ಮುಂದಿನ ಚುನಾವಣೆಗೆ ಇದು ದಿಕ್ಸೂಚಿ ಎಂದು ಹೇಳಿದ್ದೇವು. ಹೀಗಾಗಿ ಕರ್ನಾಟಕದ ಜನ ಕಾಂಗ್ರೆಸ್ ಕಡೆ ನೋಡುತ್ತಿದ್ದಾರೆ. ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಲು ಕಾತುರದಿಂದ ಕಾಯುತ್ತಿದ್ದಾರೆ ಎಂಬುದಕ್ಕೆ ಹಾನಗಲ್ ಚುನಾವಣೆ ದಿಕ್ಸೂಚಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಫಲಿತಾಂಶದ ಬಗ್ಗೆ ಗೋಕಾಕ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಸಿಂದಗಿಯಲ್ಲಿ ಯಾವ ಕಾರಣದಿಂದ ಸೋತಿದ್ದೇವೆ ಎಂಬುದು ಗೊತ್ತಿಲ್ಲ. ಆದರೆ ಹಾನಗಲ್‍ನಲ್ಲಿ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇವೆ. ಮಾನೆ ಗೆಲುವಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರು ಹಾಗೂ ಇಡೀ ಕಾರ್ಯಕರ್ತರ ದಂಡು ಕೆಲಸ ಮಾಡಿದೆ. ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದರಿಂದ ಗೆಲುವು ಸಿಕ್ಕಿದೆ. ಶ್ರೀನಿವಾಸ್ ಮಾನೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ನಾವು ಕೂಡ ಪ್ರತಿ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಿದ್ದೇವೆ. ಸರ್ಕಾರ ಇರಬಹುದು, ಎಷ್ಟೇ ದುಡ್ಡು ಕೊಡಬಹುದು, ಆದರೆ ಜನ ಕಾಂಗ್ರೆಸ್ ಪರವಾಗಿದ್ದಾರೆ. ಜನರನ್ನು ಯಾವುದೇ ಆಮೀಷಕ್ಕೆ ಒಳಪಡಿಸಲು ಸಾಧ್ಯ ಆಗುವುದಿಲ್ಲ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದು ಬಿಜೆಪಿಗೆ ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.