ಮುದ್ದೇಬಿಹಾಳ: ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಸುವರ್ಣ ಯುಗ ಎನ್ನಿಸಿಕೊಂಡಿದೆ. ಅದು ಶರಣರ ಯುಗವಾಗಿತ್ತು. ವಚನ ಸಾಹಿತ್ಯ ಎನ್ನುವ ವಿಶಿಷ್ಟ ಸಾಹಿತ್ಯದ ಪ್ರಾಕಾರ ಕಣ್ಣು ತೆರೆದುಕೊಂಡ ಕಾಲ ಅದಾಗಿತ್ತು. ವಚನ ಸಾಹಿತ್ಯವು ವಿಶ್ವ ಸಾಹಿತ್ಯ ಪ್ರಪಂಚಕ್ಕೆ ಕನ್ನಡ ಸಾಹಿತ್ಯ ಪರಂಪರೆ ನೀಡಿದ ಅಮೂಲ್ಯ ರತ್ನ ಎನ್ನಿಸಿಕೊಂಡಿದೆ ಎಂದು ವಿಜಯಪುರದ ಅಂಕಣಕಾರ, ಸಾಹಿತಿ ಮಂಜುನಾಥ ಜುನಗೊಂಡ ಹೇಳಿದರು.
ಇಲ್ಲಿನ ಎಂಜಿವಿಸಿ ಡಿಇಡಿ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಎಸ್‌ಜಿವಿಸಿ ವಿದ್ಯಾಪ್ರಸಾರಕ ವಿಶ್ವಸ್ಥ ನಿಧಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಲಿಂ| ವಾಸಂತಿಬಾಯಿ ಮತ್ತು ಡಾ| ಸಿದ್ದವೀರಪ್ಪ ಜಿಗಜಿನ್ನಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಯುವ ಜನತೆಗಾಗಿ ವಚನ ಸಾಹಿತ್ಯ ವಿಷಯ ಕುರಿತು ಅವರು ಅನುಭಾವ ನಡೆಸಿಕೊಟ್ಟರು.
ಸಮಾನತೆ, ಕ್ಷೇಮಾಭ್ಯುದಯ, ಕಾಯಕ, ರಾಮರಾಜ್ಯದ ಪರಿಕಲ್ಪನೆ, ಶಾಂತಿಯ ಸಹಬಾಳ್ವೆ ಇತ್ಯಾದಿ ಅನೇಕ ಅಂಶಗಳನ್ನು ವಚನ ಸಾಹಿತ್ಯವು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ. ಬಸವಣ್ಣನವರನ್ನು ಕೇವಲ ವೇದಿಕೆಗೆ ಮತ್ತು ಅಲಂಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ಇದು ನಿಲ್ಲಬೇಕು.
ಬಸವಣ್ಣ ಮತ್ತು ಅಂಬೇಡ್ಕರ್ ಅವರ ಮೂರ್ತಿಗಳನ್ನು ವಿಧಾನಸೌಧದ ಹೊರಗೆ ನಿಲ್ಲಿಸಿದ್ದೇವೆಯೇ ಹೊರತು ಅವರ ತತ್ವಗಳನ್ನು ಕಲಿತುಕೊಂಡಿಲ್ಲ. ಕ್ಷಮಿಸಿಬಿಡು
ಬಸವಣ್ಣ ಎಂದು ಹೇಳುವಷ್ಟು ಕಾರ್ಯಗಳನ್ನು ಬಸವಣ್ಣನವರ ಹೆಸರಿನಲ್ಲಿ ಮಾಡುತ್ತಿದ್ದೇವೆ. ಅವರ ತತ್ವಗಳನ್ನು ನಮ್ಮ ಅಂತರಾತ್ಮದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಶಿಕ್ಷಕ, ಸಾಹಿತಿ ರುದ್ರೇಶ ಕಿತ್ತೂರ ಮಾತನಾಡಿ, ವಾಸಂತಿಬಾಯಿ ಮತ್ತು ಸಿದ್ದವೀರಪ್ಪನವರು ತ್ಯಾಗ ಜೀವಿಗಳಾಗಿದ್ದರು. ಆಧುನಿಕ ಜಗತ್ತಿಗೆ ವಾಸಂತಿಬಾಯಿಯವರು ಮಾದರಿಯಾಗಿದ್ದಾರೆ. ಮಹಿಳಾ ಲೋಕಕ್ಕೆ ಅವರು ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.