Breaking News

ಮಾನ್ಯತೆ ನವೀಕರಣ ಗುಮ್ಮಕ್ಕೆ ಖಾಸಗಿ ಶಾಲೆ ತತ್ತರ!

Spread the love

ರಾಯಚೂರು: ಮಾನ್ಯತೆ ನವೀಕರಣಕ್ಕೆ ಸರ್ಕಾರ ಒಡ್ಡಿದ ಷರತ್ತುಗಳಿಂದ ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ತತ್ತರಿಸಿವೆ. ಪ್ರತಿ ವರ್ಷಬೆಣ್ಣೆಯಲ್ಲಿ ಕೂದಲು ತೆಗೆದಷ್ಟು ಸುಲಭದಲ್ಲಿ ಕೆಲಸಮಾಡಿಕೊಳ್ಳುತ್ತಿದ್ದವರಿಗೆ ಈಗ ಕಬ್ಬಿಣದ ಕಡಲೆ ತಿನ್ನುವಂತಾಗಿದೆ.

 

ಸರ್ಕಾರ ಇಷ್ಟು ವರ್ಷ ಮಾನ್ಯತೆ ನವೀಕರಣ ಎನ್ನುವುದನ್ನು ಸಂಪ್ರದಾಯದಂತೆ ಮಾಡಿಕೊಂಡು ಬರುತ್ತಿತ್ತು. ಖಾಸಗಿ ಸಂಸ್ಥೆಗಳಿಗೆ ಅದೇನು ದೊಡ್ಡಕೆಲಸ ಎನ್ನುವಂತಿರಲಿಲ್ಲ. ಆದರೆ, ಈಗ ಸರ್ಕಾರ ಸುಮಾರು 62 ನಿಯಮ ಒಳಗೊಂಡ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಕೆಲವೊಂದು ನಿಯಮಗಳುಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ನಿದ್ದೆಗೆಡಿಸಿವೆ.

ಈ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದ್ದು, ವಿರೋಧ ವ್ಯಕ್ತವಾಗುತ್ತಿದೆ. ಶಿಕ್ಷಣ ಸಚಿವರು ಕೂಡ ಸದನದಲ್ಲಿ ಶೀಘ್ರದಲ್ಲೇ ಪರಿಷ್ಕೃತ ಆದೇಶ ಹೊರಡಿಸುವುದಾಗಿಯೂ ತಿಳಿಸಿದ್ದಾರೆ. ಆದರೆ, ಇಲಾಖೆ ಅಧಿಕಾರಿಗಳು ಮಾತ್ರ ಸಚಿವರ ಹೇಳಿಕೆ ಒಪ್ಪದೆ ಹಿಂದಿನ ಆದೇಶದ ಪ್ರಕಾರವೇ ನವೀಕರಣ ಮಾಡುತ್ತಿದ್ದಾರೆ.

ಅದರಲ್ಲಿ ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜನಿಯರ್‌ರಿಂದ ನಿರಪೇಕ್ಷಣಾ ಪತ್ರ, ಅಗ್ನಿ ಶಾಮಕ ದಳದಿಂದ ಕಟ್ಟಡ ಸುರಕ್ಷತಾ ಪತ್ರ ಹಾಗೂ ಜೆಸ್ಕಾಂ ಇಲಾಖೆಯಿಂದ ಬೇಬಾಕಿ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಲಾಗಿದೆ. ಆದರೆ, ಸಾಕಷ್ಟು ಖಾಸಗಿ ಸಂಸ್ಥೆಗಳು ಕನಿಷ್ಠ ಸೌಲಭ್ಯಗಳಿಲ್ಲದೇ

ನಡೆಯುತ್ತಿದ್ದು, ಪ್ರತಿ ವರ್ಷ ಇಲಾಖೆಯ ಅಧಿಕಾರಿಗಳ ಕೃಪಾ ಕಟಾಕ್ಷದಿಂದ ಹೇಗೋ ನಡೆದು ಹೋಗುತ್ತಿತ್ತು. ಆದರೆ, ಈಗ ಸರ್ಕಾರದ ಷರತ್ತುಗಳಿಂದ ಅಧಿಕಾರಿಗಳು ಕೂಡ ಕೈ ಚೆಲ್ಲಿದ್ದು, ಎಲ್ಲ ಪ್ರಮಾಣ ಪತ್ರ ಸಲ್ಲಿಸಿದರೆ ಮಾತ್ರ ಮಾನ್ಯತೆ ನವೀಕರಣ ಮಾಡಲಾಗುವುದು ಎಂದು ಖಂಡಾತುಂಡವಾಗಿ ಹೇಳುತ್ತಿದ್ದಾರೆ.

