ವಿಜಯವಾಡ: ದುಷ್ಕರ್ಮಿಗಳು ಪದವಿ ವಿದ್ಯಾರ್ಥಿನಿಯ ಕೈಕಾಲು ಕಟ್ಟಿ ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಹೋಗಿರುವ ಆತಂಕಕಾರಿ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ.
ಥೇರ್ಲಂ ಪೊಲೀಸ್ ಠಾಣೆಯ ಸಮೀಪವಿದ್ದ ನಿರ್ಜನ ಪ್ರದೇಶದಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿದ್ದ ವಿದ್ಯಾರ್ಥಿನಿಯನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು.
ಸದ್ಯ ವಿದ್ಯಾರ್ಥಿನಿ ಕೋಮಾದಲ್ಲಿದ್ದು, ಆಕೆಯನ್ನು ಥೇರ್ಲಂ ವಲಯದ ಚಾರ್ಲಾ ಗ್ರಾಮದ ನಿವಾಸಿ ರಮಾ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯ ಮಾಹಿತಿಯನ್ನು ಆಕೆಯ ತಂದೆ-ತಾಯಿಗೆ ವಿವರಿಸಲಾಗಿದೆ.
ರಮಾ ವಿಜಯನಗರ ಕಾಲೇಜಿನ ಪದವಿ ವಿದ್ಯಾರ್ಥಿನಿ. ಕೈಕಾಲು ಕಟ್ಟಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದಳು. ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸದ್ಯ ವಿದ್ಯಾರ್ಥಿನಿ ಕೋಮಾದಲ್ಲಿರುವುದರಿಂದ ಆಕೆ ಎಚ್ಚರಗೊಂಡು ಮಾಹಿತಿ ನೀಡಿದರೆ ಆರೋಪಿಗಳ ಬಂಧನಕ್ಕೆ ಸಹಾಯವಾಗಲಿದೆ.
ಘಟನಾ ಸಂಬಂಧ ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
Laxmi News 24×7