ಬೆಂಗಳೂರು: ಕೊರೊನಾ ಪರಿಸ್ಥಿತಿಯ ಲಾಭ ಪಡೆದು ಕಳ್ಳದಾರಿಯಲ್ಲಿ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸಿದೆ. ಇದು ಅತ್ಯಂತ ಕರಾಳ ಶಾಸನವಾಗಿದ್ದು, ಬಿಜೆಪಿಯ ಹಿಡನ್ ಅಜೆಂಡಾ ವಿರುದ್ಧ ಕಾಂಗ್ರೆಸ್ ಉಗ್ರ ಹೋರಾಟ ಮಾಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಸಾಮಾನ್ಯ ರೈತರಿಗೆ ವಿರೋಧಿಯಾದ ಕಾಯಿದೆ ಆಗಿದೆ. ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ತರುವುದಿಲ್ಲ ಎಂದು ಹೇಳಿದ್ದೆ. ಆದರೂ ಸಂಕಷ್ಟದ ಸಮಯದಲ್ಲೂ ಕಾಯಿದೆಗೆ ತಿದ್ದುಪಡಿ ತರಲಾಗಿದೆ ಎಂದು ಹರಿಹಾಯ್ದರು.
ಕೃಷಿ ಭೂಮಿ ಖರೀದಿಸಲು ಎಲ್ಲರಿಗೂ ಅವಕಾಶ ಕಲ್ಪಿಸಿದಂತಾಗಿದ್ದು, ರೈತರನ್ನು ನಾಶ ಮಾಡಲು ಹೊರಟಂತಾಗಿದೆ . ಈ ತಿದ್ದುಪಡಿಯಿಂದಾಗಿ ಬಡವರು, ಗೇಣಿದಾರರು ಬೀದಿ ಪಾಲಾಗುತ್ತಾರೆ. ರೈತ ಸಮುದಾಯ ನಾಶ ಮಾಡುವ ಹುನ್ನಾರ ಇದರಲ್ಲಿದೆ.ಕೃಷಿ ಜಮೀನು ಖರೀದಿಸಿ ರಿಯಲ್ ಎಸ್ಟೇಟ್ ಗೆ ಮಣೆ ಹಾಕಿಂದತಾಗಿದೆ. ಯಾರೂ ಕೃಷಿ ಮಾಡಲಿಲ್ಲ ಎಂದರೆ ಆಹಾರ ಉತ್ಪಾದನೆ ಹೇಗೆ ಸಾಧ್ಯವಾಗುತ್ತದೆ ಎಂದು ಛಾಟಿ ಬೀಸಿದರು.
ಸಿಎಂ ಯಡಿಯೂರಪ್ಪ ಹಸಿರುಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ರೈತರ ಕೃಷಿ ಭೂಮಿಯನ್ನು ಕಾರ್ಪೋರೇಟ್ ಗಳಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಯಡಿಯೂರಪ್ಪ ಸರ್ಕಾರಕ್ಕೆ ನಿಜವಾಗಿ ರೈತರ ಮೇಲೆ ಕಾಳಜಿ ಇದ್ದಿದ್ದರೆ, ಅಧಿವೇಶನ ಕರೆದು ಈ ಕುರಿತಂತೆ ಚರ್ಚೆ ನಡೆಸಿ, ಸದುದ್ದೇಶಗಳನ್ನು ವಿವರಿಸಬಹುದಿತ್ತು. ಆದರೆ, ಕೊರೊನಾ ಪರಿಸ್ಥಿತಿಯ ಲಾಭ ಪಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ಪ್ರತಿದಿನ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರುತ್ತದೆ. 75 ರಿಂದ 80 ಮಂದಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯವೇನಿತ್ತು ಎಂದು ಸಿದ್ದರಾಮಯ್ಯ ಕುಟುಕಿದರು.