ನವದೆಹಲಿ(ಜ.07): ಕೊರೋನಾ ವೈರಸ್ನ ಹೊಸ ರೂಪಾಂತರ ಓಮೈಕ್ರಾನ್ ಪ್ರಾರಂಭದಲ್ಲೇ ತನ್ನ ಪ್ರಭಾವವನ್ನು ತೋರಿಸುತ್ತಿದೆ.
ಜನವರಿ-ಫೆಬ್ರವರಿ ವೇಳೆಗೆ ಭಾರತದಲ್ಲಿ ಪರಿಸ್ಥಿತಿ ತೀರಾ ಕೆಡಲಿದ್ದು, ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗಲಿವೆ ಎಂದು ತಜ್ಞರು ಹೇಳಿದ್ದಾರೆ. ಇದು ಕೇವಲ ಪ್ರಾರಂಭ ಅಷ್ಟೇ ಆಗಿದ್ದು, ಮುಂದಿನ ದಿನಗಳಲ್ಲಿ ಓಮೈಕ್ರಾನ್ ತನ್ನ ನಿಜರೂಪ ತೋರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬುಧವಾರ ಭಾರತದಲ್ಲಿ ಸುಮಾರು 91,000 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದು ಬಹಳ ಕಳವಳಕಾರಿಯಾದ ವಿಷಯವಾಗಿದೆ. ತಜ್ಞರ ಪ್ರಕಾರ, ಮಾರ್ಚ್-ಏಪ್ರಿಲ್ ತಿಂಗಳ ವೇಳೆಗೆ ಕೊರೋನಾ ಪ್ರಕರಣಗಳು ಶೇ.21 ಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತವೆ.
ದೇಶದಲ್ಲಿ 10 ದಿನಗಳಲ್ಲಿ ಕೊರೋನಾ ಪ್ರಕರಣಗಳು 15 ಪಟ್ಟು ಹೆಚ್ಚಾಗಿವೆ. ಇದೇ ಸಮಯದಲ್ಲಿ ಎರಡು ವಾರಗಳ ಹಿಂದೆ, 2 ಜಿಲ್ಲೆಗಳಲ್ಲಿ ಮಾತ್ರ ವಾರದ ಪಾಸಿಟಿವಿಟಿ ದರವು ಶೇ.10ಕ್ಕಿಂತ ಹೆಚ್ಚಾಗಿತ್ತು. ಈಗ 41 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಾಗಿದೆ. ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 2,85,000 ಕ್ಕಿಂತ ಹೆಚ್ಚಾಗಿದೆ.
ಓಮೈಕ್ರಾನ್ ಎಫೆಕ್ಟ್: ಕೊರೋನಾ ರೂಪಾಂತರ ಓಮೈಕ್ರಾನ್ ಪ್ರಕರಣಗಳು ಸಹ ಭಾರತದಲ್ಲಿ ಏರಿಕೆ ಕಾಣುತ್ತಿವೆ. ಕಳೆದ 16 ದಿನಗಳಲ್ಲಿ 18 ಪಟ್ಟು ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗಿದ್ದರೆ, ಕಳೆದ 10 ದಿನಗಳಲ್ಲಿ ದೈನಂದಿನ ಪ್ರಕರಣಗಳು 15 ಪಟ್ಟು ಹೆಚ್ಚಾಗಿವೆ. ಡಿಸೆಂಬರ್ 27ರಂದು 6,358 ಪ್ರಕರಣಗಳು ಪತ್ತೆಯಾಗಿವೆ.
ಇದೇ ವೇಳೆ, 17 ರಾಜ್ಯಗಳ 41 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರವು ಶೇ.10ಕ್ಕಿಂತ ಹೆಚ್ಚಾಗಿದೆ. ಎರಡು ವಾರಗಳ ಹಿಂದೆ 2 ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವಿಟಿ ದರವು ಶೇ.10ಕ್ಕಿಂತ ಹೆಚ್ಚಾಗಿತ್ತು. ಇವುಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಮಿಜೋರಾಂನ 7-7 ಜಿಲ್ಲೆಗಳು, ಮಹಾರಾಷ್ಟ್ರದ 6 ಜಿಲ್ಲೆಗಳು, ದೆಹಲಿಯ 4 ಜಿಲ್ಲೆಗಳು ಸೇರಿವೆ.
ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್ ಪ್ರಕಾರ, ಕೊರೋನಾ ಪ್ರಕರಣಗಳ ಸಂಖ್ಯೆಯು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಾಗ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಸ್ವಲ್ಪ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಪ್ರಪಂಚದಾದ್ಯಂತ ಕೊರೋನಾ ರೂಪಾಂತರ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಆಸ್ಪತ್ರೆಗಳಲ್ಲಿ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಕೊರೋನಾ ಸೋಂಕಿತರ ರೀತಿ, ಓಮೈಕ್ರಾನ್ ಸೋಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗುವುದಿಲ್ಲ.
ಅಮೆರಿಕದಲ್ಲಿ ಸುಮಾರು 4 ಮಿಲಿಯನ್ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದರೆ, ಸುಮಾರು 90 ಸಾವಿರ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯುಕೆಯಲ್ಲಿ 1 ಲಕ್ಷದ 73 ಸಾವಿರ ಪ್ರಕರಣಗಳಿವೆ ಮತ್ತು ಸುಮಾರು 12 ಸಾವಿರ ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ .