ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ಬೆಲೆ ಶತಕ ಬಾರಿಸಿದ ಬೆನ್ನಲ್ಲೇ ತರಕಾರಿ ಬೆಲೆಯೂ ದುಬಾರಿಯಾಗುತ್ತಿದ್ದು, ನುಗ್ಗೆಕಾಯಿ ದ್ವಿಶತಕ ಬಾರಿಸಿದರೆ, ಟೊಮೆಟೊ ಶತಕದತ್ತ ಮುನ್ನುಗ್ಗುತ್ತಿದೆ.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ತರಕಾರಿ ಬೆಳೆ ನಾಶವಾಗಿದೆ.
ಇದರಿಂದ ತರಕಾರಿ ಬೆಲೆ ಹೆಚ್ಚಳವಾಗುತ್ತಿದೆ. ಪ್ರತಿದಿನ ಒಂದೊಂದು ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಳೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಈಗ ತರಕಾರಿ ಬೆಲೆ ಏರಿಕೆಯಾಗಿದ್ದು, ಗ್ರಾಹರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಗಟು ಮಾರುಕಟ್ಟೆಯಲ್ಲಿ ನುಗ್ಗೆಕಾಯಿ, ಟೊಮೆಟೊ, ಈರುಳ್ಳಿ, ಕ್ಯಾರೋಟ್, ಬೀನ್ಸ್ ದರ ಗಗನಕ್ಕೇರಿದೆ. ಸಗಟು ಮಾರುಕಟ್ಟೆಯಲ್ಲೇ ತರಕಾರಿ ದರ ಹೆಚ್ಚಳ ಆಗಿರುವುದರಿಂದ ವಿವಿಧ ಪ್ರದೇಶಗಳ ಚಿಲ್ಲರೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನರು ಕಂಗಾಲಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಜಿಲ್ಲೆಯ ತರಕಾರಿ ಮಾರುಕಟ್ಟೆಯ ಮೇಲೂ ಆಗಿದೆ. ಅನೇಕ ಕಡೆ ಅತಿವೃಷ್ಟಿಗೆ ಬೆಳೆ ನೀರು ಪಾಲಾಗಿರುವ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಆವಕವಾಗಿದೆ. ಕಳೆದ ವಾರ ಟೊಮೆಟೊ ಬೆಲೆ ಕೆ.ಜಿ.ಗೆ ₹ 40 ಇದ್ದದ್ದು, ಈಗ ₹ 80ಕ್ಕೆ ಏರಿದೆ. ಹಸಿ ಮೆಣಸಿನಕಾಯಿ, ಹೀರೇಕಾಯಿ ಹಾಗೂ ಹೂಕೋಸು ಬೆಲೆಯೂ ದುಪ್ಪಟ್ಟಾಗಿದೆ. ಕೆ.ಜಿ.ಗೆ ₹ 60 ಇದ್ದ ನುಗ್ಗೆಕಾಯಿ ಬೆಲೆ ₹ 200ಕ್ಕೆ ಏರಿದೆ.
‘ಜಿಲ್ಲೆಯ ಮಾರುಕಟ್ಟೆಗೆ ಹೊರ ಜಿಲ್ಲೆಗಳಿಂದಲೇ ಹೆಚ್ಚಿನ ತರಕಾರಿ ಬರುತ್ತದೆ. ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಟೊಮೆಟೊ ನೀರು ಪಾಲಾಗಿದೆ. ಪೂರೈಕೆ ಕಡಿಮೆಯಾಗಿ ಸಹಜವಾಗಿಯೇ ಬೆಲೆ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ತಿಳಿಸಿದರು.
ಹವಾಮಾನ ವೈಪರೀತ್ಯದಿಂದಾಗಿ ಅಲ್ಲಲ್ಲಿ ಮಳೆಯಾಗುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಳಿಗೆ ಹಾನಿಗೀಡಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು.
ಮಳೆ ಕಡಿಮೆಯಾಗದಿದ್ದರೆ ಬೆಲೆ ಇನ್ನೂ ಜಾಸ್ತಿ
ಕಳೆದ ವರ್ಷ ಮಳೆಗೆ ಬೆಳೆ ಹಾನಿಯಾಗಿದ್ದರೂ ಈ ವರ್ಷದಷ್ಟು ನಾಶವಾಗಿರಲಿಲ್ಲ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲ. ಮಳೆ ಕಡಿಮೆಯಾದರೆ ಉತ್ತಮ ಬೆಳೆ ಬರಬಹುದು. ಇಲ್ಲವಾದರೆ ಇರುವ ಬೆಳೆಯೂ ಕೊಳೆತು ಈರುಳ್ಳಿ ಧಾರಣೆ ಹೆಚ್ಚಾಗುವ ಸಂಭವವಿದೆ ಎಂದು ಸಗಟು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎನ್. ರಮೇಶ್ ಪ್ರತಿಕ್ರಿಯಿಸಿದರು.
ತರಕಾರಿಗೆ ಹಣ್ಣಿನ ಬೆಲೆ
ಮೊನ್ನೆಯಷ್ಟೆ ಟೊಮೆಟೊ ಬೆಲೆ ₹ 30 ಇತ್ತು. ಇವತ್ತು ಕೇಳಿದರೆ ₹ 80ರಿಂದ 100 ಅನ್ನುತ್ತಾರೆ. ಒಂದು ಕೆ.ಜಿ. ಸೇಬಿಗೆ ₹ 120 ಇದೆ. ನುಗ್ಗೆಕಾಯಿ ಬೆಲೆ ₹ 200 ಇದೆ. ಎಲ್ಲದರ ಬೆಲೆ ಜಾಸ್ತಿಯಾದರೆ ಬಡವರು ಬದುಕುವುದಾದರೂ ಹೇಗೆ ಎಂದು ದೇವಕಾತಿಕೊಪ್ಪ ಗ್ರಾಮದ ಅಣ್ಣಪ್ಪ ಅಳಲು ತೋಡಿಕೊಂಡರು.
Laxmi News 24×7