Home / ಜಿಲ್ಲೆ / ಬೆಳಗಾವಿ / ಉಪ ಚುನಾವಣಾ ಕಣವು ಜಾರಕಿಹೊಳಿ ಸಹೋದರರ ಸವಾಲು-ಜವಾಬುಗಳಿಗೆ ವೇದಿಕೆಯಾಗುವ ಸಾಧ್ಯತೆ

ಉಪ ಚುನಾವಣಾ ಕಣವು ಜಾರಕಿಹೊಳಿ ಸಹೋದರರ ಸವಾಲು-ಜವಾಬುಗಳಿಗೆ ವೇದಿಕೆಯಾಗುವ ಸಾಧ್ಯತೆ

Spread the love

ಬೆಳಗಾವಿ: ಬಿಜೆಪಿಯ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಎದುರಾಗಿರುವ ಉಪ ಚುನಾವಣಾ ಕಣವು ಜಾರಕಿಹೊಳಿ ಸಹೋದರರ ಸವಾಲು-ಜವಾಬುಗಳಿಗೆ ವೇದಿಕೆಯಾಗುವ ಸಾಧ್ಯತೆಗಳಿವೆ.

ನಾಲ್ವರಲ್ಲಿ ತಲಾ ಇಬ್ಬರು ಸಹೋದರರು ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಇದ್ದಾರೆ. ಅವರವರಿಗೆ ಬೇಕಾದವರ ಗೆಲುವಿಗೆ ಪೈಪೋಟಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

‘ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಅವರೇ ಕಾಂಗ್ರೆಸ್ ಅಭ್ಯರ್ಥಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ತಿಳಿಸಿದ್ದಾರೆ. ‘ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಕೂಡ ಪಕ್ಷದ ಪರವಾಗಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಗಮನಿಸಿದರೆ, ಈ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರಿಗೆ ಹೆಚ್ಚಿನ ಜವಾಬ್ದಾರಿಯನ್ನು ಆ ಪಕ್ಷಗಳು ನೀಡಿರುವುದು ಸ್ಪಷ್ಟವಾಗಿದೆ.

ಬಳಸಿಕೊಳ್ಳಲು ಪಕ್ಷದಿಂದ ಯೋಜನೆ: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ನಿಂದ ಹೊರ ಬಂದು ಬಿಜೆಪಿ ಸೇರಿರುವ ರಮೇಶ ಜಾರಕಿಹೊಳಿ ಅಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದರು. ಅವರಿಗೆ ಮಹತ್ವದ ಜಲಸಂಪನ್ಮೂಲ ಸಚಿವ ಸ್ಥಾನದೊಂದಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನೂ ನೀಡಲಾಗಿತ್ತು. ಆದರೆ, ತಮ್ಮ ವಿರುದ್ಧದ ಸಿ.ಡಿ. ಪ್ರಕರಣದಿಂದಾಗಿ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ, ಬಿಜೆಪಿ ನೇಮಿಸಿರುವ ಚುನಾವಣಾ ಉಸ್ತುವಾರಿಗಳ ಪೈಕಿ ಅವರ ಹೆಸರಿದೆ. ಈ ಭಾಗದಲ್ಲಿ ಸಾಕಷ್ಟು ಪ್ರಭಾವಿಯಾಗಿರುವ ಅವರ ಶಕ್ತಿ ಬಳಸಿಕೊಳ್ಳಲು ಆ ಪಕ್ಷ ಯೋಜಿಸಿದೆ. ಅವರೊಂದಿಗೆ ಅರಭಾವಿ ಶಾಸಕರೂ ಆಗಿರುವ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇದ್ದಾರೆ. ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳಲ್ಲಿ ಅಭ್ಯರ್ಥಿಯು ಮತ ಗಳಿಕೆಯಲ್ಲಿ ದೊಡ್ಡ ಅಂತರ ಪಡೆಯಬೇಕು ಎನ್ನುವುದು ಬಿಜೆಪಿ ವರಿಷ್ಠರ ಗುರಿಯಾಗಿದೆ. ಹೀಗಾಗಿ, ಚುನಾವಣೆಯು ಈ ಸಹೋದರರಿಗೆ ಪ್ರತಿಷ್ಠೆಯ ವಿಷಯವೂ ಆಗಿದೆ.

ಯಾರ ಕೈ ಮೇಲಾಗುವುದು?: ಈ ಭಾಗದಲ್ಲಿ ಪಕ್ಷ ಸಂಘಟನೆಯ ನೊಗ ಹೊತ್ತಿರುವ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಜೊತೆಗೆ ಗೋಕಾಕ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ ಇದ್ದಾರೆ.

‘ಹೋದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದೆ. ಆದರೂ ಆಗ ಬಿಜೆಪಿಯ ಸುರೇಶ ಅಂಗಡಿ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದೆ’ ಎಂದು ರಮೇಶ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಒಂದೇ ಪಕ್ಷದಲ್ಲಿ (ಕಾಂಗ್ರೆಸ್) ಇದ್ದಾಗಲೂ ಸಹೋದರರಾದ ರಮೇಶ-ಸತೀಶ ನಡುವಿನ ಬಾಂಧವ್ಯ ಅಷ್ಟೇನೂ ಚೆನ್ನಾಗಿರಲಿಲ್ಲ. ಗೋಕಾಕ ಉಪ ಚುನಾವಣೆ ವೇಳೆ ಸಹೋದರರ ಸವಾಲು ತಾರಕಕ್ಕೇರಿತ್ತು. ಕಾಂಗ್ರೆಸ್‌ನ ಲಖನ್‌ಗೆ ಸತೀಶ ಬೆಂಬಲವಾಗಿ ನಿಂತಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶಗೆ ಬಾಲಚಂದ್ರ ಸಾಥ್ ಕೊಟ್ಟಿದ್ದರು. ಆಗ, ರಮೇಶ-ಬಾಲಚಂದ್ರ ಕೈ ಮೇಲಾಗಿತ್ತು. ಈ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ನಡೆ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಅಭ್ಯರ್ಥಿಗಳು ಯಾರೇ ಆದರೂ ಈ ಸಹೋದರರ ನಡುವೆ ಪೈ‍ಪೋಟಿ ನಿಶ್ಚಿತ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಮತವಾಗಿದೆ.


Spread the love

About Laxminews 24x7

Check Also

ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

Spread the love ವಿಜಯಪುರ: ದೇಶದಲ್ಲಿ ಪ್ರಜ್ಞಾವಂತ ಮತದಾರರಿದ್ದು, ಲೋಕಸಭೆಗೆ ಯಾರಿಗೆ ಮತ ಹಾಕಬೇಕು, ವಿಧಾನಸಭೆಗೆ ಏನು ನಿರ್ಣಯ ಕೈಗೊಳ್ಳಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