ಬೆಂಗಳೂರು : ನಾಡಿನ ಸೆರೆ ಹಕ್ಕಿಗಳಿಗೆ ಲಭ್ಯವಾಗುವ ರಾಜಾತಿಥ್ಯ ಸೇರಿದಂತೆ ಕಾರಾಗೃಹಗಳಲ್ಲಿ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಈಗ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ‘ಭದ್ರತಾ ಉಸ್ತುವಾರಿ ಸಮಿತಿ’ಗಳನ್ನು ರಚಿಸಿದೆ.
ಈ ಸಮಿತಿ ನಿಯಮಿತವಾಗಿ ಕಾರಾಗೃಹಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದು, ಆ ವೇಳೆ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳು ಪತ್ತೆಯಾದರೆ ಕೂಡಲೇ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ಕಾರಾಗೃಹ ಇಲಾಖೆಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದೆ. ಈ ವರದಿ ಆಧರಿಸಿ ಅಕ್ರಮ ಕೃತ್ಯದಲ್ಲಿ ಪಾಲ್ಗೊಳ್ಳುವ ಕೈದಿಗಳ ಮೇಲೆ ಮಾತ್ರವಲ್ಲ ಅಧಿಕಾರಿಗಳ ವಿರುದ್ಧ ಸಹ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಕಾರಾಗೃಹ ಇಲಾಖೆ ನಿರ್ಧರಿಸಿದೆ. ಈ ಸಮಿತಿ ರಚನೆ ಬೆನ್ನಲ್ಲೇ ಕಾರಾಗೃಹಗಳಲ್ಲಿರುವ ‘ಅಕ್ರಮ ಕೂಟ’ಗಳಿಗೆ ಭೀತಿ ಶುರುವಾಗಿದ್ದು, ಈಗಾಗಲೇ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಭದ್ರತಾ ಸಮಿತಿಗಳು ಸಭೆ ಕೂಡಾ ನಡೆಸಿದೆ.
ಪದೇ ಪದೇ ಕಾರಾಗೃಹಗಳಲ್ಲಿ ಕೈದಿಗಳಿಗೆ ಡ್ರಗ್ಸ್, ಮದ್ಯ ಹಾಗೂ ಮೊಬೈಲ್ ಪೂರೈಕೆ ಸೇರಿದಂತೆ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಪೂರಕವಾಗಿ ಆಡಿಯೋ ಹಾಗೂ ವಿಡಿಯೋಗಳು ಕೂಡಾ ಬಯಲಾಗಿ ಕಾರಾಗೃಹಗಳ ಕರ್ಮಕಾಂಡವು ಜಗ್ಜಜಾಹೀರ ಗೊಳಿಸಿದ್ದವು. ಈ ವಿವಾದಗಳಿಂದ ಎಚ್ಚೆತ್ತ ಕಾರಾಗೃಹ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರು, ಈಗ ಅಕ್ರಮ ಕೃತ್ಯಗಳಿಗೆ ನಿಯಂತ್ರಣಕ್ಕೆ ಪೊಲೀಸ್ ಅಧಿಕಾರಿಗಳ ಸಾರಥ್ಯದಲ್ಲಿ ಸಮಿತಿ ರಚಿಸಿದ್ದಾರೆ.
ಸಮಿತಿಯಲ್ಲಿ ಯಾರ್ಯಾರು?: ರಾಜ್ಯದಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ, ಮೈಸೂರು, ವಿಜಯಪುರ, ಮಂಗಳೂರು, ಬಳ್ಳಾರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಹಾಗೂ ಕಲಬುರಗಿ ಸೇರಿದಂತೆ 9 ಕೇಂದ್ರ ಕಾರಾಗೃಹಗಳಿವೆ. ಅದೇ ರೀತಿ 21 ಜಿಲ್ಲಾ ಕೇಂದ್ರ ಕಾರಾಗೃಹಗಳು ಹಾಗೂ 59 ತಾಲೂಕು ಮಟ್ಟದ ಕಾರಾಗೃಹಗಳಿವೆ. ಈಗ ಬೆಂಗಳೂರಿನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಭದ್ರತಾ ಉಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ರಮಣ ಗುಪ್ತಾ ಅವರನ್ನು ನೇಮಿಸಲಾಗಿದೆ. ಇನ್ನುಳಿದಂತೆ ಮೈಸೂರು, ಮಂಗಳೂರು, ಬೆಳಗಾವಿ, ಕಲುಬರಗಿ ಹಾಗೂ ಧಾರವಾಡ ಜೈಲುಗಳಿಗೆ ಆಯಾ ಪೊಲೀಸ್ ಆಯುಕ್ತರು ಸಮಿತಿ ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ಕೇಂದ್ರ ಕಾರಾಗೃಹಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಕಾರಾಗೃಹಗಳಿಗೆ ಡಿವೈಎಸ್ಪಿಗಳು ಭದ್ರತಾ ಸಮಿತಿ ಮುಂದಾಳತ್ವ ಹೊಂದಿರುತ್ತಾರೆ. ಈ ಸಮಿತಿಗೆ ಆಂತರಿಕ ಭದ್ರತಾ ಪಡೆ (ಐಎಸ್‌ಡಿ) ಅಧಿಕಾರಿ ಹಾಗೂ ಆಯಾ ಕಾರಾಗೃಹದ ಮುಖ್ಯ ಅಧಿಕಾರಿ ಸಮಿತಿ ಸದಸ್ಯರಾಗಿರುತ್ತಾರೆ ಎಂದು ಡಿಜಿಪಿ ಅಲೋಕ್ ಮೋಹನ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಸಮಿತಿ ಕೆಲಸವೇನು?: ಈ ಭದ್ರತಾ ಸಮಿತಿ ತಿಂಗಳಿಗೆ ಒಂದು ಬಾರಿ ಸಭೆ ನಡೆಸಲಿದ್ದು, ಆಗಾಗ್ಗೆ ಕಾರಾಗೃಹಗಳಿಗೆ ಭೇಟಿ ನೀಡಿ ದಿಢೀರ್ ತಪಾಸಣೆ ನಡೆಸಲಿದೆ. ಜೈಲಿನ ಲೋಪದೋಷಗಳ ಬಗ್ಗೆ ಮಾಹಿತಿ ಪಡೆದು ಕಾರಾಗೃಹ ಇಲಾಖೆಗೆ ವರದಿ ಸಲ್ಲಿಸಲಿದೆ. ಅಲ್ಲದೆ ಜೈಲಿನ ದಾಳಿ ವೇಳೆ ನಿಷೇಧಿತ ವಸ್ತುಗಳು (ಡ್ರಗ್ಸ್, ಮೊಬೈಲ್, ಮದ್ಯ) ಪತ್ತೆಯಾದರೆ ಸಂಬಂಧಪಟ್ಟಕೈದಿ ಹಾಗೂ ಆತನಿಗೆ ವಸ್ತುಗಳನ್ನು ಪೂರೈಸಿದವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಕಾರಾಗೃಹಗಳ ಕಾನೂನುಬಾಹಿರ ಚಟುವಟಿಕೆಗಳ ಸಂಪೂರ್ಣ ಬಂದ್ ಮಾಡಲು ಸಾಕಷ್ಟುಕ್ರಮ ತೆಗೆದುಕೊಳ್ಳಲಾಗಿದೆ. ಈಗ ಕಾರಾಗೃಹಗಳಲ್ಲಿ ಭದ್ರತೆ ಬಿಗಿಗೊಳಿಸುವ ಸಲುವಾಗಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
-ಅಲೋಕ್ ಮೋಹನ್, ಡಿಜಿಪಿ, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