Breaking News

ಜನಪ್ರತಿನಿಧಿಗಳಿದ್ದರೂ ಅಧಿಕಾರಿಗಳ ದರ್ಬಾರೇ

Spread the love

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆಗೆ ಚುನಾವಣೆ ಮುಗಿದು, ನೂತನ ಸದಸ್ಯರು ಚುನಾಯಿತರಾಗಿ ಬರೋಬ್ಬರಿ ಐದು ತಿಂಗಳುಗಳೇ ಕಳದಿದ್ದರೂ ಅವರಿಗೆ ಅಧಿಕಾರದ ಭಾಗ್ಯ ಸಿಕ್ಕಿಲ್ಲ. ಜನಪ್ರತಿನಿಧಿಗಳಿದ್ದರೂ ಅಧಿಕಾರಿಗಳ ದರ್ಬಾರೇ ಮುಂದುವರಿದಿದೆ.

 

ಮಹಾನಗರಪಾಲಿಕೆ ಚುನಾವಣೆ ಮತದಾನ ಸೆ.3ರಂದು ನಡೆದಿತ್ತು.

.6ರಂದು ಫಲಿತಾಂಶ ಪ್ರಕಟವಾಗಿತ್ತು. ಆಗಿನಿಂದಲೂ ಸದಸ್ಯರು ಪ್ರಮಾಣವಚನ ಸ್ವೀಕರಿಸುವ ಪ್ರಕ್ರಿಯೆಯೇ ನಡೆಯದಿರುವುದು ಅವರು ಅಧಿಕೃತವಾಗಿ ಅಧಿಕಾರ ಚಲಾಯಿಸುವುದಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಚುರುಕುಗೊಳಿಸುವುದಕ್ಕೆ ಅವರಿಂದ ಸಾಧ್ಯವಾಗಿಲ್ಲ. ಈಚೆಗೆ ವಾಲ್ವ್‌ಮನ್‌ಗಳ ಮುಷ್ಕರದಿಂದ ಹಲವೆಡೆ ಕುಡಿಯುವ ನೀರಿಗೆ ಪರದಾಟ ಉಂಟಾದರೂ ಪರಿಹರಿಸಲು ಅವರಿಂದ ಸಾಧ್ಯವಾಗಲಿಲ್ಲ. ಶಾಸನಬದ್ಧ ಅಧಿಕಾರಕ್ಕಾಗಿ ಅವರು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.

 

ಈ ಸ್ಥಳೀಯ ಸಂಸ್ಥೆಗೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಕ್ಷದ ಅಧಿಕೃತ ಚಿಹ್ನೆಗಳ ಆಧಾರದ ಮೇಲೆ ಸ್ಪರ್ಧಿಸಿದ್ದು ಇದೇ ಮೊದಲ ಚುನಾವಣೆಯಾಗಿತ್ತು. ತೀವ್ರ ಹಣಾಹಣಿಯಲ್ಲಿ ಬಿಜೆಪಿ ಬಹುಮತ ಗಳಿಸಿದೆ.

 

ಬಿಜೆಪಿ ಬಹುಮತ ಗಳಿಸಿದೆ

 

ಹಿಂದೆಲ್ಲಾ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದರು. ಆಗ ಮರಾಠಿ ಭಾಷಿಗರೆಲ್ಲರೂ ‘ನಮ್ಮವರು’ ಎಂದು ಹೇಳಿಕೊಳ್ಳುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯವರು ಅಧಿಕಾರದ ಸೂತ್ರ ಹಿಡಿಯುತ್ತಿದ್ದರು. ಇದಕ್ಕೆ ಈ ಬಾರಿ ಕಡಿವಾಣ ಬಿದ್ದಿದೆ.

