ಬೆಂಗಳೂರು: “ಗುತ್ತಿಗೆದಾರರ ನೋವು ನಮಗೆ ಅರ್ಥವಾಗುತ್ತದೆ, ಆದರೆ ಯಾರೂ ಸಹ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕುಮಾರಪಾರ್ಕ್ ಸರ್ಕಾರಿ ನಿವಾಸದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಉಪ ಮುಖ್ಯಮಂತ್ರಿಗಳು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. “ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಬಜೆಟ್ ಮಿತಿಯನ್ನು ಮೀರಿ ಹೆಚ್ಚು ಕೆಲಸಗಳನ್ನು ಕೊಟ್ಟಿದ್ದರು. ಇದರಿಂದ ಸಮಸ್ಯೆ ಹೆಚ್ಚಾಗಿದೆ. ನಾನು ನನ್ನ ಕೈಲಾದಷ್ಟು ಬಿಲ್ ಪಾವತಿಸಿದ್ದೇನೆ. ಗುತ್ತಿಗೆದಾರರು ಎಂದರೆ ಇಲ್ಲಿ ಬಂದಿರುವವರು ಮಾತ್ರ ಅಲ್ಲ. ರಾಜ್ಯಾದ್ಯಂತ ಇದ್ದಾರೆ. ನಮ್ಮ ಇಲಾಖೆಯಲ್ಲಿ ಯೋಜನೆಗಳ ಬಿಲ್ ಬಾಕಿ ನೀಡಲು 50-100 ಕೋಟಿ ಇರುತ್ತದೆ. ಹಣಕಾಸು ಇಲಾಖೆ ನಮಗೆ ನೀಡುವ ಹಣವನ್ನು ನಿಮಗೆ ನೀಡುತ್ತೇವೆ. ನೀವೇ ಗುತ್ತಿಗೆದಾರರಿಗೆ ಹಂಚಿ ಎಂದು ನಾನು ಹೇಳಿದೆ” ಎಂದರು.
ಇದೇ ವಿಚಾರವಾಗಿ ಮುಂದುವರೆದು ಮಾತನಾಡಿದ ಡಿಸಿಎಂ, “ಉದಾಹರಣೆಗೆ ನನ್ನದೇ ನೀರಾವರಿ ಇಲಾಖೆಯಲ್ಲಿ ಸುಮಾರು 200 ಕೋಟಿಯಷ್ಟು ಅನುದಾನವಿದೆ. ಆದರೆ 17,000 ಕೋಟಿಯಷ್ಟು ಬಿಲ್ ಬಾಕಿ ಇದೆ. ನಮ್ಮ ಬಳಿ ಇರುವ 200 ಕೋಟಿ ರೂ. ಹಣದಲ್ಲಿ ಯಾರ ಬಾಕಿ ಬಿಲ್ಗಳನ್ನು, ಯಾವ ಲೆಕ್ಕದಲ್ಲಿ ತೀರಿಸಲಿ. ಬಾಕಿ ಬಿಲ್ಗಳನ್ನು ತೀರಿಸಿ ಎಂದು ಯಾವ ಅಧಿಕಾರಿಗೆ ಸೂಚನೆ ನೀಡಲಿ?” ಎಂದು ಹೇಳಿದರು.
ನೂತನ ವ್ಯವಸ್ಥೆ ತರಲು ಮುಂದಾಗಿದ್ದೇನೆ: “ಸಣ್ಣಪುಟ್ಟ ಗುತ್ತಿಗೆದಾರರಿಗೆ 15 ಲಕ್ಷ, 20 ಲಕ್ಷ, ಒಂದು ಕೋಟಿ ರೂ. ಬಿಲ್ ನೀಡಬೇಕಾಗಿದೆ. ದೊಡ್ಡ ದೊಡ್ಡ ಗುತ್ತಿಗೆದಾರರಿಗೆ 2,000 ಕೋಟಿ ರೂ.ಗಳಷ್ಟು ಬಿಲ್ ಬಾಕಿಯಿದೆ. ಇವರೆಲ್ಲಾ ಸಾಕಷ್ಟು ಒತ್ತಡ ತರುತ್ತಿದ್ದಾರೆ. ಎಲ್ಲರ ಬೇಡಿಕೆಗಳನ್ನು ಈಡೇರಿಸಲು ಆಗುತ್ತಿಲ್ಲ. ಆದ ಕಾರಣಕ್ಕೆ ನೂತನ ವ್ಯವಸ್ಥೆ ತರಲು ಹೊರಟಿದ್ದೇನೆ. ಇದರ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇನೆ” ಎಂದು ಡಿಸಿಎಂ ಭರವಸೆ ನೀಡಿದರು.