ಮುಂಬೈ: ಕರ್ನಾಟಕದ ರಾಜಧಾನಿ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿದಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಮಹಾರಾಷ್ಟ್ರ ಏಕೀಕರಣ ಸಮಿತಿಗೆ ತನ್ನ ಬೆಂಬಲವನ್ನು ಮಹಾರಾಷ್ಟ್ರ ಸರ್ಕಾರವು ಪುನರುಚ್ಛರಿಸಿದೆ. ಘಟನೆಯ ನಂತರ ಗಡಿಭಾಗದ ಜಿಲ್ಲೆಗಳಾದ ಕೊಲ್ಹಾಪುರ ಮತ್ತು ಸಾಂಗ್ಲಿಯಲ್ಲಿ ಪ್ರತಿಭಟನೆಗಳು ನಡೆದಿವೆ.
‘ಪ್ರತಿಮೆಗೆ ಮಸಿ ಬಳಿದಿರುವುದು ಕನ್ನಡಿಗರ ವಿಕೃತ ಮನಸ್ಥಿತಿ’ ಎಂದು ಕಿಡಿಕಾರಿರುವ ಉದ್ಧವ್, ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಸ್ಥಿಕೆ ವಹಿಸಿ ಕರ್ನಾಟಕ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
‘ಈ ಘಟನೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಮರಾಠಿಗರು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಈಗ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅಪವಿತ್ರಗೊಳಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇಂತಹ ಘಟನೆಯನ್ನು ದೇಶದ ಜನರು ಕ್ಷಮಿಸುವುದಿಲ್ಲ. ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕು. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಒತ್ತಾಯಿಸಿದ್ದಾರೆ.
Laxmi News 24×7