ಮೈಸೂರು: ಆಡಳಿತಾರೂಢ ಬಿಜೆಪಿಯಲ್ಲಿ ಜಿಲ್ಲೆಯ ಮಟ್ಟಿಗೆ ವರ್ಚಸ್ವಿ ನಾಯಕರ ಕೊರತೆ, ಈಗಷ್ಟೇ ಮೈ ಚಳಿ ಬಿಟ್ಟು ಏಳುತ್ತಿರುವ ಕಾಂಗ್ರೆಸ್, ಗೊಂದಲದ ಗೂಡಾಗಿರುವ ಜೆಡಿಎಸ್…
ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಾಗ ಮೈಸೂರು ಜಿಲ್ಲೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ಸ್ಥಿತಿ ಇದು.
ಮೈಸೂರು ಜಿಲ್ಲೆ ಸದ್ಯದ ಮಟ್ಟಿಗೆ ಒಂದು ರೀತಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಸಮಬಲದ ಹೋರಾಟದ ಕಣದಂತಿದೆ.
ಮೈಸೂರು ಜಿಲ್ಲೆಯಲ್ಲಿ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂ ಡೇಶ್ವರಿ, ಎಚ್.ಡಿ.ಕೋಟೆ (ಎಸ್‌ಟಿ ಮೀಸಲು) ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ನಂಜನಗೂಡು (ಮೀಸಲು) ತಿ.ನರಸೀಪುರ (ಮೀಸಲು) ವರುಣಾ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 3, ಕಾಂಗ್ರೆಸ್ 3 ಹಾಗೂ ಜೆಡಿಎಸ್ 5 ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಹುಣಸೂರು ಕ್ಷೇತ್ರದಲ್ಲಿ ಗೆದ್ದಿದ್ದ ಜೆಡಿಎಸ್ ಉಪ ಚುನಾವಣೆಯಲ್ಲಿ ಪರಾಭವಗೊಂಡು ಕಾಂಗ್ರೆಸ್ ಪತಾಕೆ ಹಾರಿತು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಇಬ್ಬರು ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಅಡಗೂರು ಎಚ್.ವಿಶ್ವನಾಥ್ ಈಗ ಆ ಪಕ್ಷದಿಂದ ದೂರ ಸರಿದಿದ್ದಾರೆ. ವಿಶ್ವನಾಥ್ ಬಿಜೆಪಿಗೆ ಪಕ್ಷಾಂತರವಾಗಿ ಉಪ ಚುನಾವಣೆಯಲ್ಲಿ ಪರಾಭವಗೊಂಡರು. ಅನಂತರ ವಿಧಾನಪರಿಷತ್ ಸದಸ್ಯರಾದರು. ಈಗ ಬಿಜೆಪಿಯಿಂದಲೂ ದೂರ ನಿಂತಿದ್ದಾರೆ. ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ನಲ್ಲಿ ಮುನಿಸಿಕೊಂಡು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ವರ್ಚಸ್ವಿ ನಾಯಕರಾಗಿರುವ ಜಿ.ಟಿ.ದೇವೇಗೌಡ ಅವರು ತಳೆಯುವ ರಾಜಕೀಯ ನಿಲುವು ಜಿಲ್ಲೆಯ ರಾಜಕಾರಣದ ಸಮೀಕರಣವನ್ನು ಬದಲಿಸುವ ಸಾಧ್ಯತೆ ಹೆಚ್ಚಾಗಿದೆ.