ಕಲಬುರಗಿ, ಬಳ್ಳಾರಿಗೆ ಹೋಗಬೇಕು: ಕೆಲವೊಂದು ಪ್ರಮಾಣ ಪತ್ರಗಳನ್ನು ಜಿಲ್ಲೆಯಲ್ಲೇ ಪಡೆಯಬೇಕಿದ್ದರೆ; ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯಲು ಕಲಬುರಗಿ ಇಲ್ಲವೇ ಬಳ್ಳಾರಿಗೆ ಹೋಗಬೇಕಿದೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರಿಗೆ ಅಲೆದಾಟ ಶುರುವಾಗಿದೆ. ಇನ್ನೂ ಜೆಸ್ಕಾಂ ಇಲಾಖೆಗೆ ಹೋದರೆ ಅರ್ಜಿ ಸ್ವೀಕರಿಸುವವರೇ ಇಲ್ಲ. ಇದು ನಮಗೆ ಸಂಬಂಧಿಸಿದ್ದಲ್ಲ, ಸರ್ಕಾರದಿಂದ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎನ್ನುತ್ತಿದ್ದಾರೆ.

40 ಶಾಲೆಗಳ ಅರ್ಜಿ ತಿರಸ್ಕಾರ?:

ಜಿಲ್ಲೆಯಲ್ಲಿ 443 ಪ್ರಾಥಮಿಕ ಖಾಸಗಿ ಶಾಲೆಗಳಿದ್ದರೆ, 199 ಪ್ರೌಢ ಶಾಲೆಗಳಿವೆ. ಇನ್ನೂ 53 ಪ್ರಾಥಮಿಕ ಅನುದಾನಿತ ಶಾಲೆಗಳಿದ್ದು, 36 ಪ್ರೌಢಶಾಲೆಗಳಿವೆ. ಪ್ರತಿ ವರ್ಷ ಶಾಲೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಿದೆ. ಈ ಬಾರಿ ಸರ್ಕಾರ ವಿಧಿಸಿದ ಷರತ್ತುಗಳಿಂದಾಗಿ ಸುಮಾರು 40 ಶಾಲೆಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ. ಅದಕ್ಕೆ ಮುಖ್ಯವಾಗಿ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲ ಎನ್ನುವುದಾಗಿದೆ. ಎಷ್ಟೊ ಕಡೆ ಖಾಸಗಿ ಶಾಲೆಗಳು ಬಿದಿರಿನ ತಟ್ಟಿಗಳನ್ನು ಕಟ್ಟಿ ನಡೆಸಲಾಗುತ್ತಿದೆ. ಅಂಥ ಕಡೆ ಅಗ್ನಿ ಶಾಮಕ ಸಿಬ್ಬಂದಿ ಪರವಾನಗಿ ನೀಡುವುದು ಕಷ್ಟವಾಗಲಿದೆ.

ಆರ್‌ಟಿಇಗೆ ಕೊಕ್ಕೆ :

ಶಾಲೆಗಳು ಎಲ್ಲ ಪ್ರಮಾಣ ಪತ್ರಗಳನ್ನು ಸಲ್ಲಿಸಿದರೆ ಮಾತ್ರ ಮಾನ್ಯತೆ ನವೀಕರಣ ಮಾಡುವುದಾಗಿ ತಿಳಿಸುತ್ತಿರುವ ಇಲಾಖೆ ಅದರ ಜತೆಗೆ ನವೀಕರಣ ವಿಳಂಬವಾದರೆ ಸರ್ಕಾರ ನೀಡುವ ಆರ್‌ಟಿಇ ಸೀಟುಗಳಿಗೆ ಕತ್ತರಿ ಹಾಕುವ ಎಚ್ಚರಿಕೆ ನೀಡಿದೆ. ಅಲ್ಲದೇ, ಜ.17ರೊಳಗೆ ಮಾನ್ಯತೆ ನವೀಕರಣ ಮಾಡಬೇಕಿದೆ. ಸರ್ಕಾರ ಹಾಗೂ ಇಲಾಖೆಗಳ ನಡುವೆ ಸಿಲುಕಿರುವ ಶಿಕ್ಷಣ ಸಂಸ್ಥೆಗಳಿಗೆ ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿದೆ.

ಸರ್ಕಾರ ಹೊರಡಿಸಿದ ಆದೇಶವನ್ನು ಅನುಷ್ಠಾನ ಮಾಡುವುದಷ್ಟೇ ನಮ್ಮ ಹೊಣೆ. ಆದರೆ, ಖಾಸಗಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇಲಾಖೆ ಕೇಳಿದ ಪ್ರಮಾಣ ಪತ್ರಗಳನ್ನು ಸಲ್ಲಿಸಿದರೆ ಕೂಡಲೇ ನವೀಕರಣ ಮಾಡಲಾಗುವುದು. ಇದು ಸರ್ಕಾರ ಮಟ್ಟದಲ್ಲಿ ಕೈಗೊಂಡ ನಿರ್ಣಯವಾಗಿದ್ದು, ನಮ್ಮ ಪಾತ್ರವಿಲ್ಲ. -ವೃಷಭೇಂದ್ರಯ್ಯ, ರಾಯಚೂರು ಡಿಡಿಪಿಐ

 


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