Breaking News

ಪಂಚರಾಜ್ಯ ವಿಧಾನಸಭೆ ಚುನಾವಣೆ: ಸೋಲು-ಗೆಲುವಿನ ಹಿಂದೆ ಆರು ಲೆಕ್ಕಾಚಾರ!

Spread the love

ನವದೆಹಲಿ, ಜನವರಿ 8: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ನಡುವೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಗೊಂಡಿದೆ. ಶನಿವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದಾರೆ.

 

ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರ, ಗೋವಾದ 40 ವಿಧಾನಸಭೆ ಕ್ಷೇತ್ರ, ಪಂಜಾಬ್ 117 ವಿಧಾನಸಭೆ ಕ್ಷೇತ್ರ, ಉತ್ತರಾಖಂಡ 70 ವಿಧಾನಸಭೆ ಕ್ಷೇತ್ರ ಮತ್ತು ಮಣಿಪುರದ 60 ಸೇರಿದಂತೆ ಒಟ್ಟು 690 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಈ ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ಪೈಪೋಟಿ, ನಾಯಕತ್ವದ ಸವಾಲುಗಳು, ದಲಿತ ರಾಜಕೀಯ ಎಂಬ ಕವಲುದಾರಿ, ಪ್ರಾದೇಶಿಕ ಪಕ್ಷಗಳ ಪಾತ್ರ ಸೇರಿದಂತೆ ಆರು ವಿಷಯಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಈ ಕುರಿತು ಒಂದು ವಿಶ್ಲೇಷಣಾತ್ಮಕ ವರದಿ ಇಲ್ಲಿದೆ ಓದಿ.

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಕಾಂಗ್ರೆಸ್ ಪೈಪೋಟಿಪಂಚರಾಜ್ಯ ಚುನಾವಣೆಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದೀರ್ಘ ಪೈಪೋಟಿಗೆ ಎರಡು ಕ್ಷೇತ್ರಗಳು ಕಾರಣವಾಗಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಕಾರ್ಯವೈಖರಿಯನ್ನು ಸಮರ್ಥಿಸಿಕೊಳ್ಳಬೇಕಿದೆ. ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುವುದಕ್ಕೂ ಮೊದಲು ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಗೂ ಪಂಜಾಬಿನಲ್ಲಿ ಕಾಂಗ್ರೆಸ್ ಸರ್ಕಾರಗಳು ಜನರಿಗಾಗಿ ಯಾವ ಯೋಜನೆಗಳನ್ನು ನೀಡಿವೆ ಎಂಬುದರ ಬಗ್ಗೆ ಮತದಾರರ ಎದುರಿಗೆ ಸಮರ್ಥಿಸಿಕೊಳ್ಳಬೇಕಾದ ಸವಾಲಿದೆ. ಏಕೆಂದರ್ ಕಾಂಗ್ರೆಸ್ಸಿನ 52 ಲೋಕಸಭಾ ಸದಸ್ಯರ ಪೈಕಿ ಶೇ.20ರಷ್ಟು ಅಂದರೆ 11 ಮಂದಿ ಪಂಜಾಬಿನಿಂದ ಆಯ್ಕೆ ಆಗಿದ್ದಾರೆ. ಇನ್ನೊಂದು ಕಡೆ ಬಿಜೆಪಿಯ 301 ಲೋಕಸಭಾ ಸದಸ್ಯರಲ್ಲಿ 81 ಮಂದಿ ಅಂದರೆ ಶೇ.20ರಷ್ಟು ಸದಸ್ಯರು ಉತ್ತರ ಪ್ರದೇಶದಿಂದ ಆಯ್ಕೆ ಆಗಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢದ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಇಲ್ಲಿ ಪೈಪೋಟಿ ನಡೆಯುವುದಿಲ್ಲ. ಎರಡೂ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಪ್ರಬಲವಾಗಿವೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಪ್ರಚಾರ ಮೆರವಣಿಗೆಯಲ್ಲಿನ ಜನರು ಬಿಜೆಪಿ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡುತ್ತಿದ್ದರೆ, ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷದತ್ತ ಜನರು ವಾಲುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಸಮಸ್ಯೆ

