ಬೆಳಗಾವಿ : ಕಳೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ರಮೇಶ್ ಜಾರಕಿಹೊಳಿ ನಮ್ಮಅಭ್ಯರ್ಥಿಯನ್ನು ಸೋಲಿಸಿದರು. ಇದೀಗ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರೂ ಆಶ್ಚರ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಒಬ್ಬರನ್ನೆ ಕಣಕ್ಕಿಳಿಸಬೇಕಿತ್ತು. ಆದರೆ, ಇಬ್ಬರನ್ನು ನಿಲ್ಲಿಸಿದ್ದಾರೆ. ಬಿಜೆಪಿಯವರಿಗೆ ಇಬ್ಬಂದಿ ರಾಜಕಾರಣ ಮಾಡಿ ಗೊತ್ತು.
ಈ ಜಿಲ್ಲೆಯ ಲೀಡರ್ ರಮೇಶ್ ಜಾರಕಿಹೊಳಿ ಕಳೆದ ಬಾರಿ ನಮ್ಮ ಅಭ್ಯರ್ಥಿಯನ್ನು ಸೋಲಿಸಿಬಿಟ್ಟರು. ಈ ಸಾರಿ ಅವರ ತಮ್ಮ ಲಖನ್ ಜಾರಕಿಹೊಳಿಯನ್ನು ಸ್ಪರ್ಧೆಗಿಳಿಸಿ ಬಿಜೆಪಿ ಅಭ್ಯರ್ಥಿ ಸೋಲಿಸಿದ್ರೂ ಆಶ್ಚರ್ಯ ಇಲ್ಲ. ನಾವು ಅದನ್ನು ಕಳೆದ ಸಲ ಅನುಭವಿಸಿದ್ದೇವೆ ಎಂದರು.
ಜಿಪಂ, ತಾಪಂ ಚುನಾವಣೆ ಎದುರಿಸಲಾಗದೆ ಬಿಜೆಪಿ ಸರ್ಕಾರ ಅದನ್ನು ಮುಂದಕ್ಕೆ ಹಾಕಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಯಿತು. ಒಂದು ಕೆಲಸವನ್ನು ಇವರು ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಇವರಿಗೆ ಏಕೆ ಮತ ನೀಡಬೇಕು. ಇವರಿಗೆ ಮಾನ- ಮಾರ್ಯಾದೆ ಬೇಕಲ್ಲ ಎಂದು ಕುಟುಕಿದರು.