 

ರಾಜಕೀಯ ಪಕ್ಷಗಳ ಬಲಾಬಲದಲ್ಲಿ ಎಂಇಎಸ್ ಕೊಚ್ಚಿ ಕೊಂಡು ಹೋಗಿದೆ. 58 ಸದಸ್ಯ ಬಲದ ಈ ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ-35, ಕಾಂಗ್ರೆಸ್-10, ಎಐಎಂಐಎಂ-1 ಹಾಗೂ ಪಕ್ಷೇತರರು-12 ಸ್ಥಾನಗಳನ್ನು ಗಳಿಸಿದ್ದಾರೆ. ಅಧಿಕಾರ ಹಿಡಿಯುವ ಉತ್ಸಾಹದಲ್ಲಿ ಬಿಜೆಪಿಯವರು ಇದ್ದಾರೆ. ನಗರಕ್ಕೆ ಇದೇ ಮೊದಲ ಬಾರಿಗೆ ಬಿಜೆಪಿ ಮೇಯರ್‌-ಉಪಮೇಯರ್‌ ಮಾಡಬೇಕೆಂಬ ಉಮೇದು ಅವರದಾಗಿದೆ. ಆದರೆ, ಮೇಯರ್‌-ಉಪಮೇಯರ್ ಚುನಾವಣೆಯ ದಿನಾಂಕವೂ ನಿಗದಿಯಾಗಿಲ್ಲ!

 

ಕಾಯುತ್ತಿದ್ದಾರೆ

 

ಮೇಯರ್‌ ಸ್ಥಾನವು ಸಾಮಾನ್ಯ ಮತ್ತು ಉಪಮೇಯರ್‌ ಸ್ಥಾನವು ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿದೆ. ಈ ಸ್ಥಾನಗಳ ಆಕಾಂಕ್ಷಿಗಳು ಕೂಡ ಮುಹೂರ್ತ ನಿಗದಿಗಾಗಿ ಕಾಯುತ್ತಿದ್ದಾರೆ.

 

ಈ ಸ್ಥಳೀಯ ಸಂಸ್ಥೆಗೆ 2014ರಲ್ಲಿ ಚುನಾವಣೆ ನಡೆದಿತ್ತು. ಆಗ ಪಕ್ಷಗಳಿಂದ ಯಾರೂ ಸ್ಪರ್ಧಿಸಿರಲಿಲ್ಲ. ಎಲ್ಲರೂ ಬೆಂಬಲಿತರೇ ಇದ್ದರು. 32 ಎಂಇಎಸ್‌ ಬೆಂಬಲಿತ ಸದಸ್ಯರು ಹಾಗೂ ಇತರ (ಕನ್ನಡ ಮತ್ತು ಉರ್ದು ಭಾಷಿಕರು) 26 ಸದಸ್ಯರು ಆಯ್ಕೆಯಾಗಿದ್ದರು. ಮೊದಲ 4 ಅವಧಿಗಳಿಗೆ ಎಂಇಎಸ್ ಬೆಂಬಲಿತರೇ ಮೇಯರ್‌ ಹಾಗೂ ಉಪ ಮೇಯರ್‌ ಆಗಿದ್ದರು. ಕೊನೆ ಅವಧಿಯಲ್ಲಿ ಮೀಸಲಾತಿ ಬಲದಿಂದಾಗಿ ಕನ್ನಡಿಗ ಬಸಪ್ಪ ಚಿಕ್ಕಲದಿನ್ನಿ ಅವರಿಗೆ ಮೇಯರ್‌ ಗಾದಿ ಒಲಿದಿತ್ತು. ಈ ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ಈ ಪಾಲಿಕೆ ಇತಿಹಾಸಲ್ಲಿಯೇ ಮೊದಲಾಗಿತ್ತು. ಎಂಇಎಸ್‌ ಬೆಂಬಲಿತ ಸದಸ್ಯೆ ಮಧುಶ್ರೀ ಪೂಜಾರಿ ಉಪ ಮೇಯರ್ ಆಗಿದ್ದರು.

 

ಆ ಸದಸ್ಯರ ಅಧಿಕಾರದ ಅವಧಿ 2019 ಮಾರ್ಚ್‌ 9ರಂದು ಕೊನೆಗೊಂಡಿತ್ತಾದರೂ, 2021ರ ಸೆ.3ರಂದು ಚುನಾವಣೆ ನಡೆದಿದೆ. ಆಗಲೂ ಚುನಾಯಿತ ಜನಪ್ರತಿನಿಧಿಗಳು ಇರಲಿಲ್ಲ. ಈಗ ಇದ್ದರೂ ಇಲ್ಲದಂತಾಗಿದೆ!

