ಬೆಳಗಾವಿ,ಜ.19- ರಾಜ್ಯ ಸರಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಿ. ಬೆಂಗಳೂರಿನ ಎಂಎಸ್ ಬಿಲ್ಡಿಂಗ್ ನಲ್ಲಿರುವ ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿ ಸಂರಕ್ಷಣಾ ಆಯೋಗ ಬೆಳ ಗಾವಿಯ ಸುವರ್ಣ ಸೌಧಕ್ಕೆ ಕೊಡ ಬೇಕು ಎಂದು ಹಿರಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿಭಾಗದ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಗಡಿ ವಿಷಯದಲ್ಲಿ ಮಹಾರಾಷ್ಟ್ರದ ನಾಯಕರು ಆಗಾಗ್ಗೆ ಪ್ರಚೋದಿಸಿ, ಗಡಿಭಾಗದಲ್ಲಿ ಅಶಾಂತಿ ಉಂಟುಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಆದರೆ, ಕರ್ನಾಟಕ ಸರ್ಕಾರ ಮಾತ್ರ ಗಡಿ ಬಗ್ಗೆ ತಳೆದಿರುವ ಧೋರಣೆ ಏನು ಎಂದು ಪ್ರಶ್ನಿಸಿರುವ ಅವರು, ಬೆಳಗಾವಿಯಲ್ಲಿ 2018ರಿಂದ ಇಲ್ಲಿಯವರೆಗೆ ಗಡಿ ಬಗ್ಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಂತ್ರಿಗಳೇ ಇಲ್ಲ.
ಗಡಿಗೆ ಸಂಬಂಧಿಸಿದ ಎರಡು ಸ್ವಾಯತ್ತ ಸಂಸ್ಥೆಗಳಾದ ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿ ಸಂರಕ್ಷಣಾ ಆಯೋಗ ಎಂಎಸ್ ಬಿಲ್ಡಿಂಗ್ ನಲ್ಲಿ ನಿಷ್ಕ್ರೀಯವಾಗಿ ಬಿದ್ದಿವೆ. ಅವುಗಳನ್ನು ಬೆಳಗಾವಿಗೆ ತರಲಿಕ್ಕೆ ಸರ್ಕಾರಕ್ಕೆ ಏನು ಕಷ್ಟ ಎಂದು ಪ್ರಶ್ನಿಸಿದರು. ಐದನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಳಗಾವಿ ಸುವರ್ಣಸೌಧಕ್ಕೆ ಅದ್ಯಾವ ಇಲಾಖೆಯನ್ನೂ ತರಲಿಲ್ಲ. ಗಡಿ ಉಸ್ತುವಾರಿ ಮಂತ್ರಿಗಳನ್ನು ನೇಮಕ ಮಾಡಲೇನು ಅಡ್ಡಿ ಇದೆ ಎಂಬುವುದನ್ನು ಹೇಳಬೇಕು ಎಂದು ಆಕ್ರೋಶ ಹೊರಹಾಕಿದರು.
ನಮ್ಮ ರಾಜ್ಯ ಸರ್ಕಾರದ ವಿರುದ್ಧವೇ ಮೊದಲು ನಮ್ಮ ಆಕ್ರೋಶ, ಅಸಮಾಧಾನ, ಸಿಟ್ಟಿದೆ. ಮಹಾರಾಷ್ಟ್ರದವರು ನಮ್ಮ ವೈರಿಗಳು. ರಾಜಕೀಯವಾಗಿ ಅವರು ನಮ್ಮ ವಿರೋಧಿಗಳಾಗಿದ್ದಾರೆ. ಹೀಗಾಗಿ ನಮ್ಮ ವಿರುದ್ಧ ಸುಪ್ರೀಂಕೋರ್ಟ್‍ಗೆ ದಾವೆ ಹೂಡಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ವಿರೋದ ಮಾಡುತ್ತಲೇ ಬಂದಿದ್ದಾರೆ. ಆದರೆ, ಕರ್ನಾಟಕ ಸರಕಾರದವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ಗಡಿ ವಿಚಾರ ಸುಪ್ರೀಂಕೋರ್ಟ್ ನಲ್ಲಿ ಇದ್ದಾಗ ಮಹಾರಾಷ್ಟ್ರ ಸಿಎಂ ಠಾಕ್ರೆ ಅವರು ಗಡಿ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.