ಧಾರವಾಡ(ಸೆ.12): ಧಾರವಾಡ ಪೇಡಾ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರು ಬರುತ್ತೆ. ಇದರಿಂದಲ್ಲದೇ ಇಂದು ಧಾರವಾಡ ಪೇಡಾದ ಖ್ಯಾತಿ ವಿಶ್ವಮಟ್ಟಕ್ಕೇರಿದೆ. ಈ ಪೇಡಾ ಸ್ವಾದಿಷ್ಟಕ್ಕೆ ಕಾರಣವೇ ಧಾರವಾಡದ ಎಮ್ಮೆಯ ಹಾಲು. ಧಾರವಾಡ ಪೇಡಾದಂತೆಯೇ ಧಾರವಾಡದ ಎಮ್ಮೆಗೂ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಹೌದು, ಇಷ್ಟು ದಿನ ಕೇವಲ ಧಾರವಾಡಕ್ಕೆ ಮಾತ್ರವೇ ಸೀಮಿತವಾಗಿದ್ದ ಧಾರವಾಡದ ಸ್ಥಳೀಯ ಎಮ್ಮೆ ತಳಿಗೆ ಈಗ ದೇಸಿ ತಳಿಯ ಸ್ಥಾನಮಾನ ನೀಡಲಾಗಿದೆ.
ವಿಶೇಷ ತಳಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಸಿಕ್ಕಾಗ ಅವುಗಳ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಲಾಗುತ್ತದೆ. ಇದಕ್ಕೆ ಉದಾಹರಣೆ ಅಂದ್ರೆ ಮುಧೋಳ ನಾಯಿ ತಳಿ. ಈಗ ಅದೇ ರೀತಿಯಲ್ಲಿ ಧಾರವಾಡದ ಎಮ್ಮೆ ತಳಿಗೂ ರಾಷ್ಟ್ರ ಮಟ್ಟದ ಮಾನ್ಯತೆ ಸಿಕ್ಕಿದ್ದು, ಇಲ್ಲಿಯವರೆಗೂ ದೇಶದಲ್ಲಿ 17 ಎಮ್ಮೆ ತಳಿಗಳನ್ನು ಗುರುತಿಸಲಾಗಿತ್ತು. ಈ ಎಲ್ಲವೂ ಸಹ ವಿಶ್ಟ ಮಟ್ಟದಲ್ಲಿಯೂ ಹೆಸರು ಮಾಡಿದ್ದವು. ಈಗ ಅದಕ್ಕೆ ಹೊಸದಾಗಿ ಧಾರವಾಡ ಎಮ್ಮೆ ತಳಿ ಸೇರ್ಪಡೆಯಾಗಿದೆ.
ಹರಿಯಾಣದ ರಾಷ್ಟ್ರೀಯ ಪಶು ಅನುವಂಶಿಕ ಸಂಶೋಧನಾ ಬ್ಯುರೋದಿಂದ ಧಾರವಾಡದ ಧಾರವಾಡಿ ಎಮ್ಮೆ ತಳಿಗೆ INDIA_BUFFALO_0800_DHARWADI_01018 ಎಂದು ನೋಂದಣಿ ಸಂಖ್ಯೆ ನೀಡಲಾಗಿದ್ದು, ಈ ನೋಂದಣಿ ಸಂಖ್ಯೆಯ ಮೂಲಕವೇ ವಿಶ್ವಮಟ್ಟದಲ್ಲಿ ಎಮ್ಮೆ ಗುರುತಿಸಿಕೊಳ್ಳುವಂತಾಗಿದೆ. ಧಾರವಾಡ ಎಮ್ಮೆಗೆ ತಳಿ ಮಾನ್ಯತೆ ದೊರಕಿಸಿಕೊಡುವಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗದ ಪಾತ್ರ ಇದೆ. 2014ರಿಂದ 2017ರವರೆಗೆ ಈ ಬಗ್ಗೆ ಸಂಶೋಧನೆ ಮಾಡಿ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲಾಗಿತ್ತು.