ವಾಸ್ತವದಲ್ಲಿ ಬಿಜೆಪಿಯು ಪಂಜಾಬಿನಲ್ಲಿ ಹಾಗೂ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಅಸ್ತಿತ್ವವನ್ನೇ ಹೊಂದಿಲ್ಲ, ಇದು ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಮೂಲಭೂತ ಹೋರಾಟಕ್ಕೆ ಸವಾಲಾಗುತ್ತದೆ. ಪಂಜಾಬಿನಲ್ಲಿ ಬಿಜೆಪಿಯು ಧಾರ್ಮಿಕ ಅಲ್ಪಸಂಖ್ಯಾತರ ಅಪನಂಬಿಕೆಗೆ ಪಾತ್ರವಾಗಿದೆ. ಸಿಖ್ಖರ ವಿಶ್ವಾಸ ಗಳಿಸಿಕೊಳ್ಳುವುದರಲ್ಲೂ ಬಿಜೆಪಿ ಮನಸು ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳು ಬಹುಸಂಖ್ಯಾತ ಸಿಖ್ ಸಮುದಾಯದ ರೈತರನ್ನು ಕೆರಳಿಸಿತು. ಬಿಜೆಪಿ ಮೇಲಿನ ಸಿಟ್ಟು, ಕೋಪ ಮತ್ತು ಅಪನಂಬಿಕೆ ಮತ್ತಷ್ಟು ಹೆಚ್ಚುವಂತೆ ಮಾಡಿತು.
ಇನ್ನೊಂದು ಕಡೆಯಲ್ಲಿ ಕಾಂಗ್ರೆಸ್ ಪಕ್ಷವು ಧಾರ್ಮಿಕ ಅಲ್ಲಸಂಖ್ಯಾತರು ನೆಚ್ಚಿಕೊಂಡಿರುವ ಮೂಲ ಪಕ್ಷವಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಈ ಧಾರ್ಮಿಕ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಬಲವಾದ ಹಿಡಿತವನ್ನು ಸಾಧಿಸಿಕೊಳ್ಳುತ್ತಿದೆ. ಬಿಜೆಪಿಗೆ ಅಲ್ಪಸಂಖ್ಯಾತರ ವಿಶ್ವಾಸ ಸಮಸ್ಯೆಯಿದ್ದು, ಬಿಜೆಪಿಯನ್ನು ಈ ಸಮುದಾಯದ ಜನರು ನಂಬುವುದಿಲ್ಲ. ಅವರ ಪಾಲಿಗೆ ಕಾಂಗ್ರೆಸ್ ಪಕ್ಷವೇ ತಮ್ಮ ಮೂಲ ವಿಶ್ವಾಸಾರ್ಹ ಪಾರ್ಟಿ ಆಗಿದೆ.
ಬಿಜೆಪಿಯು ಪಂಜಾಬ್‌ನಲ್ಲಿ ಸಿಖ್ಖರನ್ನು ಪಾಕಿಸ್ತಾನದಲ್ಲಿರುವ ಪವಿತ್ರ ಸ್ಥಳಗಳಿಗೆ ಸುಲಭವಾಗಿ ಭೇಟಿ ನೀಡುವಂತಹ ಕ್ರಮಗಳ ಮೂಲಕ ಓಲೈಸುತ್ತಿದೆ; ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಸಿಖ್ ಗುರೂಜಿಯನ್ನು ಭೇಟಿಯಾದಾಗ, ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಇರುವ ಗೋವಾದ ಕ್ಯಾಥೋಲಿಕರಿಗೆ ಸ್ನೇಹವನ್ನು ಸೂಚಿಸಲು ಇದು ಬಹುಶಃ ಬಯಸಿತ್ತು. ಬಿಜೆಪಿ ಪಂಜಾಬ್‌ನಲ್ಲಿ ನೆಲೆಯೂರಲು ಬಯಸಿದರೆ, ಈ ಚುನಾವಣೆಯ ಮೂಲಕ ಉತ್ತರ ಪ್ರದೇಶದಲ್ಲಿ ನೆಲೆಯೂರಲು ಕಾಂಗ್ರೆಸ್ ಬಯಸುತ್ತಿದೆ.

