧ್ಯವೇ ಎಂಬ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡುತ್ತಿದೆ. ಕೃಷ್ಣಾ ನದಿಯಿಂದ ಚೆನ್ನೈಗೆ ಕುಡಿಯುವ ನೀರಿಗಾಗಿ ಸ್ವಲ್ಪ ಭಾಗ ನೀರನ್ನು ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದ ಕೃಷ್ಣಾ ನದಿ ನೀರು ಹಂಚಿಕೆಯಿಂದ ಜತ್ತ ತಾಲೂಕಿಗೆ ಸ್ವಲ್ಪ ನೀರನ್ನು ನೀಡುವುದು ಮಾತ್ರವಲ್ಲ, ಯೋಜನೆಯನ್ನೇ ರಾಜ್ಯದಿಂದ ಮಾಡಿಕೊಡುವ ಮೂಲಕ ಮಹಾರಾಷ್ಟ್ರವನ್ನು ಕಟ್ಟಿ ಹಾಕುವ ಉದ್ದೇಶ ಸರ್ಕಾರದ್ದಾಗಿದೆ. ಜತ್ತ ತಾಲೂಕಿನಲ್ಲಿ ಕನ್ನಡಿಗರೇ ವಾಸಿಸುವ ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ಯೋಜನೆ ರೂಪುಗೊಂಡರೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಉತ್ತಮ ಹೆಸರು ಬರುತ್ತದೆ, ರಾಜ್ಯದಲ್ಲಿಯೂ ವಿರೋಧವೇನೂ ವ್ಯಕ್ತವಾಗುವುದಿಲ್ಲವೆಂಬುದು ಒಟ್ಟಾರೆ ಉದ್ದೇಶವಾಗಿದೆ. ಆ ಮೂಲಕ ಸರ್ಕಾರ ಹಲವು ಗುರಿಗಳನ್ನು ಸಾಧಿಸುವ ವಿಶ್ವಾಸವನ್ನು ಹೊಂದಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಮೂಲಗಳು ಹೇಳುತ್ತವೆ.
ಹಲವು ಪ್ರಯೋಜನಗಳು: ಜತ್ತ ತಾಲೂಕಿಗೆ ಕುಡಿಯುವ ನೀರನ್ನು ರೂಪಿಸಿಕೊಡಲು ಸ್ವಲ್ಪ ಹಣ ವೆಚ್ಚವಾದರೂ ಸಹ ಅದರ ಹಿಂದೆ ಕೆಲ ತಂತ್ರಗಳನ್ನು ಸರ್ಕಾರ ಹೊಂದಿದೆ. ಜತ್ತ ತಾಲೂಕಿನ ಕನ್ನಡಿಗರಲ್ಲಿ ರಾಜ್ಯ ಸರ್ಕಾರದ ಬಗ್ಗೆ ವಿಶ್ವಾಸ ಇಮ್ಮಡಿಗೊಳಿಸುವುದು. ಪ್ರತಿವರ್ಷ ಬೇಸಿಗೆಯಲ್ಲಿ ಕೊಯ್ನಾದಿಂದ ರಾಜ್ಯಕ್ಕೆ ನೀರು ಪಡೆಯಲಾಗುತ್ತದೆ. ನೀರಿಗೆ ಮಹಾರಾಷ್ಟ್ರ ದರ ನಿಗದಿ ಮಾಡುತ್ತದೆ. ಕುಡಿಯುವ ನೀರಿನ ಯೋಜನೆ ಮಾಡಿಕೊಡುವ ಸಂದರ್ಭದಲ್ಲಿ ಮಾಡಿಕೊಳ್ಳುವ ಒಪ್ಪಂದದಲ್ಲಿ ಕೊಯ್ನಾದಿಂದ ಉಚಿತವಾಗಿ ನೀರು ನೀಡಬೇಕು ಎಂಬ ಅಂಶವನ್ನು ಸೇರಿಸಿಕೊಳ್ಳುವುದು. ಆಗ ಯೋಜನೆಗೆ ನೀಡುವ ನೀರು ವಾಪಸ್ ಸಿಗುತ್ತದೆ. ಹಣ ಖರ್ಚು ಮಾಡುವುದು ಉಳಿಯುತ್ತದೆ. ಕೆಲವೊಮ್ಮೆ ಮಹಾರಾಷ್ಟ್ರ ನೀರಿದ್ದರೂ ಕೊಡದಿರುವಾಗ ರಾಜ್ಯದಲ್ಲಿ ಉಂಟಾಗುವ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಅದಕ್ಕಿಂತ ಹೆಚ್ಚಾಗಿ ಭಾವನಾತ್ಮಕವಾಗಿ ಕಟ್ಟಿ ಹಾಕುವುದರಿಂದ ಪದೇಪದೆ ರಾಜಕೀಯ ಕಾರಣಕ್ಕಾಗಿ ಗಡಿ ವಿಚಾರ ಕೆದಕುವುದನ್ನು ಮಹಾರಾಷ್ಟ್ರ ಬಿಡಬಹುದೆಂಬ ವಿಶ್ವಾಸ ಸರ್ಕಾರಕ್ಕಿದೆ ಎಂದು ಮೂಲಗಳು ಹೇಳುತ್ತವೆ.