:Bengaluru Water Supply: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರು ಬರಲ್ಲ
ಎಮ್ಮೆಗಳ ಅಳತೆ, ಆಕಾರ, ಗುಣಧರ್ಮಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗಿದ್ದು, ಎಮ್ಮೆಗಳ ಹಾಲಿನ ಉತ್ಪಾದನೆ, ಸಂತಾನೋತ್ಪತ್ತಿಯ ಸಾಮರ್ಥ್ಯದ ಶಕ್ತಿಯ ಪರೀಕ್ಷೆಯನ್ನೂ ಸಹ ಮಾಡಲಾಗಿದೆ. ಅಲ್ಲದೇ ರಕ್ತದ ಮಾದರಿ ತೆಗೆದುಕೊಂಡು ಅವುಗಳ ಡಿಎನ್‌ಎ ಕುರಿತಂತೆಯೂ ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗಿದೆ. ಇನ್ನೂ ಅರ್ಧಚಂದ್ರಾಕೃತಿ ಕೋಡು, ಕರೀ ಬಣ್ಣದ ಚರ್ಮ ಇರುವ ಎಮ್ಮೆಗಳು ಹೆಚ್ಚಾಗಿರುವುದು ತಿಳಿದು ಬಂದಿದೆ.
ಇದಲ್ಲದೇ ಒಂದು ಎಮ್ಮೆ ಒಂದು ಸೂಲಿನಲ್ಲಿ 980 ಲೀಟರ್ ಹಾಲು ಕೊಡುವ ಸಾಮರ್ಥ್ಯ ಇದ್ದು, ವರ್ಷದ 335 ದಿನ ಹಾಲು ಕೊಡುವ ಗುಣಲಕ್ಷಣ ಹೊಂದಿದೆ. ಈ ಹಾಲಿನಲ್ಲಿ ಶೇ.7 ರಷ್ಟು ಕೊಬ್ಬಿನಾಂಶ ಇದ್ದು, ಕೊಬ್ಬು ರಹಿತ ಉತ್ಪನ್ನಗಳಲ್ಲಿ ಶೇ.9.5 ರಷ್ಟು ಇದೆ ಎಂಬುದನ್ನು ಅಧ್ಯಯನದಲ್ಲಿ ದಾಖಲಿಸಲಾಗಿದೆ. ಈ ಹಿನ್ನೆಲೆ ನಮ್ಮ ಧಾರವಾಡಿ ಎಮ್ಮೆ ತಳಿಗೆ ಮಾನ್ಯತೆ ಸಿಕ್ಕಿದ್ದು ಸಂತಸ ತಂದಿದೆ ಎನ್ನುತ್ತಾರೆ ಸಂಶೋಧಕರಾದ ಡಾ. ವಿಶ್ವನಾಥ ಕುಲಕರ್ಣಿ.
ಡಾ. ವಿಶ್ವನಾಥ ಕುಲಕರ್ಣಿ ಕೃಷಿ ವಿವಿಯ ಪಶು ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ವೇಳೆ ಈ ಸಂಶೋಧನೆ ಮಾಡಲಾಗಿತ್ತು. ಇನ್ನು ಧಾರವಾಡ ಹೆಸರಿನಲ್ಲಿರೋ ಈ ತಳಿ ಧಾರವಾಡ ಮಾತ್ರವಲ್ಲ ಒಟ್ಟು 14 ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಅಧ್ಯಯನದಲ್ಲಿ ಧಾರವಾಡ ಎಮ್ಮೆಗಳ ಅಳತೆ, ಆಕಾರ, ಗುಣಧರ್ಮಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗಿದೆ. ಎಮ್ಮೆಗಳ ಹಾಲಿನ ಉತ್ಪಾದನೆ, ಗುಣಮಟ್ಟ, ಸಂತಾನೋತ್ಪತ್ತಿಯ ಸಾಮರ್ಥ್ಯದ ಶಕ್ತಿಯ ಪರೀಕ್ಷೆ, ರಕ್ತದ ಮಾದರಿ ತೆಗೆದುಕೊಂಡು ಅವುಗಳ ಡಿಎನ್‌ಎ ಕುರಿತಂತೆಯೂ ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗಿತ್ತು.
ಇನ್ನು ಧಾರವಾಡದಲ್ಲಿ ತಲೆ ತಲಾಂತರದಿಂದ ಗವಳಿ ಸಮುದಾಯದವರು ಈ ಎಮ್ಮೆಗಳನ್ನು ಸಾಕಿ, ಹೈನುಗಾರಿಕೆ ಮಾಡಿ ಅದರಿಂದಲೇ ಜೀವನೋಪಾಯ ನಡೆಸುತ್ತಿದ್ದು, ಸದ್ಯ ಧಾರವಾಡ ಎಮ್ಮೆಗೆ ದೇಸಿ ಮಟ್ಟದ ಮಾನ್ಯತೆ ಸಿಕ್ಕಿರೋದು ಎಮ್ಮೆ ಸಾಕುವರಿಗೆ ಖುಷಿ ನೀಡಿದೆ.