ಉಡುಪಿ : ಜಿಲ್ಲೆಯಲ್ಲಿ ನವರಾತ್ರಿಯಿಂದ ದಿನ ಬಿಟ್ಟು ದಿನ ಮಳೆಯಾಗುತ್ತಿದೆ. ದೀಪಾವಳಿ ಸಂದರ್ಭದಲ್ಲೂ ಭಾರೀ ಮಳೆಯಾಗಿದೆ. ಯಾವ ವರ್ಷದಲ್ಲೂ ಕೂಡ ನವರಾತ್ರಿಯ ಆಸುಪಾಸಿನ ದಿನಗಳಲ್ಲಿ ಈ ಪ್ರಮಾಣದ ಮಳೆ ಬಿದ್ದ ಉದಾಹರಣೆ ಇಲ್ಲ. ಆದರೆ, ಈ ಬಾರಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಗೆ ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದೆ. ಇದರಿಂದಾಗಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದರೂ ಮಳೆ ಮಾತ್ರ ಮುಗಿದಿಲ್ಲ.
ಈ ಅಕಾಲಿಕ ಮಳೆಯಿಂದ ಭತ್ತ ಬೆಳೆದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಜೂನ್ ತಿಂಗಳಲ್ಲಿ ನಾಟಿ ಮಾಡಿದ್ದ ಭತ್ತದ ಪೈರು, ಈಗ ಕಟಾವಿಗೆ ಸಿದ್ಧವಾಗಿದೆ. ಆದರೆ, ಈಗ ಮಳೆ ಬಂದಿರುವುದರಿಂದಾಗಿ ಗದ್ದೆಗಳಲ್ಲಿ ನೀರು ನಿಂತಿದೆ. ಈ ಗದ್ದೆಗಳಲ್ಲಿ ಯಂತ್ರವನ್ನು ಬಳಸಿ ಕಟಾವು ಮಾಡುವುದು ಸಾಧ್ಯವೇ ಇಲ್ಲ. ಈಗಾಗಲೇ ಸಾಕಷ್ಟು ಕಟಾವು ಯಂತ್ರಗಳು ಜಿಲ್ಲೆಗೆ ಬಂದಿವೆ. ಆದರೆ, ಗದ್ದೆಗಳಲ್ಲಿ ನೀರು ಹರಿಯುತ್ತಿದ್ದು, ಮಳೆ ನಿಲ್ಲುವ ಸೂಚನೆಯೇ ಕಾಣುತ್ತಿಲ್ಲ. ಹಗಲೆಲ್ಲ ಬಿಸಿಲು ಬಂದಾಗ ರೈತರ ಮುಖದಲ್ಲಿ ಹರ್ಷ ಮೂಡಿದರೆ, ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆ ಸುರಿಯುತ್ತಿರುವುದರಿಂದಾಗಿ ರೈತರು ಬೇಸರಕ್ಕೊಳಗಾಗುತ್ತಾರೆ.
Laxmi News 24×7