ನಾಯಕತ್ವದ ಸವಾಲು

ಒಂದು ವೇಳೆ ಉತ್ತರ ಪ್ರದೇಶವನ್ನು ಬಿಜೆಪಿ ಗೆದ್ದರೆ, ಯೋಗಿ ಆದಿತ್ಯನಾಥ್ ಮೋದಿಯವರ ನಿರೀಕ್ಷಿತ ಉತ್ತರಾಧಿಕಾರಿಯಾಗಿ ಹೊರಹೊಮ್ಮುತ್ತಾರೆ. ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ನಿಷ್ಪಕ್ಷಪಾತವಾಗಿ ನುಡಿಗಳಿಂದ ಎಲ್ಲರ ಗಮನ ಸೆಳೆಯುತ್ತಿರುವ ಅವರು, ಇಡೀ ದೇಶವೇ ತಮ್ಮ ರಾಜ್ಯದತ್ತ ತಿರುಗಿ ನೋಡುವಂತೆ ಮಾಡಿರುವ ಹಿಂದೂ ನಾಯಕರಂತೆ ಗೋಚರಿಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಪಕ್ಷದ ಇತರ ಮುಖ್ಯಮಂತ್ರಿಗಳಂತಲ್ಲ, ಅವರು ಈಗಾಗಲೇ ಮೋದಿಯವರ ನೆರಳಿನಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಉಸ್ತುವಾರಿಯಾಗಿ ರಣತಂತ್ರ ರೂಪಿಸುತ್ತಿದ್ದಾರೆ. ಇವರೇ ಪಂಜಾಬಿನಲ್ಲಿ ಪಕ್ಷದ ಮುಖ್ಯಸ್ಥರನ್ನಾಗಿ ನವಜೋತ್ ಸಿಂಗ್ ಸಿಧುರನ್ನು ಆಯ್ಕೆ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿಯವರ ನಾಯಕತ್ವದ ಕೌಶಲ್ಯ ಮತ್ತು ಚರ್ಚೆಗಳು ಪಕ್ಷದ ಮೇಲೆ ಪ್ರಭಾವ ಬೀರುತ್ತವೆ.

ಎರಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಪರೀಕ್ಷೆ

ಉತ್ತರ ಪ್ರದೇಶದ ಸಮಾಜವಾದಿ ಪಕ್ಷವು ಪ್ರಬಲ ಜಾತಿಯ ನೇತೃತ್ವವನ್ನು ವಹಿಸಿಕೊಂಡಿದ್ದು, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ರಾಜಕೀಯವನ್ನು ಪ್ರತಿನಿಧಿಸುತ್ತದೆ; ಅದೇ ರೀತಿ ಪಂಜಾಬ್‌ನ ಶಿರೋಮಣಿ ಅಕಾಲಿ ದಳವು ಧಾರ್ಮಿಕ ಅಲ್ಪಸಂಖ್ಯಾತರ ರಾಜಕೀಯ ಪ್ರತಿನಿಧಿಯಾಗಿದೆ. ಭಾರತದಲ್ಲಿ ಎರಡು ಪ್ರಾದೇಶಿಕ ಪಕ್ಷಗಳ ರಾಜಕೀಯ ಪ್ರತಿನಿಧತ್ವಕ್ಕೆ ಎರಡು ಪ್ರಮುಖ ಮಾದರಿಗಳು ಎನಿಸಿಕೊಳ್ಳುತ್ತವೆ. ಆದರೆ ಎರಡೂ ಪಕ್ಷಗಳು ಈಗ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಅವರ ಸಾಂಪ್ರದಾಯಿಕ ರಾಜತಂತ್ರಗಳೇ ಅವರ ದೌರ್ಬಲ್ಯಕ್ಕೆ ಕಾರಣವಾಗಿವೆ. ಇದರ ಜೊತೆ ಅವರ ಭ್ರಷ್ಟಾಚಾರ, ಕುಟುಂಬ ರಾಜಕಾರಣವು ಮತದಾರರಿಗೆ ಬೇಸವನ್ನು ಹುಟ್ಟಿಸಿದೆ.