 

ಶಾಸಕರೇ ನಿರ್ವಹಿಸುತ್ತಿದ್ದಾರೆ

 

ಜನಪ್ರತಿನಿಧಿಗಳಿದ್ದರೂ ಪಾಲಿಕೆಯಲ್ಲಿ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿ ಆಗಿದ್ದಾರೆ! ವಾರ್ಡ್‌ಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರೇ ಚಾಲನೆ ನೀಡುವುದು, ಗುದ್ದಲಿಪೂಜೆ ನೆರವೇರಿಸುವುದು, ಉದ್ಘಾಟಿಸುವುದು ಕಂಡುಬರುತ್ತಿದೆ. ಪಾಲಿಕೆ ಸದಸ್ಯರು ಉತ್ಸವ ಮೂರ್ತಿಗಳಷ್ಟೆ ಆಗಿದ್ದಾರೆ. ನಗರದ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಗೆ ಸಾಮಾನ್ಯ ಸಭೆಗಳನ್ನು ನಡೆಸಲಾಗುತ್ತಿಲ್ಲ.

 

‘ಜನರು ನಮ್ಮ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡು ಗೆಲ್ಲಿಸಿದ್ದಾರೆ. ಅವರ ಆಶೋತ್ತರಗಳಿಗೆ ಸ್ಪಂದಿಸಬೇಕು ಎನ್ನುವುದು ನಮ್ಮ ಕನಸಾಗಿದೆ. ಆದರೆ, ಸದ್ಯಕ್ಕೆ ಹೆಸರಿಗಷ್ಟೇ ಜನಪ್ರತಿನಿಧಿ ಎನ್ನುವಂತಹ ಸ್ಥಿತಿ ನಮ್ಮದಾಗಿದೆ. ಪ್ರಮಾಣವಚನ ಸ್ವೀಕರಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ನಮಗೆ ಬೆಲೆ ಕೊಡುವುದಿಲ್ಲ; ನಮ್ಮ ಮಾತು ಕೇಳುವುದಿಲ್ಲ’ ಎನ್ನುವುದು ಸದಸ್ಯರ ಅಸಮಾಧಾನವಾಗಿದೆ.

 

ಈಚೆಗೆ ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಜರುಗಿದ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆದುಕೊಳ್ಳುವುದಕ್ಕಾಗಿಯೂ ಅವರು ಹೋರಾಟ ನಡೆಸಬೇಕಾಯಿತು.

 

ಆದೇಶ ಬಂದಿಲ್ಲ

 

ಮೇಯರ್‌-ಉಪಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯಿಂದ ಈವರೆಗೂ ಆದೇಶ ಬಂದಿಲ್ಲ.

 

-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

 

ಶೀಘ್ರವೇ ಆಗಬಹುದು

 

ಪ್ರಮಾಣವಚನ ಸ್ವೀಕರಿಸಿದರೆ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸಗಳನ್ನು ಹೆಚ್ಚಾಗಿ ಕೈಗೊಳ್ಳಬಹುದು. ಶೀಘ್ರದಲ್ಲೇ ದಿನಾಂಕ ನಿಗದಿಯಾಗಬಹುದು.

 

-ಹಣಮಂತ ಕೊಂಗಾಲಿ, ನಗರಪಾಲಿಕೆ ಸದಸ್ಯ

 

ಫೆ.15ರೊಳಗೆ ಎಲ್ಲವೂ

 

ಈ ಬಗ್ಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಮೇಯರ್‌-ಉಪಮೇಯರ್ ಚುನಾವಣೆ, ಸದಸ್ಯರ ಪ್ರಮಾಣವಚನ ಎಲ್ಲವೂ ಫೆ.15ರೊಳಗೆ ಮುಗಿಯಲಿದೆ


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