ಭುವನೇಶ್ವರ: ಕೊರೊನಾ ಮಹಾಮಾರಿ ದೇಶವನ್ನು ಒಕ್ಕರಿಸಿದ ಬಳಿಕ ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಗೆ ತುಂಬಾನೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಮಾಸ್ಕ್ ಇಲ್ಲದೆ ಹೊರಗಡೆ ಓಡಾಡುವಂತಿಲ್ಲ. ಕೆಲವೆಡೆ ಪೊಲೀಸರು ಆಸ್ಕ್ ಧರಿಸಿದ್ದಕ್ಕೆ ದಂಡ ವಿಧಿಸಿರುವ ಪ್ರಸಂಗಗಳೂ ಇವೆ. ಈ ಮಧ್ಯೆ ಮಾಸ್ಕ್ ನಲ್ಲೂ ಫ್ಯಾಶನ್ ಕಂಡುಕೊಂಡಿದ್ದು, ಉದ್ಯಮಿಗಳು ಚಿನ್ನದ ಮಾಸ್ಕ್ ಮೊರೆ ಹೋಗಿದ್ದಾರೆ.
ಹೌದು. ಪುಣೆ ವ್ಯಕ್ತಿಯ ಬಳಿಕ ಇದೀಗ ಒಡಿಶಾದ ಕತಕ್ ಮೂಲದ ಉದ್ಯಮಿ ಅಲೋಕ್ ಮೊಹಂತಿ 3.5 ಲಕ್ಷದ ಮಾಸ್ಕ್ ತಯಾರಿಸಿ ಧರಿಸುವ ಮೂಲಕ ಗಮನ ಸೆಳೆದಿದ್ದಾರೆ.ಸೂರತ್ ನ ಕೆಲ ಚಿನ್ನದ ವ್ಯಾಪಾರಿಗಳು ಕೂಡ ಸರಿಸುಮಾರು 4 ಲಕ್ಷ ಬೆಲೆ ಬಾಳುವ ವಜ್ರ ಹಾಗೂ ಚಿನ್ನ ಮಾಸ್ಕ್ ಗಳನ್ನು ತಯಾರಿಸಿದ್ದಾರೆ. ಕಟಕ್ ನ ಕೇಶರಪುರ ಪ್ರದೇಶದ ನಿವಾಸಿಯಾಗಿರುವ ಅಲೋಕ್ ಅವರು ಮುಂಬೈನ ಝಾವೇರಿ ಬಜಾರ್ ನಲ್ಲಿ ಚಿನ್ನದ ಮಾಸ್ಕ್ ಖರೀದಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅಲೋಕ್, ಕಳೆದ 30-40 ವರ್ಷಗಳಿಂದ ನಾನು ಮೈ ತುಂಬಾ ಒಡವೆಗಳನ್ನು ಧರಿಸುತ್ತಿದ್ದೇನೆ. ಚಿನ್ನ ಧರಿಸುವುದು ನನ್ನ ದೊಡ್ಡ ವೀಕ್ನೆಸ್. ಚಿನ್ನದ ಮಾಸ್ಕ್ ಧರಿಸಿದ್ದ ಪುಣೆ ವ್ಯಕ್ತಿಯನ್ನು ನೋಡಿ ನನಗೂ ಮಾಸ್ಕ್ ತಯಾರಿಸಿ ಧರಿಸಬೇಕೆಂಬ ಆಸೆ ಉಂಟಾಯಿತು. ಹೀಗಾಗಿ ಕೂಡಲೇ ನನಗೊಂದು ಮಾಸ್ಕ್ ಡಿಸೈನ್ ಮಾಡಿಕೊಡುವಂತೆ ಚಿನ್ನದ ವ್ಯಾಪಾರಿ ಬಳಿ ಹೇಳಿಕೊಂಡೆ ಎಂದು ತಿಳಿಸಿದ್ದಾರೆ.
ಇದು ಎನ್95 ಮಾಸ್ಕ್ ಆಗಿದೆ. ಈ ಮಾಸ್ಕ್ ನಲ್ಲಿ ಉಸಿರಾಟ ಮಾಡಲು ರಂಧ್ರಗಳನ್ನು ಮಾಡಲಾಗಿದ್ದು, 90ರಿಂದ 100 ಗ್ರಾಂ ಚಿನ್ನದ ಎಳೆಗಳನ್ನು ಬಳಸಲಾಗಿದೆ. ಇದನ್ನು ತಯಾರಿಸಲು 22 ದಿನ ಬೇಕಾಗಿದೆ. ಇದರ ಬೆಲೆ ಸುಮಾರು 3.5ಲಕ್ಷ ಆಗಿದೆ.