ಬೆಂಗಳೂರು, : ಕೊರೊನಾ ಸೋಂಕಿ ತರಿಗೆ ಹೋಂ ಐಸೊಲೇಷನ್ ವ್ಯವಸ್ಥೆಯನ್ನು ಜಾರಿಗೆ ತಂದ ನಂತರ ಬಿಬಿಎಂಪಿ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್‍ಗಳತ್ತ ಜನ ಮುಖ ಹಾಕುತ್ತಿಲ್ಲ.
ನಗರದಲ್ಲಿ 12 ಕೋವಿಡ್ ಕೇರ್ ಸೆಂಟರ್‍ಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಬಿಐಇಸಿನಲ್ಲಿ 10 ಸಾವಿರ ಹಾಸಿಗೆಗಳ ಸೆಂಟರ್ ನಿರ್ಮಿಸಲಾಗಿದ್ದು, 6 ಸಾವಿರ ಹಾಸಿಗೆ ಸಿದ್ಧವಿದೆ. ಆದರೆ, ಇಲ್ಲಿ ಕೇವಲ 700 ರಿಂದ 800 ಮಂದಿ ರೋಗಿಗಳು ದಾಖಲಾಗಿದ್ದಾರೆ. ಇದೇ ಕಥೆ ಉಳಿದ ಕೋವಿಡ್ ಸೆಂಟರ್‍ಗಳದ್ದೂ ಆಗಿದೆ.
ಈ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಪ್ರತಿದಿನ ಕೇವಲ 5 ಮಾತ್ರೆಗಳನ್ನು ಮಾತ್ರ ಕೊಡುತ್ತಾರೆ. 14 ದಿನಗಳ ಕಾಲ ಕಡ್ಡಾಯವಾಗಿ ಇಲ್ಲೇ ಇರಬೇಕು. ಬರೀ ಐದು ಮಾತ್ರೆಗಳನ್ನು ಸೇವಿಸುವುದಕ್ಕಾಗಿ ಈ ಸೆಂಟರ್‍ಗಳಿಗೆ ಏಕೆ ಬರಬೇಕು ಎಂಬ ಮನಸ್ಥಿತಿ ರೋಗಿಗಳದ್ದು.
ನಾವು ಮನೆಯಲ್ಲೇ ಇದ್ದುಕೊಂಡು ಮಾತ್ರೆ ತೆಗೆದುಕೊಳ್ಳಬಹುದಲ್ಲ ಎಂಬ ಮನಸ್ಸು ಬಂದಿರುವುದರಿಂದ ಜನ ಕೋ ವಿಡ್ ಕೇರ್ ಸೆಂಟರ್ ಕಡೆ ತಲೆ ಹಾಕುತ್ತಿಲ್ಲ.
ಇದರಿಂದಾಗಿ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಬೆಡ್‍ಗಳಿದ್ದರೂ ಸೋಂಕಿತರೇ ಇಲ್ಲದೆ ಖಾಲಿ ಹೊಡೆಯುತ್ತಿವೆ.
ಇವುಗಳನ್ನು ಅಸಿಂಪ್ಟಮ್ಯಾಟಿಕ್ ರೋಗಿಗಳಿಗಾಗಿ ನಿರ್ಮಿಸಲಾಗಿದೆ. ನಗರದಲ್ಲಿರುವ ಒಟ್ಟು 12 ಕೋವಿಡ್ ಸೆಂಟರ್‍ಗಳಲ್ಲಿ 4576 ಬೆಡ್‍ಗಳಿದ್ದು, 2966 ಬೆಡ್‍ಗಳು ಭರ್ತಿಯಾಗಿವೆ. 1610 ಬೆಡ್‍ಗಳು ರೋಗಿಗಳಿಲ್ಲದೆ ಖಾಲಿ ಇವೆ.
ಪ್ರತಿನಿತ್ಯ ಪತ್ತೆಯಾಗುವ ಸೋಂಕಿತರ ಪೈಕಿ ಶೇ.70ರಷ್ಟು ಅಸಿಂಪ್ಟಮ್ಯಾಟಿಕ್ ಸೋಂಕಿತರು ಇರುತ್ತಾರೆ. ಇವರಲ್ಲಿ ಶೇ.40 ರಿಂದ 50ರಷ್ಟು ಜನ ಹೋಂ ಐಸೊಲೇಷನ್ ಆಗುತ್ತಿದ್ದಾರೆ.
ಹೀಗಾಗಿ ಸರ್ಕಾರ ಬಿಬಿಎಂಪಿ ನಿರ್ಮಿಸಿರುವ ಕೇರ್ ಸೆಂಟರ್‍ಗಳ ಬೆಡ್‍ಗಳು ವೆಸ್ಟ್ ಆಗುತ್ತಿವೆ. ಹೋಂ ಐಸೊಲೇಷನ್‍ಗೆ ಅವಕಾಶ ನೀಡಿರುವ ಕಾರಣ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯಲು ಇಚ್ಛಿಸುತ್ತಿರುವುದರಿಂದ ಕೇರ್ ಸೆಂಟರ್‍ಗಳು ಖಾಲಿ ಹೊಡೆಯುತ್ತಿದ್ದು, ಕೋಟ್ಯಂತರ ರೂಪಾಯಿ ವ್ಯರ್ಥವಾಗುತ್ತಿದೆ.