ಬೆಂಗಳೂರು ಅಕ್ಟೋಬರ್ 30: ದೀಪದಿಂದ ದೀಪ ಹಚ್ಚೋ ದೀಪಾವಳಿ ಹಬ್ಬ ಬಂದೇ ಬಿಡ್ತು. ಕೊರೊನಾ ಕಾರಣದಿಂದ ಸುಮಾರು ಎರಡು ವರ್ಷವೂ ದೀಪಾವಳಿ ಹಬ್ಬವನ್ನು ಬಹುತೇಕ ಜನರು ಆಚರಿಸಲಾಗಲಿಲ್ಲ. ಆದರೀಗ ಅಧಿಕ ಜನ ದೀಪಾವಳಿ ಹಬ್ಬವನ್ನು ಆಚರಿಸಲು ಕಾತುರದಿಂದ ಕಾಯುತ್ತಿದ್ದಾರೆ.
ಹೀಗಾಗಿ ಈ ಬಾರಿ ದೀಪಾವಳಿ ಹಬ್ಬ ಅತ್ಯಂತ ಸಡಗರ ಸಂಭ್ರಮದಿಂದ ಕೂಡಿರುವುದರಲ್ಲಿ ಯಾವ ಅನುಮಾನವೇ ಇಲ್ಲ.
ಆದರೆ ಹಬ್ಬದ ಆಚರಣೆಯಲ್ಲಿ ಮೈಮರೆತು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕೊರೊನಾ ಮಾಹಾಮಾರಿ ರಾಜ್ಯದಲ್ಲಿ ಸೃಷ್ಟಿಸಿದ ಅವಾಂತರಗಳಿಂದ ಜನ ಈಗಿನ್ನು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಒಂದು ದಿನ ಹಬ್ಬದ ಸಡಗರದಲ್ಲಿ ಮೈಮರೆತು ಅಪತ್ತಿಗೆ ಸಿಲುಕಿಕೊಳ್ಳದಿರಲು ರಾಜ್ಯ ಸರ್ಕಾರ ದೀಪಾವಳಿ ಹಬ್ಬಕ್ಕೂ ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.
ದೀಪಾವಳಿ ಅಂದರೆ ಪಟಾಕಿ ಸಿಡಿಸಿ ಆಚರಿಸುವುದು ಎಲ್ಲೆಡೆ ರೂಢಿಯಲ್ಲಿದೆ. ಆದರೆ ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಾತ್ರವಲ್ಲದೇ ಮಾರಾಟಗಾರರೂ ಸಹ ಬೇರೆ ಯಾವ ಪಟಾಕಿಯನ್ನೂ ಮಾರುವಂತಿಲ್ಲ ಎಂದು ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ. ನವೆಂಬರ್ 1 ರಿಂದ 10 ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ಇದೆ. ಪರವಾನಗಿ ಪಡೆದವರು ಮಾತ್ರ ಪಟಾಕಿ ಮಾರಾಟ ಮಾಡಬೇಕು ಎಂದು ರಾಜ್ಯ ಸರ್ಕಾರದಿಂದ ದೀಪಾವಳಿಗೆ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿ ಬೇರೆ ಪಟಾಕಿ ಮಾರಾಟ ಮಾಡುವುದಕ್ಕೆ ಅಥವಾ ಬೇರೆ ಪಟಾಕಿ ಹಚ್ಚಲು ಅವಕಾಶ ಇಲ್ಲ. ಹಸಿರು ಪಟಾಕಿ ಹೊರತುಪಡಿಸಿ ಉಳಿದ ಪಟಾಕಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಬೇರೆ ಪಟಾಕಿಗಳನ್ನು ಹಚ್ಚಲೂ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲದೆ, ನವೆಂಬರ್ ಒಂದರಿಂದ ಹತ್ತನೇ ತಾರೀಕಿನವರೆಗೆ ಮಾತ್ರ ಹಸಿರು ಪಟಾಕಿ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಅಧಿಕೃತ ಪರವಾನಗಿ ಪಡೆದವರಿಗೆ ಮಾತ್ರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.