ದಲಿತ ರಾಜಕಾರಣ ಎಂಬ ಅಡ್ಡದಾರಿ

ಕೆಲವು ವರ್ಷಗಳ ಹಿಂದೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪ್ರಾಬಲ್ಯ ಹೊಂದಿದ್ದ ದಲಿತ ರಾಜಕಾರಣ ಈಗ ಕವಲುದಾರಿಯಲ್ಲಿದೆ. ಉತ್ತರ ಪ್ರದೇಶದಲ್ಲಿ ಈ ಹಿಂದೆ ಹಲವು ಬಾರಿ ಅಧಿಕಾರದಲ್ಲಿದ್ದ ಬಿ.ಎಸ್.ಪಿ, ಈಗ ಅವನತಿ ಹಾದಿಯಲ್ಲಿ ಸಾಗುತ್ತಿದೆ. ಇದು ಪಂಜಾಬಿನಲ್ಲೂ ಅಸ್ತಿತ್ವದಲ್ಲಿದ್ದರೂ, ಎಂದಿಗೂ ಅಧಿಕಾರ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಪ್ರಾಬಲ್ಯವನ್ನು ಹೊಂದಿರುವ ಪ್ರದೇಶಗಳಿಗೆ ಬಿಜೆಪಿ ಲಗ್ಗೆ ಇಟ್ಟಿದೆ. ಪಂಜಾಬ್‌ನಲ್ಲಿ ಈ ಹಿಂದೆ ದಲಿತರು ಹೆಚ್ಚಾಗಿ ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದರು. ದಲಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಆಯ್ಕೆ ನಂತರದಲ್ಲಿಈ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ಹೆಚ್ಚಾಗಿ ಪ್ರಯತ್ನಿಸುತ್ತಿದೆ. ಹೀಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರೆಡೂ ದಲಿತರ ಮತಗಳ ಮೇಲೆ ಕಣ್ಣಿಟ್ಟಿವೆ.

ಬಿಜೆಪಿ ಪಾಲಿಗೆ ಕಾಂಗ್ರೆಸ್ಸೇತರ ಸವಾಲು

ಪಂಚರಾಜ್ಯ ಚುನಾವಣೆ ಸಂದರ್ಭದಲ್ಲಿ ಇಬ್ಬರು ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಆಚೆಗೆ ಅಸ್ತಿತ್ವವನ್ನು ಸಾಧಿಸಿಕೊಳ್ಳಲು ಮುಂದಾಗಿದ್ದಾರೆ. ಒಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಿದ್ದರೆ, ಮತ್ತೊಬ್ಬರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. 2024ರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಪರ್ಯಾಯ ನಾಯಕರಾಗಿ ಗುರುತಿಸಿಕೊಳ್ಳಲು ಉಭಯ ಸಿಎಂಗಳು ರಣತಂತ್ರ ಹೆಣೆಯುತ್ತಿದ್ದಾರೆ. 2017ರ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಆಪ್ ಪಕ್ಷವು ಪಂಜಾಬ್ ಮೇಲೆ ಕಣ್ಣಿಟ್ಟಿದ್ದರೆ, ಗೋವಾ ಮೇಲೆ ಮಮತಾ ಬ್ಯಾನರ್ಜಿ ಲಕ್ಷ್ಯ ವಹಿಸಿದ್ದಾರೆ. ಆಮ್ ಆದ್ಮಿ ಪಕ್ಷವು ಗೋವಾ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಅದೇ ರೀತಿ ಟಿಎಂಸಿ ಮಣಿಪುರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.
ರಾಷ್ಟ್ರೀಯ ಪಕ್ಷವೊಂದನ್ನು ಎದುರಿಸಲು ಎರಡು ಪ್ರಾದೇಶಿಕ ಪಕ್ಷಗಳು ತಮ್ಮದೇ ಆಗಿರುವ ವಿಭಿನ್ನ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಈ ನಾಯಕರು ತಮ್ಮ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು ರಣತಂತ್ರ ರೂಪಿಸುತ್ತಿವೆ ಎಂದು ಹೇಳಲಾಗುತ್ತಿದೆ.

 


Spread the love

About Laxminews 24x7

Check Also

ರಾಜ್ಯದಲ್ಲಿ ಕ್ವಾಂಟಮ್‌ ಕ್ಷೇತ್ರದ ಅಭಿವೃದ್ದಿಗೆ ಸರಕಾರದಿಂದ ಹೆಚ್ಚಿನ ಸಹಕಾರ – ಶೀಘ್ರದಲ್ಲೇ ಕೈಗಾರಿಕೆ ಹಾಗೂ ಐಟಿಬಿಟಿ ಸಚಿವರೊಂದಿಗೆ ಸಭೆ: ಸಚಿವ ಎನ್‌ ಎಸ್‌ ಭೋಸರಾಜು

Spread the love ಬೆಂಗಳೂರು : ದೇಶದಲ್ಲೇ ಮೊದಲ ಕ್ವಾಂಟಮ್‌ ಕಂಪ್ಯೂಟರ್‌ ನಿರ್ಮಾಣದ ಮೂಲಕ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