ಮೈಸೂರು : ದೇಶದಲ್ಲಿ ಪೆಟ್ರೋಲ್ (Petrol), ಡೀಸೆಲ್ (Diesel, ರಸಗೊಬ್ಬರ (Fertilizer) ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಬದುಕಲು ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಸಂಬಳ, ಪಿಂಚಣಿ ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah)ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಕಾಲದಲ್ಲಿ ಬಿಜೆಪಿ ಸರ್ಕಾರ ಲಂಚ ಪಡೆದಿದೆ. ಶೇ. 40 ರಷ್ಟು ಕಮಿಷನ್ ಕೊಟ್ಟರೆ ರಾಜ್ಯ ಅಭಿವೃದ್ಧಿಯಾಗುತ್ತಾ? ಇಂತಹ ದುರಾಡಳಿ, ಭ್ರಷ್ಟಾಚಾರ ಸರ್ಕಾರವನ್ನು ನಾನು ನೋಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಬಿಜೆಪಿ, ಜೆಡಿಎಸ್ ಕೊಡುಗೆ ಏನು? ಸ್ಥಳೀಯ ಸಂಸ್ಥೆ ಬಲಪಡಿಸಲು ಬಿಜೆಪಿ ಜೆಡಿಎಸ್ ಏನು ಮಾಡಿದೆ?ರಾಜ್ಯದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಕಾಲದಲ್ಲಿ ಅದಾನಿ ನಂಬರ್ 01 ಶ್ರೀಮಂತನಾಗಿದ್ದಾರೆ. ಬಡ ಬೋರೇಗೌಡ ಶ್ರೀಮಂತನಾಗಿದ್ದಾನೆಯೇ? ಎಂದು ಪ್ರಶ್ನಿಸಿದ್ದಾರೆ.
ಮೂರುವರೆ ವರ್ಷದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಒಂದೂ ಮನೆಯನ್ನೂ ವಿತರಣೆ ಮಾಡಿಲ್ಲ. ಭಾರೀ ಮಳೆಗೆ 6 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಆದರೆ ಇದುವರೆಗೂ ಸರ್ವೆ ಮಾಡಿ ಸೂಕ್ತ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ವಿಚಾರ ಹೇಳಿದರೆ ಅದಕ್ಕೂ ರಾಜಕೀಯ ಬಣ್ಣ ಬಳಿಯುತ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.