ಮಡಿಕೇರಿ: ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಭಕ್ತರು ನಾಡಿನೆಲ್ಲೆಡೆ ಇದ್ದಾರೆ. ತಲಕಾವೇರಿಯಲ್ಲಿ ಹುಟ್ಟಿ ನಾಡಿನುದ್ದಕ್ಕೂ ಜೀವಕಳೆ ತುಂಬುವ ಜೀವನದಿ. ಆದರೆ ಕೊಡಗಿನ ಜನರಿಗೆ ಮಾತ್ರ ಕಣ್ಣೀರು ತರಿಸುತ್ತಿದ್ದಾಳೆ. ಕಾವೇರಿ ನದಿ ಹೀಗೆ ತನ್ನೊಡಲ ಜನರಿಗೆ ಸಂಕಷ್ಟ ತಂದಿಟ್ಟಿರುವುದಕ್ಕೆ ಜನರ ಸ್ವಯಂಕೃತ ಅಪರಾಧವೇ ಕಾರಣ ಎಂದು ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ ಮಾಡಿದೆ.
2005 ರಲ್ಲಿ ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಲವು ಕಾಮಗಾರಿಗಳನ್ನು ಮಾಡಲಾಯಿತು. ಇದರ ಪರಿಣಾಮ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗುತ್ತಿದ್ದಳು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಬ್ರಹ್ಮಕುಂಡಿಕೆ ಮತ್ತು ತೀರ್ಥಕೊಳಗಳಿಗೆ ಕಲ್ಲು ಮತ್ತು ಸಿಮೆಂಟ್ ನಿಂದ ಕಾಮಗಾರಿ ಮಾಡಲಾಯಿತು. ಇದರಿಂದಾಗಿ ಕಾವೇರಿ ಜಲಮೂಲವೇ ಬದಲಾಯಿತು. ಇದರಿಂದಾಗಿ ಇಡೀ ಬೆಟ್ಟವೇ ಕುಸಿದು ಇಂತಹ ಘನಘೋರ ಸ್ಥಿತಿ ನಿರ್ಮಾಣವಾಗಿದೆ ಎಂದು ಸಮಿತಿ ಮುಖಂಡರು ಗಂಭೀರ ಆರೋಪ ಮಾಡುತ್ತಿದ್ದಾರೆ.
ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಾಡಿದ ಕಾಮಗಾರಿಯಿಂದ ಜಲಮೂಲ ದಿಕ್ಕು ಬದಲಾಯಿಸಿ, ಕುಸಿದಿರುವ ಗಜಗಿರಿ ಬೆಟ್ಟದ ಕಡೆಗೆ ಭೂಮಿಯೊಳಗೆ ಹರಿಯಲು ಆರಂಭಿಸಿತ್ತು. ಈ ಕುರಿತು ಅಷ್ಟಮಂಗಲ ಪ್ರಶ್ನೆಯಲ್ಲೂ ಗೊತ್ತಾಗಿತ್ತು. ಬಳಿಕ ಭೂಗರ್ಭಶಾಸ್ತ್ರಜ್ಞರು ಕೂಡ ಸ್ಪಷ್ಟಪಡಿಸಿದ್ದರು. ಗಜಗಿರಿ ಬೆಟ್ಟದ ಕಡೆಗೆ ಹರಿಯುತ್ತಿದ್ದ ಜಲಮೂಲ ಕಳೆದ ಒಂದು ವರ್ಷದಿಂದ ಅರ್ಚಕ ನಾರಾಯಣ ಆಚಾರ್ ಅವರ ಮನೆ ಬಳಿ ಬರಲು ಆರಂಭಿಸಿತ್ತು. ಆಗಲೇ ಅಷ್ಟಮಂಗಲ ಪ್ರಶ್ನೆ ಸಂದರ್ಭ ಇಲ್ಲಿ ಜಲಗಂಡಾಂತರ ಇದೆ ಎಂದು ಗೊತ್ತಾಗಿತ್ತು. ತಕ್ಷಣವೇ ತಮ್ಮ ಮನೆಯನ್ನು ಖಾಲಿ ಮಾಡುವಂತೆ ಅರ್ಚಕರಿಗೆ ಹಲವು ಬಾರಿ ಹೇಳಿದ್ದೆವು ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.